ಎಂ.ಪವನ್‌ಕುಮಾರ್ ಕೊಳ್ಳೇಗಾಲ
ಫಿಶ್, ಚಿಕನ್ ಕಬಾಬ್‌ಗೆ ಕೃತಕ ಕಲರ್ ಬಳಕೆ ನಿಷೇಧವಿದ್ದರೂ ಕೊಳ್ಳೇಗಾಲದಲ್ಲಿ ಎಗ್ಗಿಲ್ಲದೆ ಕೃತಕ ಕಲರ್‌ಗಳ ಬಳಕೆ ಆಗುತ್ತಿದೆ. ಸರ್ಕಾರದ ಆದೇಶವನ್ನು ಜಾರಿ ಮಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ವಿಫಲವಾಗಿದೆ.
ಪಟ್ಟಣದ ಬಸ್ ನಿಲ್ದಾಣ ಸಮೀಪದ ಫುಡ್ ಕೋರ್ಟ್‌ನಲ್ಲಿರುವ ಕಬಾಬ್ ಅಂಗಡಿಗಳು, ಹೋಟೆಲ್, ಕಬಾಬ್ ಮಾರಾಟದ ತಳ್ಳು ಗಾಡಿಗಳಲ್ಲಿ ಕೃತಕ ಬಣ್ಣದ ಕಲರಿಂಗ್ ಫಿಶ್ ಕಬಾಬ್ ದೊರೆಯುತ್ತಿದೆ. ರಾಜಾರೋಷವಾಗಿ ಫಿಶ್ ಹಾಗೂ ಚಿಕನ್ ಕಬಾಬ್‌ಗೆ ಕೃತಕ ಕಲರ್ ಹಾಕಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕಿದ್ದ ಅಧಿಕಾರಿಗಳು ಮೌನ ವಹಿಸಿದ್ದಾರೆ. ಈ ಹಿಂದೆ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ಈ ಎರಡು ಉತ್ಪನ್ನಗಳಲ್ಲಿ ಕೃತಕ ಬಣ್ಣ ಬಳಕೆ ನಿಷೇಧಿಸಲಾಗಿತ್ತು. ಈಗ ಚಿಕನ್ ಕಬಾಬ್, ಫಿಶ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಕ್ಕೆ ಸರ್ಕಾರ ನಿಷೇಧ ಹೇರಿದೆ. ಪಾನಿಪುರಿ, ಮಸಾಲೆಪುರಿಯಲ್ಲೂ ರಾಸಾಯನಿಕ ಮಿಶ್ರಿತ ಬಣ್ಣವಿರುವ ಆತಂಕಕಾರಿ ಸಂಗತಿ ಬಯಲಾಗಿದ್ದು ಸರ್ಕಾರ ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಕ್ರಮವಹಿಸಲು ಚಿಂತನೆ ನಡೆಸಿದೆ.
ಇವೆಲ್ಲ, ನಿಯಮಬಾಹಿರವಾಗಿ ನಡೆಯುತ್ತಿದ್ದರೂ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಕೃತಕ ಬಣ್ಣಗಳ ಬಳಸಿ ಆಕರ್ಷಕ ರೀತಿಯಲ್ಲಿ ಮಾರಾಟ ಮಾಡುವ ಚಿಕನ್ ಕಬಾಬ್, ಫಿಶ್‌ಗೆ ಬ್ರೇಕ್ ಬಿದ್ದಿಲ್ಲ. ಇದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವುದಾದರೂ ಜನಸಾಮಾನ್ಯರು ಹೋಟೆಲ್, ತಳ್ಳುಗಾಡಿಗಳಲ್ಲಿ ಮಾರಾಟ ಮಾಡುವ ಕೃತಕ ಬಣ್ಣಗಳ ಮಿಶ್ರಿತ ವೆಜ್ ಹಾಗೂ ನಾನ್‌ವೆಜ್ ಖಾದ್ಯಗಳನ್ನು ಸೇವಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಸಾರ್ವಜನಿಕವಾಗಿ ಕೃತಕ ಬಣ್ಣ ಬಳಸಿರುವ ಖಾದ್ಯಗಳ ಖರೀದಿ ಮಾಡದಂತೆ ಜಾಗೃತಿ ಮೂಡಿಸಬೇಕಿದೆ. ಕೃತಕ ಬಣ್ಣ ಬಳಕೆಯ ಕಬಾಬ್, ಫಿಶ್ ಮಾರಾಟ ಮಾಡುವವರಿಗೆ ದಂಡ ಹಾಕಿದರೆ ಇದಕ್ಕೆ ಕಡಿವಾಣ ಹಾಕಬಹುದಾಗಿದೆ.
ಸರ್ಕಾರ ಗೋಬಿ ಮಂಚೂರಿ, ಫಿಶ್, ಚಿಕನ್ ಕಬಾಬ್‌ಗೆ ಕೃತಕ ಬಣ್ಣ ಬಳಸುವುದು ಹಾಗೂ ಕಳಪೆ ಸಾಸ್‌ಗಳ ಮೇಲೆ ನಿಷೇಧ ಹೇರಿದೆ. ಈಗಾಗಲೇ ಕೃತಕ ಬಣ್ಣ ಬಳಸುವವರ ಮೇಲೆ ಕ್ರಮವಹಿಸಲಾಗುತ್ತಿದೆ. ಗುಂಡ್ಲುಪೇಟೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಕೊಳ್ಳೇಗಾಲದಲ್ಲೂ ರೈಡ್ ಮಾಡಲಾಗುವುದು.ಶ್ರೀನಿವಾಸ್, ಆಹಾರ ಸುರಕ್ಷತಾ ಅಧಿಕಾರಿ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ಪಿಶ್, ಚಿಕನ್ ಕಬಾಬ್‌ಗಳಿಗೆ ಕೃತಕ ಬಣ್ಣ ಬಳಸುದನ್ನು ಸರ್ಕಾರ ನಿಷೇಧ ಮಾಡಿದ್ದರೂ ಎಲ್ಲ ಕಬಾಬ್ ಅಂಗಡಿ, ಹೋಟೆಲ್‌ಗಳಲ್ಲಿ ಕೃತಕ ಬಣ್ಣಗಳ ಮಿಶ್ರಿತ ಕಬಾಬ್ ಮಾರಾಟ ಮಾಡಲಾಗುತ್ತಿದೆ. ಎಲ್ಲರೂ ಈ ಖಾದ್ಯಗಳನ್ನು ಬಳಸುತ್ತಾರೆ. ಮಕ್ಕಳ ಮೇಲೆ ಇದು ಬಹಳ ಪ್ರಭಾವ ಬೀರಲಿದೆ. ಆರೋಗ್ಯಕ್ಕೆ ಮಾರಕವಾಗಿರುವ ಈ ಕೃತಕ ಬಣ್ಣಗಳ ತಡೆಗೆ ಇಲಾಖೆ ಕ್ರಮವಹಿಸಬೇಕಿದೆ.ನಾರಾಯಣ್, ಕೊಳ್ಳೇಗಾಲ ನಿವಾಸಿ