ಜಿಲ್ಲೆ

ಕೋಲಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ : ಡಾ.ಮಲ್ಲಿಕಾರ್ಜುನ ಮುಕ್ಕಾ ಸಲಹೆ

ಬಾಬುರಾವ ಯಡ್ರಾಮಿ

ಸ್ನೇಹ ಸಂಗಮ ಗ್ರಂಥ ದಾನಿಗಳಿಗೆ ಅಭಿನಂದನೆ



ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕೋಲಿ ಸಮಾಜದ ಸರ್ಕಾರಿ ನೌಕರರು ಸಮುದಾಯದ ಏಳಿಗೆಗೆ ಶ್ರಮಿಸಬೇಕು ಎಂದು ಮಹರ್ಷಿ ವೇದವ್ಯಾಸ ಮಂಥನ ಪ್ರೇರಣಾ ಟ್ರಸ್ಟ್ ಅಧ್ಯಕ್ಷರೂ ಆದ ನಿವೃತ್ತ ಡಿಎಚ್‌ಒ ಡಾ.ಮಲ್ಲಿಕಾರ್ಜುನ ಮುಕ್ಕಾ ಸಲಹೆ ನೀಡಿದರು.
ನಗರದ ಐವಾನ್ ಇ ಶಾಹಿ ಅತಿಥಿಗೃಹ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಕೋಲಿ(ಕಬ್ಬಲಿಗ) ನೌಕರರ ಕ್ಷೇಮಾಭಿವೃದ್ಧಿ ಸಂಘದಿAದ ಹೊರತರಲಾದ ಸ್ನೇಹ ಸಂಗಮ ಪರಿಚಯ ಪರೀಷ್ಕೃತ ಗ್ರಂಥದ ದಾನಿಗಳ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕೀಯ ರಹಿತ ಸಂಘಟನೆ ಇದಾಗಿದ್ದು, ಕೇವಲ ತಮ್ಮ ಕುಟುಂಬದ ಬಗ್ಗೆ ಕಾಳಜಿವಹಿಸದೆ, ಸಮಾಜದ ಬೆಳವಣಿಗೆ ಇರುವ ಕ್ಷೇತ್ರದಿಂದಲೇ ಅಳಿಲು ಸೇವೆ ಮೂಲಕ ಕೊಡುಗೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಜಮಾದಾರ್ ಮಾತನಾಡಿ, ಸರ್ಕಾರಿ ನೌಕರರು ಸಂಘಟಿತರಾಗಿರುವುದಕ್ಕೆ ಈ ಪರಿಚಯ ಗ್ರಂಥವೇ ಕೈಗನ್ನಡಿ. ಈ ನಿಟ್ಟಿನಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುವುದು ಎಂದರು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಗನ್ನಾಥ ಜಮಾದಾರ್, ಅಬಕಾರಿ ಇಲಾಖೆಯ ನಿವೃತ್ತ ಅಧೀಕ್ಷಕ ಶರಣಪ್ಪ ಕುಮಸಿ, ನಿವೃತ್ತ ಇಂಜಿನಿಯರ್ ಶಿವಲಿಂಗಪ್ಪ ಕಿನ್ನೂರ್, ಸಂಘದ ಗೌರವ ಅಧ್ಯಕ್ಷ ನಾಮದೇವ ಕಡಕೋಳ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಬಿ. ಸತೀಶಕುಮಾರ ಮಾತನಾಡಿದರು. ಗ್ರಂಥ ಹೊರತರುವಲ್ಲಿ ಶ್ರಮವಹಿಸಿದ ೨೫೦ಕ್ಕೂ ನೌಕರರು, ದಾನಿಗಳನ್ನು ಸತ್ಕರಿಸಲಾಯಿತು.
ಪ್ರಮುಖರಾದ ಬಸವರಾಜ ಸಪ್ಪನಗೋಳ, ಎಲ್.ಬಿ. ಹಿಟ್ಟಿನ್, ಮಾಣಿಕ ಕನಕಟ್ಟಿ, ಧರ್ಮರಾಜ ಜವಳಿ, ಸಿದ್ದಪ್ಪ ಮಹಾಗಾಂವ್, ರಾಜಶೇಖರ ಪೋಲಕಪಳ್ಳಿ, ಸಂತೋಷ ಮೆಟಗಾರ, ಸೂರ್ಯಕಾಂತ ಗುಡ್ಡೊಡಗಿ, ಅವ್ವಣ್ಣ ತಳವಾರ ಇತರರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ತಳವಾರ ಸ್ವಾಗತಿಸಿದರು.