ಜಿಲ್ಲೆ

‘ಕೋಳಿ ಎಸ್ರು’, ‘ಹದಿನೇಳೆಂಟು’ 26ರಂದು ರಾಜ್ಯಾದ್ಯಂತ ತೆರೆಗೆ

ಹುಬ್ಬಳ್ಳಿ: ‘ಕೋಳಿ ಎಸ್ರು’ ಹಾಗೂ ‘ಹದಿನೇಳೆಂಟು’ ಚಲನಚಿತ್ರಗಳು ಜ. 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿವೆ ಎಂದು ಹದಿನೇಳೆಂಟು ಚಲನಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರ ಹೇಳಿದರು.
ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ಚಿತ್ರಗಳು ವಿಭಿನ್ನ ಕಥಾ ಹಂದರ ಹೊಂದಿವೆ. ಈಗಾಗಲೇ 17ಕ್ಕೂ ಅಧಿಕ ಕಡೆ ಪ್ರದರ್ಶನದ ಮೂಲಕ ಹಲವು ಪ್ರಶಸ್ತಿ ಪಡೆದುಕೊಂಡಿದೆ. ಎಲ್ಲ ವರ್ಗದ ಜನರು ನೋಡಬಹುದಾದ ಚಲನಚಿತ್ರಗಳಿವು ಎಂದರು.
ಕೋಳಿ ಎಸ್ರು ಚಲನಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ ಮಾತನಾಡಿ, ಕೋಳಿಎಸ್ರು ಚಲನಚಿತ್ರವು ಮೈಸೂರಿನ ಟಿ. ನರಸಿಪುರದ ಸುತ್ತಲಿನ ಭಾಗದಲ್ಲಿ ಚಿತ್ರೀಕರಣಗೊಂಡಿದೆ. ಹದಿನೇಳೆಂಟು ಚಿತ್ರವು ಬೆಂಗಳೂರಿನ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ. ಎರಡೂ ಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರತ್ಯೇಕವಾಗಿಯೇ ತೆರೆಕಾಣಲಿವೆ. ಪ್ರಚಾರದ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಎರಡೂ ಚಿತ್ರದ ನಿರ್ದೇಶಕರು ಸೇರಿ ಪ್ರಚಾರ ಕಾರ್ಯ ಕೈಗೊಂಡಿರುವುದಾಗಿ ತಿಳಿಸಿದರು.
ಹದಿನೇಳೆಂಟು ಚಿತ್ರದ ನಾಯಕಿ ಶರ್ಲಿನ್ ಭೋಸ್ಲೆ, ಕೋಳಿ ಎಸ್ರು ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಸುನೀಲ ಸುದ್ದಿಗೋಷ್ಠಿಯಲ್ಲಿದ್ದರು.