ಜಿಲ್ಲೆ

ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಮೃತ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ; ತಾಲೂಕಿನ ಲೊಕ್ಕನಹಳ್ಳಿ ಕ್ರಾಸ್ ಬಳಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ಆಸ್ಪತ್ರೆ ಸೇರಿದ್ದ ಇಬ್ಬರು ಬೈಕ್ ಸವಾರರಲ್ಲಿ ಒಬ್ಬ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾನೆ.

ಮಧುವನಹಳ್ಳಿ ಗ್ರಾಮದ ದಿ.ಸಿದ್ದಶೆಟ್ಟಿ ಅವರ ಪುತ್ರ ಕುಮಾರ (30) ಮೃತಪಟ್ಟವ. ಮಾಂಬಳ್ಳಿ ಗ್ರಾಮದ ಹೊಂಬಾಳಯ್ಯ ಅವರ ಪುತ್ರ ಬಸವರಾಜು ಅಪಘಾತ ಮಾಡಿದ್ದು, ಘಟನೆ ಬಳಿಕ ಪರಾರಿಯಾಗಿದ್ದಾನೆ. ಮೃತ ಕುಮಾರ್ ತನ್ನ ಸ್ನೇಹಿತ ಸಿದ್ದಶೆಟ್ಟಿ ಜತೆ ಜಮೀನಿನ ಕಡೆ ತೆರಳುತ್ತಿದ್ದ ವೇಳೆ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ಲೊಕ್ಕನಹಳ್ಳಿ ಕ್ರಾಸ್ ಬಳಿ ಹಿಂಬದಿಯಿಂದ ಬಂದ ಟಾಟಾ ಸುಮೊಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಕುಮಾರ್ ತಲೆ, ಮುಖದ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಇನ್ನು ಹಿಂಬದಿ ಸವಾರ ಸಿದ್ದಪ ಕೂಡ ಗಾಯಗೊಂಡಿದ್ದ. ನಂತರ, ಗಾಯಾಳುಗಳನ್ನು ಸ್ಥಳೀಯರು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಕುಮಾರನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಸಂಬಂಧ ಮೃತನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗನ ಸಾವಿಗೆ ಕಾರು ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆ ಚಾಲನೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.