ಜಿಲ್ಲೆ

ಇಷ್ಟಾರ್ಥ ಈಡೇರಿಸುವ ವೀರಭದ್ರೇಶ್ವರ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಭಕ್ತಿ, ಭಾವದಿಂದ ಶಿರ ಬಾಗಿ ನಮಿಸಿದರೆ ಇಷ್ಟಾರ್ಥ ಸಿದ್ಧಿಗೊಳ್ಳುತ್ತದೆ. ಈ ಸನ್ನಿಧಿಯಲ್ಲಿ ನೀಡುವ ಚಟ್ನಿ, ಅನ್ನದ ಪ್ರಸಾದ ಸೇವಿಸಿದರೆ ಆರೋಗ್ಯ ವೃದ್ಧಿಗೊಳ್ಳುತ್ತದೆ ಎಂಬುದು ಭಕ್ತರ ನಂಬಿಕೆ.

ತಾಲೂಕಿನ ಉಗನೀಯ ಗ್ರಾಮದಲ್ಲಿರುವ ಹೊಸವಾಡಿ ವೀರಭದ್ರೇಶ್ವರ ಸನ್ನಿಧಿಯ ವಿಶೇಷ ಇದಾಗಿದೆ. ಕೊಳ್ಳೇಗಾಲ ಪಟ್ಟಣದಿಂದ 10 ಕಿಲೋಮೀಟರ್ ದೂರದಲ್ಲಿ ಈ ಪುರಾಣ ಪ್ರಸಿದ್ಧ ದೇವಾಲಯವನ್ನು ಕಾಣಬಹುದಾಗಿದೆ. ಈ ದೇವಾಲಯಕ್ಕೆ 724 ವರ್ಷಗಳ ಇತಿಹಾಸವಿದ್ದು, ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ.

ದೇವಾಲಯಕ್ಕೆ ರಾಜ್ಯದ ವಿವಿಧೆಡೆ ಹಾಗೂ ನಾನಾ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಮಂಗಳವಾರ ವಿಶೇಷ ದಿನವಾಗಿದೆ. ವಾರವಿಡೀ ದೇವರಿಗೆ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಕೊಳ್ಳೇಗಾಲ ಸೇರಿದಂತೆ ಸುತ್ತಮುತ್ತಲ ವಿವಿಧ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ಹೊಸವಾಡಿ ವೀರಭದ್ರೇಶ್ವರ ಮನೆ ದೇವರಾಗಿರುವುದರಿಂದ ಜನರು ವಾರಕೊಮ್ಮೆಯಾದರೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

ದೇವಾಲಯದ ಹಿನ್ನೆಲೆ:
ವೀರಭದ್ರೇಶ್ವರ ನಂಬಿ ಬಂದ ಭಕ್ತರ ಕೋರಿಕೆ, ಕಷ್ಟ ನೀಗಿಸುವ ದೇವರಾಗಿದ್ದಾನೆ. ಈ ನಂಬಿಕೆ ಶತಮಾನಗಳ ಹಿಂದೆ ನಡೆದಿದ್ದ ಒಂದು ಪ್ರಸಂಗವನ್ನು ಉದಾಹರಣೆ ಕೊಟ್ಟು ಹೇಳಬಹುದು.

ಹಿಂದಿನ ಚೋಳರಾಜನೊಬ್ಬನಿಗೆ ಅಂಟಿದ ಶಾಪದಿಂದ ಆತ ತಿನ್ನುವ ಅನ್ನವೆಲ್ಲ ಹುಳು ಆಗುತ್ತಿತ್ತಂತೆ. ಸಕಲ ಐಶ್ವರ್ಯ, ರಾಜವೈಭೋಗವಿದ್ದರೂ ತಿನ್ನುವ ಅನ್ನ ಹುಳ ಆಗುತ್ತಿದೆಯಲ್ಲ. ನಾನಾದರೂ ಅಂತ ಪಾಪ ಏನು ಮಾಡಿರುವೆ ಎಂದು ಕೊರಗುತ್ತಿದ್ದ ರಾಜ, ವೀರಭದ್ರೇಶ್ವರನನ್ನು ಮನದಲ್ಲಿ ನೆನೆದನಂತೆ. ಅಂದು ರಾತ್ರಿ ಶ್ರೀಸ್ವಾಮಿ ವೀರಭದ್ರೇಶ್ವರ ರಾಜನ ಸ್ವಪ್ನದಲ್ಲಿ ಕಂಡು ನಿನ್ನ ಶಾಪವಿಮೋಚನೆ ಆಗಬೇಕಾದರೆ ನನ್ನ 108 ಗುಡಿಗಳನ್ನು ಕಟ್ಟಬೇಕು. ನಿನಗೆ ಅನ್ನ ಸಿಗುವುದಾಗಿ ಹೇಳಿ ಮಾಯವಾದನಂತೆ.

