ಜಿಲ್ಲೆ

ಕೋಲಾರದಲ್ಲಿಲ್ಲ ಹೈಟೆಕ್ ಮಾರುಕಟ್ಟೆ

ಕೋಲಾರ ಡೆಸ್ಕ್

ಎನ್​.ಮುನಿವೆಂಕಟೇಗೌಡ ಕೋಲಾರ

ಏಷ್ಯಾದಲ್ಲೇ 2ನೇ ಅತಿ ದೊಡ್ಡ ಮಾರುಕಟ್ಟೆ ಕೋಲಾರದ ಟೊಮ್ಯಾಟೊ ಮಾರುಕಟ್ಟೆಯಾಗಿದೆ. ಪ್ರಪಂಚ ಪ್ರಸಿದ್ಧ ಮಾವು ನಗರ ಶ್ರೀನಿವಾಸಪುರ ಅತಿ ದೊಡ್ಡ ಮಾವಿನ ಮಾರುಕಟ್ಟೆಯೆಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಆದರೆ, ಈ ಎರಡೂ ಮಾರುಕಟ್ಟೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಜತೆಗೆ ಜಾಗದ ಸಮಸ್ಯೆಯೂ ಎದುರಾಗಿದ್ದು, ಮಾವು ಮತ್ತು ಟೊಮ್ಯಾಟೊ ಸುಗ್ಗಿಯಲ್ಲಿ ಟ್ರಾಫಿಕ್​ ಜಾಮ್​ ಸೇರಿ ಹಲವು ಸಮಸ್ಯೆಗಳು ತಲೆದೋರುತ್ತಿವೆ.

ಸುಗ್ಗಿ ವೇಳೆ ವ್ಯಾಪಾರಸ್ಥರು ಮಾರುಕಟ್ಟೆ ಆವರಣ ಬಿಟ್ಟು ಖಾಸಗಿ ಜಾಗಗಳಲ್ಲಿ ಮಂಡಿ ನಿರ್ಮಿಸಿಕೊಂಡು ವಹಿವಾಟು ನಡೆಸುವ ದುಸ್ಥಿತಿ ಇಂದಿಗೂ ತಪ್ಪಿಲ್ಲ.

ಸಮರ್ಪಕ ಮಾರುಕಟ್ಟೆ ಸೌಲಭ್ಯವಿಲ್ಲದೆ ಮಾವು ಬೆಳೆಗಾರರು ಮತ್ತು ಟೊಮ್ಯಾಟೊ ಬೆಳೆಗಾರರು ವರ್ಷಂಪ್ರತಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ ಬೆಳೆಗಾರರ ಸಂಖ್ಯೆ ಹೆಚ್ಚಾಗಿದ್ದು, ಈ ಎರಡೂ ಕಡೆಯೂ ಹೈಟೆಕ್​ ಮಾರುಕಟ್ಟೆಗಳು ನಿಮಾರ್ಣ ಮಾಡಲು ಬೇಡಿಕೆ ಇದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದ್ದು, ಈ ಎರಡೂ ಮಾರುಕಟ್ಟೆಗಳಿಗೂ ತಲಾ 100 ಎಕರೆ ಜಾಗ ಬೇಕೆಂದು ರೈತರು ಮತ್ತು ವ್ಯಾಪಾರಸ್ಥರ ಬೇಡಿಕೆಯಾಗಿದೆ. ಈ ಬಗ್ಗೆ ಹಲವು ಹೋರಾಟಗಳೂ ನಡೆಯುತ್ತಿವೆ, ಇತ್ತೀಚೆಗೆ ರಾಜ್ಯಸರ್ಕಾರ ಮಂಡಿಸಿದ ಬಜೆಟ್​ನಲ್ಲಾದರೂ ಮಾರುಕಟ್ಟೆ ವಿಸ್ತರಣೆಗೆ ಅನುದಾನ ಸಿಗುತ್ತದೆ ಎಂಬ ನಿರೀೆ ಹುಸಿಯಾಗಿದೆ.

