ಕೊಳ್ಳೇಗಾಲ: ರಾಸಾಯನಿಕ ಗೊಬ್ಬರ ಬಳಕೆಯನ್ನು ಬಿಟ್ಟು ಸಾವಯವ ಕೃಷಿಗೆ ಒತ್ತು ನೀಡಿದರೆ ಭೂಮಿಯ ಆರೋಗ್ಯ ಕಾಪಡುವುದರ ಜತೆಗೆ ಉತಮ್ಮ ಆದಾಯ ಗಳಿಕೆ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ರೈತ ಚೆನ್ನಬಸವ ಆರಾಧ್ಯ ಉದಾಹರಣೆಯಾಗಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಕೆಂಪನಪಾಳ್ಯ ಗ್ರಾಮದ ನಿವಾಸಿ ಚೆನ್ನಬಸವ ಆರಾಧ್ಯ ಅವರು ಸಾವಯವ ಕೃಷಿ ಮಾಡುವ ಮೂಲಕ ತಮ್ಮ 70ರ ಇಳಿ ವಯಸ್ಸಿನಲ್ಲೂ ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ. ಸುಮಾರು 50 ವರ್ಷಗಳಿಂದ ಕೃಷಿಯಲ್ಲಿ ಅನುಭವ ಹೊಂದಿರುವ ಇವರು ವ್ಯವಸಾಯವನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಕುಟುಂಬಸ್ಥರು ನೆರವಾಗಿ ನಿಂತಿದ್ದಾರೆ.
ಆರಾಧ್ಯ ಅವರು ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ನಾಲ್ಕುವರೆ ಎಕರೆ ಭೂಮಿಯಲ್ಲಿ ಕೃಷಿ ಮಾಡಿ ಅತ್ಯುತ್ತಮ ಬೆಳೆ ಬೆಳೆದಿದ್ದಾರೆ. 2ಎಕರೆಯಲ್ಲಿ ಪಚ್ಚ ಬಾಳೆ, ಒಂದು ಕಾಲು ಎಕರೆಯಲ್ಲಿ ಜೋಳ, ಶುಂಠಿ ಹಾಕಿದ್ದಾರೆ. ಒಂದು ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಹಿಂದಿನಿಂದಲೂ ಸಾವಯವ ಕೃಷಿಗೆ ಒತ್ತು ಕೊಟ್ಟು ಬಂದಿರುವ ಚೆನ್ನಬಸವ ಆರಾಧ್ಯ ಅವರ ಕುಟುಂಬ ಪ್ರಸ್ತುತ ಒಂದೂಕಾಲು ಎಕರೆ ಭೂಮಿಗೆ ಸಂಪೂರ್ಣವಾಗಿ ದನದಗೊಬ್ಬರ, ಬೇವಿನ ಎಣ್ಣೆ, ಗೊಬ್ಬರ ಸೊಪ್ಪು ಬಳಸಿ ಭೂಮಿ ಫಲವತ್ತತೆ ಹೆಚ್ಚಿಸಿಕೊಂಡು ಮಿಶ್ರ ಕೃಷಿ ಮಾಡುತ್ತಿದ್ದಾರೆ.
ಆರಾಧ್ಯ ಅವರ ಜಮೀನಿನಲ್ಲಿ ಕಾಫಿ ಗಿಡಗಳು, ಕಿತ್ತಳೆ, ಸಪೋಟ, ಮೂಸಂಬಿ, 30 ತೆಂಗಿನ ಸಸಿಗಳು, 200 ತೆಂಗಿನ ಮರಗಳು, ಅಡಕೆ ಮರಗಳು, ದ್ರಾಕ್ಷಿ, ಈರಳೆಕಾಯಿ, ಮೆಣಸು, ರಾಮಫಲ, ಸೀತಾ ಫಲ, ಬೆಟ್ಟದ ನಲ್ಲಿಕಾಯಿ ಮರ, ಹಲಸು, ಮಾವು ಬೆಳೆದಿದ್ದಾರೆ. ಇನ್ನು ಅಗತ್ಯಕ್ಕೆ ತಕ್ಕಂತೆ ಸೊಪ್ಪು ಹಾಗೂ ತರಕಾರಿಗಳನ್ನು ಬೆಳೆದು ಸಮಗ್ರ ಬೇಸಾಯಕ್ಕೆ ಮಾಡುತ್ತಿದ್ದಾರೆ. ಇದರಿಂದ ಭೂಮಿ ಆರೋಗ್ಯದ ಜತೆ ರಾಸಾಯನಿಕ ಮುಕ್ತ ತರಕಾರಿ ಸೇವಿಸುವ ಮೂಲಕ ತಮ್ಮ ಕುಟುಂಬಸ್ಥರ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಹೆಚ್ಚಿನ ಲಾಭ ಪಡೆದು ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.
