ಕೊಳ್ಳೇಗಾಲ: ಕೆರೆ ಒತ್ತುವರಿ, ಬಸ್ ಸಮಸ್ಯೆ, ವಾಹನ ನಿಲುಗಡೆ ಶುಲ್ಕ ದುಬಾರಿ, ಯುಜಿಡಿ ಸಮಸ್ಯೆ, ವಿದ್ಯುತ್ ಟಿಸಿ ತೊಂದರೆ, ಕಾಲುವೆ ಹೂಳು ತೆರವು, ಹದಗಟ್ಟೆ ರಸ್ತೆಗಳು ಇನ್ನಿತರ ಹಲವು ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ವತಿಯಿಂದ ತಹಸೀಲ್ದಾರ್ ಮಂಜುಳಾ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ತಾಲೂಕು ಮಟ್ಟದ ರೈತರ ಕುಂದುಕೊರತೆ ನಿವಾರಣೆ ಸಭೆಯಲ್ಲಿ ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ತಳ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೈಕ್, ಕಾರುಗಳನ್ನು ನಿಲ್ಲಿಸಲು ಕೆಎಸ್‌ಆರ್‌ಟಿಸಿ ನಿಗದಿಪಡಿಸಿರುವ ಶುಲ್ಕ ದುಬಾರಿಯಾಗಿದೆ. ಗ್ರಾಮೀಣ ಭಾಗದ ಜನರು ಈ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ ಎಂದರು. ಈ ವೇಳೆ ಇದಕ್ಕೆ ಕೊಳ್ಳೇಗಾಲ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ವೆಂಕಟರಮಣ ಮಾತನಾಡಿ, ನಗರಸಭೆ ಹಾಗೂ ಕೆಎಸ್‌ಆರ್‌ಟಿಸಿ ಸೇರಿ ಟೆಂಡರ್ ಮಾಡಿದ್ದೇವೆ ಎಂದರು. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಶುಲ್ಕ ನಿಗದಿ ಪಡಿಸುವಂತೆ ತಹಸೀಲ್ದಾರ್ ಮಂಜುಳಾ ಸೂಚಿಸಿದರು.
ಬಸ್ ಕೊರತೆ ವಿರುದ್ಧ ಆಕ್ರೋಶ: ರೈತ ಮುಖಂಡ ಅಣಗಳ್ಳಿ ಬಸವರಾಜು, ಶಿವರಾಮ್, ವಿರೂಪಾಕ್ಷ ಮಾತನಾಡಿ, ಕೆಎಸ್‌ಆರ್‌ಟಿಸಿ ಗ್ರಾಮೀಣ ಭಾಗಕ್ಕೆ ಸಮಪ ಕರ್ವಾಗಿ ಬಸ್ ನಿಯೋಜನೆ ಮಾಡುತ್ತಿಲ್ಲ. ಮುಳ್ಳೂರು ಮಾರ್ಗ, ಸತ್ತೇಗಾಲದಿಂದ ಉಗನೀಯ ಪಾಳ್ಯ ಮಾರ್ಗವಾಗಿ ಸಂಚರಿಸುವ ಜನರಿಗೆ ಸಮಸ್ಯೆ ಆಗುತ್ತಿದೆ ಎಂದರು.