ಮೇ ಅಂತ್ಯದಲ್ಲಿ ಮಾವು ಮಾರುಕಟ್ಟೆ ಪ್ರಾರಂಭವಾಗುತ್ತದೆ. ಈ ಸುಗ್ಗಿಗಾದರೂ ರೈತರಿಗೆ ಮತ್ತು ಕಾರ್ಮಿಕರಿಗೆ ಮೂಲ ಸೌಲಭ್ಯ ಕಲ್ಪಿಸಿ ಮುಂದಿನ ವರ್ಷಕ್ಕೆ ಮಾರುಕಟ್ಟೆ ಸುತ್ತಲೂ ಇರುವ ಜಾಗವನ್ನಾದರೂ ಖರೀದಿಸಿ ಮಾರುಕಟ್ಟೆ ವಿಸ್ತರಿಸಲು ಅಥವಾ ಬೇರೆ ಜಾಗವನ್ನು ಗುರುತಿಸಿ ಹೈಟೆಕ್​ ಮಾರುಕಟ್ಟೆ ಮಾಡಲಿ ಎಂಬುದು ರೈತರ ಒತ್ತಾಯ.

ಮಂಡಿ ನಿರ್ಮಾಣ ಕುಂಠಿತ: ಶ್ರೀನಿವಾಸಪುರದ ಚಿಂತಾಮಣಿ ರಸ್ತೆಯಲ್ಲಿ 19 ಎಕರೆಯಲ್ಲಿ 20 ವರ್ಷ ಹಿಂದೆ ಎಪಿಎಂಸಿ ಮಾರುಕಟ್ಟೆ ನಿಮಾರ್ಣಗೊಂಡು ಅದರಲ್ಲಿ 114 ಮಾವು ಮಂಡಿಗಳನ್ನು ನಿರ್ಮಿಸಲು ವ್ಯಾಪಾರಸ್ಥರಿಗೆ ಜಾಗ ನೀಡಲಾಯಿತು. ಈಗಾಗಲೇ 105 ಮಂಡಿಗಳನ್ನು ನಿರ್ಮಿಸಿ ವಹಿವಾಟು ನಡೆಯುತ್ತಿದೆ. ಉಳಿದ 9 ನಿವೇಶನಗಳನ್ನು ತಾತ್ಕಾಲಿಕವಾಗಿ ಮಾವಿನ ಸುಗ್ಗಿಯಲ್ಲಿ ಬಾಡಿಗೆ ರೂಪದಲ್ಲಿ ವ್ಯಾಪಾರಸ್ಥರು ಪಡೆದು ವಹಿವಾಟು ನಡೆಸುತ್ತಿದ್ದಾರೆ.

ಕಾರ್ಮಿಕರಿಗೆ ಪರದಾಡುವ ಪರಿಸ್ಥಿತಿ: ಶ್ರೀನಿವಾಸಪುರ ಮಾವು ಮಾರುಕಟ್ಟೆಯಲ್ಲಿ ಪ್ರತಿ ಸುಗ್ಗಿಯಲ್ಲಿ 4 ರಿಂದ 5 ಲಕ್ಷ ಟನ್​ ವಹಿವಾಟು ಆಗುತ್ತಿತ್ತು. ಕಳೆದ 5ವರ್ಷದಿಂದ ಮಾರುಕಟ್ಟೆಯ ಜಾಗದ ಸಮಸ್ಯೆ ಜತೆಗೆ ಮೂಲ ಸೌಲಭ್ಯ ಕೊರತೆಯಿಂದಾಗಿ ಚಿಂತಾಮಣಿ ರಸ್ತೆಯಲ್ಲಿ ಮಾವು ಮಂಡಿಗಳು ತಲೆ ಎತ್ತಿವೆ. ಸುಗ್ಗಿಯಲ್ಲಿ ಕಾರ್ಮಿಕರಿಗೆ ವಸತಿ, ಸ್ನಾನ, ಶೌಚಗೃಹಕ್ಕೆ ಪರಿದಾಡುವಂತಾಗಿದೆ.