65ನೇ ದೇವಾಲಯ ನಿರ್ಮಾಣ ಬಳಿಕ ರಾಜನ ಶಾಪ ವಿಮೋಚನೆ ಶ್ರೀ ಸ್ವಾಮಿಯ ಆಜ್ಞೆಯಂತೆ ಒಂದು ಕ್ಷಣವೂ ವ್ಯರ್ಥ ಮಾಡದೆ ಅಂದಿನಿಂದಲೇ 108 ದೇವಾಲಯ ನಿರ್ಮಿಸಲು ರಾಜ ಪ್ರಾರಂಭಿಸಿದ. ಅಂತೆಯೇ, 65ನೇ ದೇವಾಲಯವಾದ ಈ ಹೊಸವಾಡಿ ವೀರಭದ್ರೇಶ್ವರ ಕಟ್ಟಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದ ವೇಳೆ ಗರ್ಭಗುಡಿಯಲ್ಲಿ ಶ್ರೀ ವೀರಭದ್ರೇಶ್ವರನಿಗೆ ನೈವೇದ್ಯ ಸಮರ್ಪಿಸುವಾಗ ರಾಜ ಕಣ್ಣೀರಿಡುತ್ತ ಇನ್ನೆಷ್ಟು ದಿನ ಈ ಕಷ್ಟ ನನಗೆ ಎಂದು ಬೇಡಿಕೊಂಡನಂತೆ. ಆ ಸಂದರ್ಭದಲ್ಲಿ ಮಹಾಮಂಗಳಾರತಿ ನಡೆಯುವಾಗ ಗರ್ಭಗುಡಿಗೆ ಹಾಕಿದ್ದ ಪರದೆ ಹಿಂದೆ ರಾಜನಿಗೆ ಭಕ್ಷೃಭೋಜನ ಕಂಡಿತು. ಅಂದಿನಿಂದ ರಾಜನಿಗೆ ತಿನ್ನಲು ಅನ್ನ ದೊರೆಯಿತು ಎಂದು ಪುರಾಣ ಹೇಳುತ್ತದೆ.

ರಾಜನನ್ನು ಹೊಕ್ಕಿದ್ದ ರಾಕ್ಷಸರು
ಶಾಪಗ್ರಸ್ತನಾದ ರಾಜನನ್ನು ಸಾವಿರಾರು ರಾಕ್ಷಸರು ಹೊಕ್ಕಿದ್ದರು. ಈ ಕಾರಣಕ್ಕೆ ತಿನ್ನು ಬಯಸುವ ಆಹಾರ ಆತನಿಗೆ ಹುಳುವಾಗುತ್ತಿತ್ತು ಎಂದು ಹೇಳಲಾಗುತ್ತದೆ. ಇದರಿಂದ ನೊಂದಿದ್ದ ರಾಜ 65ನೇ ಹೊಸವಾಡಿ ವೀರಭದ್ರೇಶ್ವರಸ್ವಾಮಿ ದೇಗುಲ ಕಟ್ಟಿ ಪೂಜೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವನಿಗೆ ಅನ್ನ ದೊರೆಯಿತು. ರಾಜನ ದೇಹದಲ್ಲಿ ಹೊಕ್ಕಿದ್ದ ಹುಳು ಸ್ವರೂಪದ ರಾಕ್ಷಸರು ಆ ವೀರಭದ್ರೇಶ್ವರ ಸ್ವಾಮಿಯ ಪಾದದ ಕೆಳಗಡೆ ಸೇರಿಕೊಂಡರು. ನಂತರ ಶ್ರೀ ಸ್ವಾಮಿ ರಾಕ್ಷಸರನ್ನು ಹೊಸಕಿಹಾಕಿದ ಎಂಬುದಾಗಿ ಹೇಳಲಾಗುತ್ತದೆ.

