ಜಿಲ್ಲೆ

ಚಿನ್ನ ಬಿಡಿಸಲು ಬಂದಿದ್ದವನ ಮೇಲೆ ಹಲ್ಲೆ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಗಿರವಿ ಇಟ್ಟಿದ್ದ ಚಿನ್ನ ಬಿಡಿಸಲು ಬಂದಿದ್ದವನಿಗೆ ಗಿರವಿಯಿಟ್ಟುಕೊಂಡಿದ್ದ ವ್ಯಕ್ತಿ ಹಾಗೂ ಆತನ ಪುತ್ರ ಹಲ್ಲೆ ನಡೆಸಿರುವ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ನಿವಾಸಿ ಗೋಪಾಲ, ಈತನ ಪುತ್ರ ರವಿ ಆರೋಪಿಗಳಾಗಿದ್ದಾರೆ. ಶ್ರೀ ಚೌಡೇಶ್ವರಿ ಗುಡಿ ಬೀದಿಯ ನಾಗರಾಜು, ಲಕ್ಷ್ಮೀ, ಈಶ್ವರ್, ಅನ್ನಪೂರ್ಣೇಶ್ವರಿ ಹಲ್ಲೆಗೊಳಗಾದವರು. ಗಾಯಾಳು ನಾಗರಾಜು ಚೌಡೇಶ್ವರಿ ಗುಡಿ ಬೀದಿಯಲ್ಲಿ ಕುಟುಂಬ ವಾಸವಿದ್ದು. ಇವರು ಕುಸುರಿ ಕೆಲಸ ಮಾಡುವಾಗ 2 ವರ್ಷದ ಹಿಂದೆ ಗಿರವಿ ಅಂಗಡಿ ಮಾಲೀಕ ಗೋಪಾಲ ಪರಿಚಯವಾಗಿದ್ದ. ನಾಗರಾಜು ಸುಮಾರು 250 ರಿಂದ 300 ಗ್ರಾಂ ಚಿನ್ನವನ್ನು ಗೋಪಾಲ ಅವರಿಗೆ ಗಿರವಿಯಿಟ್ಟು 8 ಲಕ್ಷದವರೆಗೂ ಹಣ ಪಡೆದಿದ್ದಾರೆ.

ಒಂದೂವರೆ ವರ್ಷದ ಹಿಂದೆ ಗೋಪಾಲ್ ತನ್ನ ಮಗ ರವಿಗೆ ನಾಗರಾಜು ಮಗಳಾದ ಅನ್ನಪೂರ್ಣೇಶ್ವರಿಯನ್ನು ಮದುವೆ ಮಾಡಿಕೊಡು ಎಂದು ಕೇಳಿದ್ದಾನೆ. ಎರಡು ಕುಟುಂಬ ಜಾತಿ ಬೇರೆಯಾದ ಕಾರಣಕ್ಕೆ ನಾಗರಾಜು ತಿರಸ್ಕರಿಸಿದ್ದರು. ಈ ವಿಚಾರಕ್ಕೆ ಗೋಪಾಲ ಮತ್ತು ನಾಗರಾಜು ನಡುವೆ ಮನಸ್ತಾಪ ಬೆಳೆದಿದೆ. ಈ ನಡುವೆ ನಾಗರಾಜು ಅವರ ಮಗ ಈಶ್ವರ್ ಜೂ.24 ರಂದು ಗೋಪಾಲ ಅವರ ಬಳಿ ಗಿರಿವಿ ಇಟ್ಟಿದ್ದ ಚಿನ್ನವನ್ನು ಬಿಡಿಸಲು ಹೋಗಿದ್ದ ವೇಳೆ ಗೋಪಾಲ್ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಮನೆಯ ಹತ್ತಿರ ಹೋಗಿ ಗೋಪಾಲ್, ರವಿ ಹಾಗೂ ಆಟೋ ಡ್ರೈವರ್ ಒಬ್ಬ ಈಶ್ವರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಬಂದ ನಾಗರಾಜು, ಲಕ್ಷ್ಮೀ, ಈಶ್ವರ್, ಮೇಲೆ ರವಿ, ಗೋಪಾಲ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗಾಯಾಳು ನಾಗರಾಜು ಪಟ್ಟಣ ಪೊಲೀಸರಿಗೆ ಸೋಮವಾರ ದೂರು ನೀಡಿದ್ದು, ಪೊಲೀಸರು ಆರೋಪಿಗಳ ಪತ್ತೆ ಮುಂದಾಗಿದ್ದಾರೆ.