ಲೋಡ್​-ಅನ್​ಲೋಡ್​ಗೆ ಹರಸಾಹಸ: ಕೋಲಾರ ಹೊರ ವಲಯದ ಕೊಂಡರಾಜನಹಳ್ಳಿ ಸಮೀಪ 9 ಎಕರೆಯಲ್ಲಿ ಎಪಿಎಂಸಿ ಮಾರುಕಟ್ಟೆ ನಿಮಾರ್ಣವಾಗಿದ್ದು, ಇದರಲ್ಲಿ ತರಕಾರಿ ಮತ್ತ ಟೊಮ್ಯಾಟೊ ವಹಿವಾಟು ನಡೆಯುತ್ತಿದೆ. ನಿತ್ಯ 4 ಸಾವಿರದಿಂದ 5 ಸಾವಿರ ಟನ್​ವೆರೆಗೆ ಟೊಮ್ಯಾಟೊ ವಹಿವಾಟು ನಡೆಯುತ್ತದೆ. ಹೊರ ರಾಜ್ಯ ಸೇರಿ ಹೊರ ದೇಶಕ್ಕೂ ಕೋಲಾರದ ಟೊಮ್ಯಾಟೊ ರಫ್ತಾಗುತ್ತದೆ. ಸುಗ್ಗಿ ಇಲ್ಲದ ಸಂದರ್ಭಗಳಲ್ಲಿಯೂ ಪ್ರತಿ ದಿನ 600 ಟನ್​ಗಿಂತಲೂ ಹೆಚ್ಚು ಟೊಮ್ಯಾಟೊ ವಹಿವಾಟು ನಡೆಯುತ್ತಿದೆ. ಜಾಗದ ಸಮಸ್ಯೆಯಿಂದಾಗಿ ಮಂಡಿ ಮಾಲೀಕರೇ ಮಾರುಕಟ್ಟೆಯ ಹೊರಗಡೆ ಖಾಸಗಿ ಜಾಗಗಳಲ್ಲಿ ಮಂಡಿ ನಡೆಸುತ್ತಿದ್ದಾರೆ. ಟ್ರಾಫಿಕ್​ ಜಾಮ್​ನಿಂದ ಟೊಮ್ಯಾಟೊ ಲೋಡ್​ ಮತ್ತು ಅನ್​ಲೋಡ್​ ಮಾಡಲು ಹರಸಾಹಸ ಪಡುವಂತಾಗಿದೆ.