ಬಸ್‌ಗಳು ಗ್ರಾಮದೊಳಗೆ ಬಾರದೆ ಬೈಪಾಸ್ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಒಂದು ಬಸ್‌ನಲ್ಲಿ 120 ಜನರು ಸಂಚರಿಸುವ ಪರಿಸ್ಥಿತಿ ಇದೆ. ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಮಾರ್ಗ ನಾಮಫಲಕ ಅಳವಡಿಸಿಲ್ಲ, ಅಲ್ಲದೆ ಕೆಎಸ್‌ಆರ್‌ಟಿಸಿ ಖಾಸಗಿ ಬಸ್‌ಗಳ ಜತೆ ಹೊಂದಾಣಿಕೆ ಮಾಡಿಕೊಂಡು ಬಸ್‌ಗಳನ್ನು ಓಡಿಸುತ್ತಿದೆ ಎನ್ನುವ ಗುಮಾನಿ ಇದೆ. ಬೆಂಗಳೂರು, ಮಹದೇಶ್ವರ ಬೆಟ್ಟ, ಚಾಮರಾಜನಗರ, ಮೈಸೂರು ಜನರಿಗೆ ಹೋಗುವ ಜನರು ನಿತ್ಯ ನರಕಯಾತೆ ಅನುಭವಿಸುತ್ತಿದ್ದಾರೆ. ಬಸ್ ಕೊರತೆ ಇರುವುದರಿಂದ ಈ ಸಮಸ್ಯೆ ಆಗಿದೆ ಎಂದು ರೈತರು ಅಕ್ರೋಶ ಹೊರಹಾಕಿದರು. ನಂತರ, ತಹಸಿಲ್ದಾರ್ ಮಂಜುಳಾ ಪ್ರತಿಕ್ರಿಯಿಸಿ, ಹೆಚ್ಚುವರಿ ಬಸ್‌ಗಳನ್ನು ಒದಗಿಸಲು ಕೆಎಸ್‌ಆರ್‌ಟಿಸಿ ಡಿಸಿ ಅವರಿಗೆ ಪತ್ರ ಬರೆಯಬೇಕೆಂದು ಕೊಳ್ಳೇಗಾಲ ಡಿಪೋ ಮ್ಯಾನೇಜನರ್‌ಗೆ ತಿಳಿಸಿದರು. ಅಲ್ಲದೆ, ಸತ್ತೇಗಾಲ, ಪಾಳ್ಯ, ಮುಳ್ಳೂರು ಮಾರ್ಗಗಳಿಗೆ ಬಸ್ ನಿಯೋಜನೆ ಮಾಡಿ, ಹಾಗೇ ಬಸ್‌ಗಳು ನಿಗದಿಪಡಿಸಿದ ನಿಲುಗಡೆ ಸ್ಥಳದಲ್ಲಿ ಬಸ್ ನಿಲ್ಲಬೇಕೆಂದು ಸೂಚನೆ ನೀಡಿದರು.
ವಿದ್ಯುತ್ ಸಂಪರ್ಕ ವಿಳಂಬ: ರೈತ ಮುಖಂಡ ವಿರೂಪಾಕ್ಷ ಮಾತನಾಡಿ, ಮುಳ್ಳೂರು ಗ್ರಾಮದಲ್ಲಿ ಟಿಸಿ ಅಳವಡಿಸಿ 6 ವರ್ಷವಾದರೂ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ದೂರಿದರು. ಅಣಗಳ್ಳಿ ಬಸವರಾಜು ಮಾತನಾಡಿ, ಜೋತು ಬಿದ್ದ ತಂತಿಗಳ ದುರಸ್ತಿ ಆಗಿಲ್ಲ. ವಿದ್ಯುತ್ ತಂತಿ ತಗುಲಿ ನಷ್ಟವಾದ ಬೆಳೆಗೆ ಪರಿಹಾರವನ್ನೂ ನೀಡಿಲ್ಲ. ನಿಮ್ಮಿಂದ ನಮಗೆ ನ್ಯಾಯ ಸಿಗುವುದಿಲ್ಲ. ಸೆಸ್ಕ್ ಇಇ ಕರೆಯಿಸಿ ಎಂದು ಸೆಸ್ಕ್ ಎಇಇ ರಾಜು ಅವರಿಗೆ ರೈತರು ತರಾಟೆಗೆ ತೆಗೆದುಕೊಂಡರು.
