ಕೊಳ್ಳೇಗಾಲ: ತಾಲೂಕಿನ ಗುಂಡಾಲ್ ಅರಣ್ಯದಂಚಿನ ಗ್ರಾಮಗಳಲ್ಲಿ ಮೇಕೆಗಳ ಮೇಲೆ ದಾಳಿ ಮಾಡಿ ಆತಂಕ ಮೂಡಿಸಿದ್ದ ಚಿರತೆ ಸೆರೆಗೆ ಕಳೆದ ಎರಡು ವಾರಗಳಿಂದ ಅರಣ್ಯ ಇಲಾಖೆ ಸತತ ಕಾರ್ಯಾಚರಣೆ ಮಾಡುತ್ತಿದೆ. ಆದರೂ ಚಿರತೆ ಬೋನಿಗೆ ಬೀಳದಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಚಿರತೆ ಗೋಪಿನಾಥಂ ಅರಣ್ಯ ಪ್ರದೇಶದಿಂದ ಗುಂಡಾಲ್ ಕಾಡಿಗೆ ವಲಸೆ ಬಂದಿದೆ. ಚಿರತೆ ಕತ್ತಿನಲ್ಲಿ ರೇಡಿಯೋ ಕಾಲರ್ ಇದೆ. ಕಳೆದ 15 ದಿನಗಳ ಹಿಂದೆ ಗುಂಡಾಲ್ ಕಾಡಂಚಿನ ಗ್ರಾಮಗಳಲ್ಲಿ ಪ್ರತ್ಯಕ್ಷವಾಗಿ ಮೇಕೆ, ಕೋಳಿಗಳ ಮೇಲೆ ದಾಳಿ ಮಾಡಿದೆ. ಇದ್ದರಿಂದ ಅಲ್ಲಿನ ಜನರು ಭಯ ಭೀತರಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್ ದೀಪಾ ಕಂಟ್ರಾಕ್ಟರ್ ಮಾರ್ಗದರ್ಶನದಲ್ಲಿ ಎಸಿಎಫ್ ನಂದಗೋಪಾಲ್, ಆರ್‌ಎಫ್‌ಒ ವಾಸು ಚಿರತೆ ಸೆರೆಗೆ ಬಲೆ ಬೀಸಿದ್ದಾರೆ.
ಜೂ.5 ರಂದು ಆರಂಭಗೊಂಡ ಕಾರ್ಯಾಚರಣೆ ನಿರಂತರವಾಗಿ ಮುಂದುವರಿದಿದೆ. ಮೈಸೂರಿನ ಚಿರತೆ ಟಾಸ್ಕ್‌ಫೋರ್ಸ್ ತಂಡ ಶೋಧ ಕಾರ್ಯ ನಡೆಸುತ್ತಿದೆ. 35ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಒಂದು ತುಮಕೂರು ಬೋನು ಹಾಗೂ 5 ಸಾಮಾನ್ಯ ಬೋನು, ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಚಿರತೆ ಕತ್ತಿನಲ್ಲಿರುವ ರೇಡಿಯೋ ಕಾಲರ್ ಮೂಲಕ ಅದರ ಚಲನವಲನ ಮೇಲೆ ನಿಗಾ ವಹಿಸಿದ್ದಾರೆ. ಆದರೆ, ಈ ಚಿರತೆ ಮಾತ್ರ ಇತ್ತ ಕಾಡಿಗೂ ಹೋಗುತ್ತಿಲ್ಲ, ಬೋನಿಗೂ ಬೀಳುತ್ತಿಲ್ಲ. ಇದು ಅರಣ್ಯ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.
ಸದ್ಯ ರೇಡಿಯೋ ಕಾಲರ್ ಮಾಹಿತಿಯಲ್ಲಿ ಗುಂಡಾಲ್ ಬಳಿಯಿರುವ ಸೋಲಾರ್ ಪ್ರದೇಶದಲ್ಲಿ ಚಿರತೆ ವಾಸವಿದೆ ಎಂಬುದು ತಿಳಿದುಬಂದಿದೆ. ಅದಕ್ಕಾಗಿ ಈ ಸ್ಥಳದ ಸಮೀಪದಲ್ಲೇ ಬೋನು ಇಡಲಾಗಿದೆ. ಬೋನು ಬಳಿ ಬಂದರೂ ಒಳಗೆ ಹೋಗುತ್ತಿಲ್ಲ ಎಂದು ಅರಣ್ಯಾಧಿಕಾರಿಗಳಿಂದ ತಿಳಿದು ಬಂದಿದೆ. ಒಂದೆಡೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ. ಮತ್ತೊಂದೆಡೆ ಚಿರತೆ ಸೆರೆ ಆಗದಿರುವುದರಿಂದ ಈ ಭಾಗದ ಜನರಲ್ಲಿ ಆತಂಕ ಆವರಿಸಿದೆ.