ಟೊಮ್ಯಾಟೊ ಮಾರುಕಟ್ಟೆ ನಿಮಾರ್ಣಕ್ಕಾಗಿ ಮಂಗಸಂದ್ರ ಮತ್ತು ಕಲ್ಲಂಡೂರು ಬಳಿ 100 ಎಕರೆ ಜಾಗ ಗುರುತಿಸಲಾಗಿದೆ. ಆದರೆ ಇನ್ನೂ ಜಾಗ ಅಂತಿಮವಾಗಿಲ್ಲ. ಮಂಡಿ ಮಾಲೀಕರೇ ಖಾಸಗಿ ಜಾಗ ಪಡೆದು ಮಂಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಟ್ರಾಫಿಕ್​ ಜಾಮ್​ ಆಗದಂತೆ ತಡೆಯಲು ಮಾಲೂರು ರಸ್ತೆಯ ಪೂಜಾ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಲಾರಿ ನಿಲ್ಲಿಸಿಕೊಂಡು ಲೋಡ್​ ಮಾಡುವ ಸಂದರ್ಭದಲ್ಲಿ ಮಾರುಕಟ್ಟೆಯ ಆವರಣಕ್ಕೆ ಲಾರಿ ಪ್ರವೇಶ ಮಾಡುವಂತೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೊಸದಾಗಿ ಮಾರುಕಟ್ಟೆ ನಿರ್ಮಿಸುವಾಗ ಮೂಲ ಸೌಲಭ್ಯ ಕಲ್ಪಿಸಿಕೊಡಲಾಗುವುದು. - ಕಿರಣ್​ ಎಪಿಎಂಸಿ ಕಾರ್ಯದರ್ಶಿ, ಕೋಲಾರ ಶ್ರೀನಿವಾಸಪುರ ಎಪಿಎಂಸಿ ಮಾವು ಮಾರುಕಟ್ಟೆಯಲ್ಲಿ ಪ್ರಸ್ತುತ ಕೆನರಾ ಬ್ಯಾಂಕ್​ನಲ್ಲಿ ಸಾಲ ಪಡೆದು ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಕಾರ್ಮಿಕರಿಗೆ ಶೌಚಗೃಹ ಮತ್ತು ಸ್ನಾನಗೃಹಗಳನ್ನು ನಿರ್ಮಿಸಲಾಗುತ್ತಿದೆ. ಜಾಗದ ಸಮಸ್ಯೆಯಿಂದ ಕೆಲವು ಮಂಡಿ ಮಾಲೀಕರು ಹೊರಗಡೆ ವಹಿವಾಟು ನಡೆಸುತ್ತಿದ್ದಾರೆ. 3 ತಿಂಗಳು ಮಾತ್ರ ವಹಿವಾಟು ನಡೆಯುತ್ತದೆ. ಹಾಗೂ ಟೊಮ್ಯಾಟೊ ಸುಗಿ ವಹಿವಾಟು ನಡೆಯುತ್ತದೆ. ಉಳಿದಂತೆ ಖಾಲಿ ಇರುತ್ತದೆ. ಮಾರುಕಟ್ಟೆಗೆ ಒಂದೇ ರಸ್ತೆ ಇರುವ ಕಾರಣ ಟ್ರಾಫಿಕ್​ ಜಾಮ್​ ಆಗುತ್ತದೆ. - ಸುನೀಲ್​ ಎಪಿಎಂಸಿ ಕಾರ್ಯದರ್ಶಿಶ್ರೀನಿವಾಸಪುರ ಶ್ರೀನಿವಾಸಪುರ ಎಪಿಎಂಸಿ ಮಾವು ಮಾರುಕಟ್ಟೆಗೆ ಇರುವ 19 ಎಕರೆ ಜಮೀನನ್ನು 6 ಎಕರೆ ಜಮೀನು ಒತ್ತುವರಿ ಆಗಿದೆ. ಒತ್ತುವರಿ ಜಮೀನನ್ನು ಜಿಲ್ಲಾಧಿಕಾರಿಗಳು ತೆರವುಗೊಳಿಸಿಲ್ಲ. ಶ್ರೀನಿವಾಸಪುರದಲ್ಲಿ 100 ಎಕರೆ ಜಾಗದಲ್ಲಿ ಹೈಟೆಕ್​ ಮಾರುಕಟ್ಟೆ ನಿಮಾರ್ಣ ಮಾಡಬೇಕಿದೆ. ಏಷ್ಯಾದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶ ಇದಾಗಿದೆ. ಮಾವಿನ ಸುಗ್ಗಿಯಲ್ಲಿ ಪ್ರತಿವರ್ಷ 3,000 ಸಾವಿರಕ್ಕೂ ಹೆಚ್ಚು ಕಾರ್ಮಿಕರು ವಲಸೆ ಬರುತ್ತಾರೆ. ಅವರಿಗೆ ಮೂಲ ಸೌಲಭ್ಯ ಕಲ್ಪಿಸಲು ಎಪಿಎಂಸಿಯಿಂದ ಸಾಧ್ಯವಾಗಿಲ್ಲ. ರೈತರು ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿಗಳಿಲ್ಲ. ಇರುವ ಒಂದು ಕೊಠಡಿಯನ್ನು ಎಪಿಎಂಸಿ ಸಿಬ್ಬಂದಿಯೇ ಬಳಸಿಕೊಂಡಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹೈಟೆಕ್​ ಮಾವು ಮಾರುಕಟ್ಟೆ ನಿಮಾರ್ಣ ಮಾಡಬೇಕು. -ಚಿನ್ನಪ್ಪರೆಡ್ಡಿ ನೀಲಟೂರು, ಮಾವು ಬೆಳೆಗಾರರ ಜಿಲ್ಲಾಧ್ಯಕ್ಷ