ಚಟ್ನಿ-ಅನ್ನದ ಮಹತ್ವ
ದೇವಾಲಯದಲ್ಲಿ ನೀಡಲಾಗುವ ಚಟ್ನಿ, ಅನ್ನವನ್ನು ಭಕ್ತಿ-ಭಾವದಿಂದ ಸ್ವೀಕರಿಸಿದರೆ ದೇಹಕ್ಕೆ ಅಂಟಿರುವ ರೋಗ-ರುಜಿನಗಳು ಮಾಯವಾಗುತ್ತವೆ. ಆರೋಗ್ಯ ಅಭಿವೃದ್ಧಿ ಹೊಂದುತ್ತದೆ ಎಂಬುದು ಈ ಸನ್ನಿಧಿಯ ವಿಶೇಷ. ಹಿಂದೆಲ್ಲ ದೇವಸ್ಥಾನದಲ್ಲಿ ನೀಡಿದ ಚಟ್ನಿ ಅನ್ನವನ್ನು ನೆಲದ ಮೇಲೆ ಹಾಕಿ ಸ್ವೀಕರಿಸುತ್ತಿದ್ದರು. ಇತ್ತೀಚೆಗೆ ದೇವಾಲಯ ಅಭಿವೃದ್ಧಿಯಾದಂತೆ ದಾನಿಗಳು ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.
ಹೊಸವಾಡಿ ಶ್ರೀ ವೀರಭದ್ರೇಶ್ವರ ಸನ್ನಿಧಿ ಸಮೀಪದಲ್ಲಿ ಮದುವೆ, ಇನ್ನಿತರ ಶುಭ ಸಮಾರಂಭಗಳು ನಡೆಯುತ್ತವೆ.

ಪೂಜಾ ಕೈಂಕರ್ಯಗಳು: ನವರಾತ್ರಿ ಸಂದರ್ಭದಲ್ಲಿ ಶ್ರೀಸ್ವಾಮಿಯ ರಥೋತ್ಸವ, ಕಾರ್ತಿಕ ಮಾಸದಲ್ಲಿ ಕಲ್ಯಾಣೋತ್ಸವ, ಶಿವರಾತ್ರಿಯಲ್ಲಿ ಶಿವನ ಆರಾಧನೆ ನಡೆಯುತ್ತದೆ. ವಾರವಿಡೀ ಪೂಜೆ ಕೈಂಕರ್ಯಗಳು ನಡೆಯಲಿದ್ದು, ಭಕ್ತರು ನಿತ್ಯವೂ ಭೇಟಿ ಮಾಡಿ ಭಕ್ತಿ ಸಮರ್ಪಿಸುತ್ತಾರೆ.

ದೇವಾಲಯಕ್ಕೆ 7 ಶತಮಾನಗಳ ಇತಿಹಾಸವಿದೆ. ತಾತ, ಮುತ್ತಾತ ಅವರ ಹಿಂದಿನ ಕಾಲದಿಂದಲೂ ನಮ್ಮ ಕುಟುಂಬ ಪೂಜೆ ಮಾಡುತ್ತ ಬಂದಿದ್ದೇವೆ. ಜನರು ಕಷ್ಟ, ಕಾರ್ಪಣ್ಯ ಪರಿಹರಿಸು ಎಂದು ದೇವಾಲಯಕ್ಕೆ ಬರುತ್ತಾರೆ. ಬಂದವರೆಲ್ಲರಿಗೂ ಕಾಲಕ್ರಮೇಣ ಒಳ್ಳೆಯದಾಗಿದೆ.ಬಸವರಾಜಪ್ಪ, ಅರ್ಚಕರು, ಹೊಸವಾಡಿ ವೀರಭದ್ರೇಶ್ವರ ದೇವಾಲಯ. ಬಹಳ ನಂಬಿಕೆ ಇಟ್ಟು ವರ್ಷದಲ್ಲಿ ಎರಡ್ಮೂರು ಬಾರಿಯಾದರೂ ಹೊಸವಾಡಿ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತೇವೆ. ನಮಗೆ ಒಳ್ಳೆಯದಾಗಿದೆ.ನಂದಿನಿ, ಭಕ್ತರು, ಬೆಂಗಳೂರು ನಿವಾಸಿ.