15 ಲಕ್ಷ ರೂ. ಪರಿಹಾರ ನೀಡಿ: ರೈತ ಮುಖಂಡ ಶೈಲೆಂದ್ರ ಮಾತನಾಡಿ, ಇತ್ತೀಚೆಗೆ ಕುಂತೂರು ಬಳಿ ಬೈಕ್ ಸವಾರ ರೇವಣ್ಣ ಎಂಬುವವರಿಗೆ ನವೀಲು ಅಡ್ಡ ನುಗ್ಗಿದ ಪರಿಣಾಮ ರೇವಣ್ಣ ಸ್ಥಳದಲ್ಲಿಯೇ ತೀವ್ರ ಪೆಟ್ಟಾಗಿ ಮೃತಪಟ್ಟ. ನವೀಲು ಕೂಡ ಸತ್ತಿದೆ. ಒಂದು ವೇಳೆ ರೇವಣ್ಣ ಬದುಕಿ ನವೀಲು ಸತ್ತಿದ್ದರೆ ಆತನ ಮೇಲೆ ಕ್ರಮ ತೆಗೆದುಕೊಂಡು ಜೈಲಿಗೆ ಹಾಕಲಾಗುತ್ತಿತ್ತು. ನವೀಲಿನಿಂದ ಸಾವಿಗೀಡಾದ ವ್ಯಕ್ತಿಗೆ 15 ಲಕ್ಷ ರೂ. ಪರಿಹಾರ ನೀಡಿ ಒತ್ತಾಯಿಸಿದರು.ಆರ್‌ಎಫ್‌ಒ ಭರತ್ ಮಾತನಾಡಿ, ಇದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಾಗಲೇ ವರದಿ ನೀಡಲಾಗಿದೆ ಎಂದರು. ಹಂದಿಗಳು ಬೆಳೆ ಹಾನಿ ಮಾಡಿದರು ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದರು.
ಸರ್ಕಾರಿ ಆಸ್ತಿ ಉಳಿಸಿಕೊಳ್ಳುವಲ್ಲಿ ವಿಫಲ: ನಗರಸಭೆ ವ್ಯಾಪ್ತಿಯ ಸರ್ಕಾರಿ ಕಚೇರಿಗಳ ಸ್ಥಳದ ಆಸ್ತಿ ನಗರಸಭೆಯ ಕಮಿಷನರ್ ಅವರ ಎಸ್‌ಎಸ್ ಪುಸ್ತಕದಲ್ಲಿ ನಮೂದಾಗಿರಬೇಕು. ಆದರೆ, ಈ ಕೆಲಸವಾಗಿಲ್ಲ. ಸರ್ಕಾರ ಆಸ್ತಿಯನ್ನು ಉಳಿಸಿಕೊಳ್ಳಲು ಇವರಿಗೆ ಸಾಧ್ಯವಾಗುತ್ತಿಲ್ಲ. ಇನ್ಮುಂದಾದರೂ ಸರ್ಕಾರಿ ಆಸ್ತಿಯನ್ನು ಉಳಿಸಿಕೊಳ್ಳುವಂತೆ ರೈತ ಮುಖಂಡ ದಶರಥ್ ಆಗ್ರಹಿಸಿದರು. ಹಾಗೆಯೇ, ಚಿಕ್ಕರಂಗನಾಥ ಕೆರೆ ಜಾಗದದಲ್ಲಿ ನಿರ್ಮಿಸಿರುವ ಮಾಜಿ ಶಾಸಕ ದಿ.ನಾಗಪ್ಪ ಅವರ ಕಟ್ಟಡವನ್ನು ತೆರವುಗೊಳಿಸುವಂತೆ ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ ತರಾಟೆಗೆ ತೆಗೆದುಕೊಂಡಲ್ಲದೆ, ನಗರಸಭೆ ಆಯುಕ್ತರಿಗೆ ಈ ಕಟ್ಟಡದ ಇ-ಸ್ವತ್ತನ್ನು ವಜಾ ಮಾಡುವಂತೆ ಒತ್ತಾಯಿಸಿದರು. ನಗರಸಭೆ ಪೌರಾಯುಕ್ತ ಎ.ರಮೇಶ್, ತಾಪಂ ಇಒ ಶ್ರೀನಿವಾಸ್, ಸಿಪಿಐ ಶಿವಮಾದಯ್ಯ, ಕಬಿನಿ ಎಇಇ ರಾಮಕೃಷ್ಣ ಇದ್ದರು.