ಜಿಲ್ಲೆ

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ 7 ಜನರಿಗೆ ಗಾಯ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ; ಪಟ್ಟಣದ ಹೊಸ ಹಂಪಾಪುರ ಮುಖ್ಯ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಮಂಗಳವಾರ ಮುಂಜಾನೆ ಕಾರು ಡಿಕ್ಕಿ ಹೊಡೆದ ಪರಿಣಾಮ 7 ಜನರು ಗಾಯಗೊಂಡಿದ್ದಾರೆ.

ಆಂಧ್ರದ ಕಾಕಾನಾಡು ಜಿಲ್ಲೆಯ ತುರ್ಪ ಗೋದಾವರಿಯ ಚಾಲಕ ರಾಜು(24), ಅಶೋಕ್ (20) ರಾಮಚಂದ್ರ(74), ಗಾಯತ್ರಿ(15), ದೇವಿ(33), ದೀಪಕ್ (10), ಮೋಹಿನಿ (30) ಗಾಯಗೊಂಡವರು. ತಮಿಳುನಾಡಿನ ಕೊಯಮತ್ತೂರಿನಿಂದ ಮೈಸೂರು ಕಡೆಗೆ ಮುಳ್ಳೂರು-ಕಲಿಯೂರು ರಸ್ತೆ ಮೂಲಕ ತೆರಳುತ್ತಿದ್ದರು. ಬೆಳಗ್ಗೆ 4.30ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೊಸ ಹಂಪಾಪುರದ ಮುಖ್ಯ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ 2 ವಿದ್ಯುತ್ ಕಂಬಗಳು ಮುರಿದು ಹೋಗಿವೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸದ್ಯ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಯ ಪೋಲಿಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಡಿಕ್ಕಿ ಹೊಡೆದು ಮುರಿದಿರುವ ವಿದ್ಯುತ್ ಕಂಬವನ್ನು ಸೆಸ್ಕ್ ಸಿಬ್ಬಂದಿ ಬದಲಾಯಿಸಿದ್ದಾರೆ.