ಕೊಳ್ಳೇಗಾಲ: ಸಾಕಷ್ಟು ಲೇಖಕರು, ಕಲಾವಿದರನ್ನು ನೀಡಿರುವ ರಾಜ್ಯದಲ್ಲಿಯೇ ವಿಶಿಷ್ಟವಾದ ಸ್ಥಳ ಕೊಳ್ಳೇಗಾಲವಾಗಿದೆ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ನ್ಯಾಷನಲ್ ಮೈದಾನದಲ್ಲಿ ಭಾನುವಾರ ಜೋಗಿ ರಂಗಜೋಳಿಗೆ, ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ 15ನೇ ವರ್ಷದ ಜೋಳಿಗೆ ಸಂಭ್ರಮ ಅಂಗವಾಗಿ 50ನೇ ವರ್ಷದ ಪುನೀತ ಜನ್ಮೋತ್ಸವ ಹಾಗೂ ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್ ಅವರ ಚಿತ್ರಗಳ ಗಾನಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಳ್ಳೇಗಾಲ ಜ್ಯೋತಿಷಿಗಳು, ಮಂತ್ರವಾದಿಗಳ ಗ್ರಾಮ ಎಂದು ಹೇಳಲಾಗುತ್ತದೆ. ಆದರೆ ಇದು ಮಂಟೇಸ್ವಾಮಿ, ಸಿದ್ದಪ್ಪಾಜಿ ಹಾಗೂ ಮಹದೇಶ್ವರರು ನೆಲೆಸಿರುವ ಪುಣ್ಯಸ್ಥಳವಾಗಿದೆ. ಇವರೆಲ್ಲರೂ ಉತ್ತರ ಕರ್ನಾಟಕದಿಂದ ಬಸವಣ್ಣರ ಆಶಯಗಳ ಬಗ್ಗೆ ಜಾಗೃತಿ ಮೂಡಿಸಲು ಬಂದವರಾಗಿದ್ದಾರೆ. ಇಂತಹ ಪವಿತ್ರ ಸ್ಥಳ ಕೊಳ್ಳೇಗಾಲ ಎಂದು ಬಣ್ಣಿಸಿದರು.
ನಾನು ಬರೆದ ಅರಮನೆ ಕಾದಂಬರಿಯ ಭಾಷೆಗೆ ಶಕ್ತಿ ನೀಡಿದ್ದು ಮಂಟೇಸ್ವಾಮಿ ಅವರ ಕಾವ್ಯವಾಗಿದೆ. ಆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒದಗಿ ಬಂದಿತು. ಇಂತಹ ಭಾಷೆಯ ನೆಲ ಕೊಳ್ಳೇಗಾಲ ಎಂದು ಹೇಳಿದರು.
ಚಿತ್ರ ನಿರ್ದೇಶಕ ಎಸ್.ಮಹೇಂದರ್, ಅಂತಾರಾಷ್ಟ್ರೀಯ ಕ್ರೀಡಾಪಟು ಚೈತ್ರಾ, ಚಾಮುಲ್ ಅಧ್ಯಕ್ಷ ಮಧುವನಹಳ್ಳಿ ನಂಜುಂಡಸ್ವಾ ಮಿ, ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲಪುರ ನಂದೀಶ್, ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಈಶ್ವರ ಸೋಷಿಯಲ್ ಟ್ರಸ್ಟ್ ವೆಂಕಟೇಶ್, ಜೋಗಿ ರಂಗ ಜೋಳಿಗೆ ಸಂಸ್ಥಾಪಕ ಮುಡಿಗುಂಡ ಮೂರ್ತಿ, ಅಪ್ಪುಟೀಮ್ ರಾಜೇಶ್ ಇತರರು ಇದ್ದರು.