ಕೊಳ್ಳೇಗಾಲ : ಮುಖ್ಯ ರಸ್ತೆಗಳಲ್ಲಿ ಕಸ ಸುರಿಯುವುದ್ದರಿಂದ ಪಟ್ಟಣದ ಸೌಂದರ್ಯಕ್ಕೆ ಮಾರಕವಾಗುತ್ತಿರುವ ಜತೆಗೆ ತೆರೆದ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುವುದ್ದರಿಂದ ವಾತಾವರಣವೇ ಕಲುಷಿತವಾಗಿದೆ.
ಹೆಚ್ಚಿನ ಮುಖ್ಯ ರಸ್ತೆಗಳು ಶೌಚಗುಂಡಿಗಳಾಗಿ ಮಾರ್ಪಟ್ಟಿವೆ. ಪಟ್ಟಣದ ಬಸ್ ನಿಲ್ದಾಣ ಎದುರಿರುವ ಶಾಂತಿ ಚಿತ್ರ ಮಂದಿರ ಪಕ್ಕದ ಖಾಲಿ ನಿವೇಶನ ಸಂಪೂರ್ಣ ಬಯಲು ಮೂತ್ರ ವಿಸರ್ಜನೆಯ ತಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ(209) ಪಕ್ಕದಲ್ಲಿಯೇ ಈ ಖಾಲಿ ನಿವೇಶನವಿದೆ. ಇದೊಂದು ಜನನಿಭಿಡ ಪ್ರದೇಶವಾಗಿದೆ. ಬಸ್ ನಿಲ್ದಾಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಈ ಸ್ಥಳ ಜನಜಂಗುಳಿಯಿಂದ ಸದಾ ತುಳುಕಾಡುತ್ತಿರುತ್ತದೆ. ಆದರೂ ಇದನ್ನು ಲೆಕ್ಕಿಸದೆ ಮೂತ್ರ ವಿಸರ್ಜನೆ ಮಾಡಲಾಗುತ್ತಿದೆ. ಇದ್ದರಿಂದ ಮಹಿಳೆಯರು, ಮಕ್ಕಳು ಮುಜುಗರಕ್ಕೀಡಾಗುತ್ತಿದ್ದಾರೆ.
ಬಯಲು ಮೂತ್ರ ವಿಸರ್ಜನೆ ಸ್ಥಳಕ್ಕೆ ಕೂಗಳತೆ ದೂರದಲ್ಲಿರುವ ಬಸ್ ನಿಲ್ದಾಣದಲ್ಲಿ ಶೌಚಗೃಹವಿದೆ. ಮೂತ್ರ ವಿಸರ್ಜನೆಗೆ ಉಚಿತ ವ್ಯವಸ್ಥೆ ಮಾಡಲಾಗಿದೆ. ಆದರೂ ಈ ಸೌಲಭ್ಯ ಉಪಯೋಗಿಸದೆ ಬಯಲನ್ನೆ ಮೂತ್ರ ವಿಸರ್ಜನೆಗೆ ಬಳಸುತ್ತಿದ್ದಾರೆ. ನಿಲ್ದಾಣದಲ್ಲಿರುವ ಶೌಚಗೃಹದಲ್ಲಿ ಸ್ವಚ್ಛತೆ ಮರಿಚೀಕೆ ಆಗಿರುವ ಕಾರಣ ಬಯಲನ್ನು ಆಶ್ರಯಿಸುತ್ತಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಒಟ್ಟಾರೆ ಈ ಅವ್ಯವಸ್ಥೆಯಿಂದ ಬಸ್ ನಿಲ್ದಾಣಕ್ಕೆ ಬರುವವರು ಮೂಗು ಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಪಟ್ಟಣ ಸ್ವಚ್ಛತೆಗೆ ಆಧ್ಯತೆ ನೀಡುತ್ತಿಲ್ಲ ಎಂಬುದು ಬಯಲು ಮೂತ್ರ ವಿಸರ್ಜನೆ ಅಡೆತಡೆಗಳಿಲ್ಲದೆ ನಡೆಯುತ್ತಿರುವುದಕ್ಕೆ ಸಾಕ್ಷಿ ಯಾಗಿದೆ.
ಮುಖ್ಯದ್ವಾರಗಳೇ ಮೂತ್ರ ವಿಸರ್ಜನೆ ತಾಣ: ಮುಳ್ಳೂರು ರಸ್ತೆಯಿಂದ ಪಟ್ಟಣಕ್ಕೆ ಪ್ರವೇಶ ಮಾಡುವ ಸ್ಥಳದಲ್ಲಿ ಕಸ ಸುರಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರ ಜತೆಗೆ ಮೂತ್ರ ವಿಸರ್ಜನೆ ಮಾಡಿದರೂ ಕೇಳುವರಿಲ್ಲ. ಈ ಸ್ಥಳದಲ್ಲಿ ಶೌಚಗೃಹ ನಿರ್ಮಾಣ ಮಾಡಲಾಗಿದ್ದರು ಲೋಕಾರ್ಪಣೆ ಗೊಳ್ಳದಿರುವುದು ಈ ಅವ್ಯವಸ್ಥೆಗೆ ನೈಕ ಕಾರಣ. ಅಂತೆಯೇ ಕೆಂಪನಪಾಳ್ಯ ರಸ್ತೆ ಕಡೆಯಿಂದ ಪಟ್ಟಣಕ್ಕೆ ಪ್ರವೇಶ ಬರುವ ಕೃಷ್ಣಯ್ಯನ ಕಟ್ಟೆ ಬಳಿ ಕಸದ ರಾಶಿಯ ವಾಸನೆಯೇ ಎಲ್ಲರಿಗೂ ಸ್ವಾಗತ ಕೋರುತ್ತದೆ. ಇಲ್ಲೂ ಮಲ-ಮೂತ್ರ ವಿಸರ್ಜನೆ ಮಾಡುವ ಪ್ರಕ್ರಿಯೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವಲ್ಲಿ ನಗರಸಭೆ ಸಂಫೂರ್ಣ ವಿಫಲವಾಗಿದೆ.