ಕೆಜಿಎಫ್: ತಾಲೂಕು ಕಚೇರಿಯಲ್ಲಿ ಸೋಮವಾರ ಶಾಸಕಿ ರೂಪಕಲಾ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಭೂ ಸಕ್ರಮೀಕರಣ ಸಮಿತಿ ಸಭೆಯಲ್ಲಿ ನಮೂನೆ- 53ರ ಬಾಕಿ ಅರ್ಜಿಗಳನ್ನು ಪರಿಶೀಲಿಸಲಾಯಿತು.
ನಮೂನೆ -53ರಲ್ಲಿ ಅರ್ಜಿ ಸಲ್ಲಿಸಿರುವವರು ಸಭಗೆ ಹಾಜರಾಗಿ ಸಾಗುವಳಿ ಚೀಟಿ ವಿತರಿಸಲು ಕೋರಿದರು. ಈ ಪೈಕಿ ಒಟ್ಟು 39 ಅರ್ಜಿ ಅಂಗೀಕರಿಸಬಹುದಾಗಿದೆ ಎಂದು ತಹಸೀಲ್ದಾರ್ ಸಭೆಗೆ ಮಾಹಿತಿ ನೀಡಿದರು.
ಅದರಂತೆ ತಹಸೀಲ್ದಾರ್, ಸಮಿತಿ ಸದಸ್ಯರು ಹಾಗೂ ರಾಜಸ್ವ ನಿರೀಕ್ಷಕರು ಮುಂದಿನ ಸಭೆಯೊಳಗೆ ಎಲ್ಲ ಅರ್ಜಿದಾರರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಶಾಸಕಿ ರೂಪಕಲಾ ಸೂಚಿಸಿದರು.
ಸ್ಥಳ ಪರಿಶೀಲನೆ ಪೂರ್ಣಗೊಳಿಸಿ ಮಂಜೂರು ಕಡತ ಅಂತಿಮಗೊಳಿಸಿದಲ್ಲಿ ಅರ್ಜಿದಾರರಿಗೆ ಸಾಗುವಳಿ ಚೀಟಿ ವಿತರಣೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಇನ್ನು ನಮೂನೆ -57ರ ಅರ್ಜಿಗಳನ್ನು ಸರ್ಕಾರದ ಆದೇಶ ಬಂದ ನಂತರ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಸರ್ಕಾರವು ಭೂ ಮಂಜೂರಾತಿ ಪ್ರಕ್ರಿಯೆಗಳಲ್ಲಿ ಹಲವು ಬದಲಾವಣೆ ತಂದಿದ್ದು, ಜಮೀನು ಮಂಜೂರಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಯಾವುದೇ ಲೋಪದೋಷಗಳು ಆಗದಂತೆ ಕ್ರಮವಹಿಸಲು ಹಾಗೂ ಸರ್ಕಾರದ ಹೊಸ ನಿಯಮಾವಳಿಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.