ರಾಸಾಯನಿಕ ತೊರೆಯಬೇಕು:
ಪ್ರಸ್ತುತ ದಿನಗಳಲ್ಲಿ ಕೃಷಿ ಸಂಪೂರ್ಣವಾಗಿ ಕಮರ್ಷಿಯಲ್ ಆಗಿಬಿಟ್ಟಿದೆ. ಹೆಚ್ಚು ರಾಸಾಯನಿಕ ಗೊಬ್ಬರ ಹಾಕಿ ಭೂಮಿ ಸತ್ವ ಕಳೆದು ಕೊಳ್ಳುತ್ತಿದೆ. ಇದರಿಂದ ಕೃಷಿ ಪದಾರ್ಥಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ರಾಸಾಯನಿಕ ಗೊಬ್ಬರಕ್ಕೆ ಹೊಂದಿಕೊಂಡಿರುವ ಭೂಮಿಯನ್ನು ಸಾವಯವ ಕೃಷಿಗೆ ಪರಿವರ್ತಿಸಲು ರೈತರು ಶ್ರಮಿಸಬೇಕಿದೆ. ಇದು ಕಷ್ಟವೇ ಆದರೂ ಇದ್ದರಿಂದ ದೀರ್ಘ ಆರೋಗ್ಯ, ಸುಖ, ನೆಮ್ಮದಿ, ತೃಪ್ತಿ ಸಿಗುತ್ತದೆ. ಪ್ರಸ್ತುತ ದಿನಗಳಲ್ಲಿ ರೈತರು ಹೆಚ್ಚು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ, ನಿರೀಕ್ಷೆಯಂತೆಯೇ ಈ ತಂತ್ರಗಾರಿಕೆ ಕೈ ಹಿಡಿಯುವುದಿಲ್ಲ. ಇದ್ದರಿಂದ ಕೈ ಸುಟ್ಟು ಕೊಳ್ಳುವುದೇ ಹೆಚ್ಚು. ಆದರೆ, ಚೆನ್ನಬಸವ ಆರಾಧ್ಯ ಮಿಶ್ರ ಬೆಳೆಗೆ ಒತ್ತು ನೀಡಿದ್ದಾರೆ. ಈ ಹಿನ್ನೆಲೆ ಜಮೀನನಲ್ಲಿ ಬೆಳೆದ ಒಂದು ಬೆಳೆಯಲ್ಲಿ ನಷ್ಟವಾದರೂ ಮತ್ತೊಂದು ಬೆಳೆಯಿಂದ ಲಾಭ ದೊರೆಯುತ್ತದೆ. ಹಾಗಾಗಿ, ಇದರಿಂದ ನಷ್ಟ ಸರಿದೋಗಿಸಬಹುದಾಗಿದೆ.
ಕೈ ಹಿಡಿದ ಕಲ್ಪವೃಲ್ಷ:
ಜಮೀನಿನಲ್ಲಿ 200 ಫಲ ಕೊಡುವ ತೆಂಗಿನ ಮರಗಳಿವರ. ಎರಡು ತಿಂಗಳಿಗೊಮ್ಮೆ ಬಿಡುವ ಎಳನೀರಿನಿಂದ ಲಕ್ಷಾಂತರ ರೂ.ಲಾಭವಿದೆ. ಅಲ್ಲದೆ, ತೆಂಗಿನಮರಕ್ಕೆ ಮೆಣಸು ಬಳ್ಳಿಯನ್ನು ಹಬ್ಬಿಸಿ ಪೋಷಣೆ ಮಾಡಲಾಗುತ್ತಿದೆ. ಸಾಂಬಾರ ಪದಾರ್ಥಕ್ಕೆ ಬೇಡಿಕೆ ಇರುವುದ್ದರಿಂದ 1 ಕೆಜಿಗೆ 400 ರಂತೆ ಮೆಣಸು ಮಾರಾಟ ಮಾಡಿ ಲಾಭಗಳಿಸಲಾಗುತ್ತಿದ್ದಾರೆ.
ಸಾವಯವ ಕೃಷಿ ತಂದ ತೃಪ್ತಿ: ತಂದೆ ಕಾಲದಿಂದಲೂ ಸಾವಯವ ಕೃಷಿ ಮಾಡುತ್ತಿದ್ದಾರೆ. ರಾಸಾಯನಿಕ ಮುಕ್ತ ಕೃಷಿಯಿಂದ ಬೆಳೆದ ಆಹಾರ ಪದಾರ್ಥಗಳು ಮನುಷ್ಯನ ಆರೋಗ್ಯವನ್ನು ಸಮೃದ್ಧಿಗೊಳಿಸುತ್ತದೆ ಎಂದು ತಿಳಿದಿರುವ ಇವರು ಸಾವಯವ ಮಾದರಿಯಲ್ಲಿ ಜೋಳ, ಶುಂಠಿ, ಹಣ್ಣು, ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ. ಸಾವಯವ ಕೃಷಿಯಿಂದ ಮಾತ್ರ ಸಮಾಜಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂಬುದು ಆರಾಧ್ಯ ಅವರ ಕಳಕಳಿಯಾಗಿದೆ.
ನನ್ನ ತಂದೆ ಕಾಲದಿಂದಲೂ ಸಾವಯವ ಕೃಷಿ ಮಾಡುತ್ತಿದ್ದೇವೆ. ಸಾವಯವ ಕೃಷಿ ನಮಗೆ ಆರೊಗ್ಯದ ಜತೆ ನೆಮ್ಮದಿ ನೀಡಿದೆ. ರಾಸಾಯನಿಕ ಕೃಷಿಯಿಂದ ಭೂಮಿ ತನ್ನ ಸತ್ವವನ್ನೇ ಕಳೆದುಕೊಳ್ಳುತ್ತಿದೆ. ಜನರು ಎಚ್ಚೆತ್ತು ಸಾಧ್ಯವಾದಷ್ಟು ಸಾವಯವ ಕೃಷಿ ಮಾಡಬೇಕು. ಇದ್ದರಿಂದ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯ.ಚೆನ್ನಬಸವ ಆರಾಧ್ಯ, ಮಾದರಿ ರೈತ, ಕೊಳ್ಳೇಗಾಲ.