ಜಿಲ್ಲೆ

ಕಣ್ಣಿನ ಉಚಿತ ತಪಾಸಣಾ ಶಿಬಿರ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಸಮುದಾಯ ಭವನದಲ್ಲಿ ಭಾನುವಾರ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಬಾಬು, ಲಯನ್ಸ್ ಸಂಸ್ಥೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ ಸುಮಾರು 225 ಕಣ್ಣಿನ ತಪಾಸಣಾ ಶಿಬಿರ ನಡೆಸಿದೆ. ಲಕ್ಷಾಂತರ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಇವತ್ತಿನ ಶಿಬಿರದಲ್ಲಿ 73 ಜನರು ಚಿಕಿತ್ಸೆಗೆ ಒಳಪಟ್ಟಿದ್ದು, ಅದರಲ್ಲಿ 43 ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಇವರನ್ನು ಬೆಂಗಳೂರಿನ ಲಯನ್ ವೆಸ್ಟ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಇಂದ್ರೇಶ್, ಮಾಜಿ ಅಧ್ಯಕ್ಷ ನಾಗರಾಜು ಕೊಂಗರಹಳ್ಳಿ, ಆನಂದ್ ರಾಮಶೆಟ್ಟಿ, ಚಿಕ್ಕಬಸವಯ್ಯ, ವೈದ್ಯೆ ಡಾ.ಮರಿಯಾ ಹಾಗೂ ಸಿಬ್ಬಂದಿ ಇದ್ದರು.