ಕೋಲಾರ

ಮಹಿಳೆಯರಿಗೆ ಮೀಸಲಾತಿ ಮಣೆ!

ತಲೆಕೆಳಗಾದ ಪ್ರಭಾವಿ ನಾಯಕರ ಲೆಕ್ಕಾಚಾರ -ರಾಜಕೀಯ ವಾರಸುದಾರರ ಭವಿಷ್ಯಕ್ಕೆ ಹೊಸ ಸವಾಲು

ಬಂಗಾರಪೇಟೆ: ತಾಲೂಕಿನ ರಾಜಕೀಯ ವಲಯದಲ್ಲಿ ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟಣೆ ಹೊಸ ಸಂಚಲನ ಮೂಡಿಸಿದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 5 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ನಾಲ್ಕೂ ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿರುವುದು ಸ್ಥಳಿಯ ರಾಜಕೀಯ ಲೆಕ್ಕಾಚಾರವನ್ನೇ ಬದಲಿಸಿದೆ. ಹಲವು ವರ್ಷಗಳಿಂದ ರಾಜಕೀಯ ಪ್ರಭಾವ, ಪಕ್ಷ ಸಂಘಟನೆ ಮತ್ತು ವೈಯಕ್ತಿಕ ವರ್ಚಸ್ಸಿನ ಆಧಾರದಲ್ಲಿ ಚುನಾವಣೆ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದ ಪ್ರಭಾವಿ ಮುಖಂಡರಿಗೆ ಈ ಮೀಸಲಾತಿ ಅನಿರೀಕ್ಷಿತ ಸವಾಲು ತಂದೊಡ್ಡಿದೆ.

ಕ್ಷೇತ್ರ ವ್ಯಾಪ್ತಿಗೆ ಬರುವ ಐದು ಕ್ಷೇತ್ರಗಳಾದ ಬೂದಿಕೋಟೆ ಕ್ಷೇತ್ರವನ್ನು ಬಿಸಿಎಂ-(ಎ) ವರ್ಗಕ್ಕೆ ಮೀಸಲಿಡಲಾಗಿದೆ. ಉತ್ತನೂರು ಮತ್ತು ದೊಡ್ಡೂರು ಕರಪನಹಳ್ಳಿ ಕ್ಷೇತ್ರಗಳು ಅನುಸೂಚಿತ ಜಾತಿ ಮಹಿಳೆಯರಿಗೆ, ಕಾಮಸಮುದ್ರ ಹಾಗೂ ಚಿಕ್ಕ ಅಂಕಂಡಹಳ್ಳಿ ಕ್ಷೇತ್ರ ಸಾಮಾನ್ಯ ಮಹಿಳೆಯರಿಗೆ ಮೀಸಲಾಗಿವೆ. ಹೀಗಾಗಿ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಸ್ಪರ್ಧಿಸುವ ಅವಕಾಶ ದೊರೆತಿದ್ದು, ಪುರುಷ ಆಕಾಂಕ್ಷಿಗಳ ರಾಜಕೀಯ ಭವಿಷ್ಯವೇ ಚರ್ಚೆಗೆ ಗ್ರಾಸವಾಗಿದೆ.

ಮುಖಂಡರ ಲೆಕ್ಕಾಚಾರಕ್ಕೆ ತಡೆ: ಬಂಗಾರಪೇಟೆ ರಾಜಕೀಯದಲ್ಲಿ ಸ್ಥಳಿಯ ಸಂಸ್ಥೆಗಳ ಚುನಾವಣೆಗಳು ಕೇವಲ ಗ್ರಾಮಗಳ ಅಭಿವೃದ್ಧಿಗೆ ಸೀಮಿತವಾಗಿಲ್ಲ. ಅವು ಮುಂದಿನ ವಿಧಾನಸಭಾ ಚುನಾವಣೆಯ ರಾಜಕೀಯ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗಿವೆ. ಜಿಪಂ ಸದಸ್ಯತ್ವದ ಮೂಲಕ ಜನರೊಂದಿಗೆ ನಿಕಟ ಸಂಪರ್ಕ ಬೆಳೆಸುವುದು, ಪಕ್ಷದೊಳಗೆ ಪ್ರಭಾವ ಹೆಚ್ಚಿಸಿಕೊಳ್ಳುವುದು ಮತ್ತು ಭವಿಷ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುವುದು ಹಲವು ಮುಖಂಡರ ರಾಜಕೀಯ ಕಾರ್ಯತಂತ್ರದ ಭಾಗವಾಗಿದೆ.

ಈ ಹಿನ್ನೆಲೆಯಲ್ಲಿ ತಮ್ಮದೇ ರಾಜಕೀಯ ನೆಲೆ ಹೊಂದಿರುವ ನಾಯಕರು ಹಾಗೂ ತಮ್ಮ ಪುತ್ರರು ಅಥವಾ ಕುಟುಂಬದ ಸದಸ್ಯರನ್ನು ಚುನಾವಣೆ ಕಣಕ್ಕಿಳಿಸುವ ನಿರೀಕ್ಷೆಯಲ್ಲಿದ್ದ ಮುಖಂಡರಿಗೆ ಮಹಿಳಾ ಮೀಸಲಾತಿ ಹೊಸ ತಿರುವು ನೀಡಿದೆ. ನೇರವಾಗಿ ಸ್ಪರ್ಧಿಸಲು ಅವಕಾಶವಿಲ್ಲದ ಕ್ಷೇತ್ರಗಳಲ್ಲಿ ತಮ್ಮ ಕುಟುಂಬದ ಮಹಿಳಾ ಸದಸ್ಯರನ್ನು ಅಭ್ಯರ್ಥಿಗಳನ್ನಾಗಿಸುವುದೇ ಅಥವಾ ಹೊಸ ಮಹಿಳಾ ಮುಖಂಡರಿಗೆ ಅವಕಾಶ ನೀಡುವುದೇ ಎಂಬ ಪ್ರಶ್ನೆ ಎದುರಾಗಿದೆ.

ಮಹಿಳಾ ನಾಯಕತ್ವಕ್ಕೆ ಅವಕಾಶ: ಮಹಿಳಾ ಮೀಸಲಾತಿಯನ್ನು ಕೇವಲ ಪುರುಷ ನಾಯಕರಿಗೆ ಎದುರಾದ ಹಿನ್ನಡೆ ಎಂದು ಪರಿಗಣಿಸುವುದು ಸರಿಯಲ್ಲ. ಸ್ಥಳಿಯ ರಾಜಕೀಯದಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಇದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ದೊರೆತ ಮಹತ್ವದ ಅವಕಾಶವಾಗಿದೆ. ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು, ರಸ್ತೆ, ಚರಂಡಿ, ವಸತಿ, ಶಿಕ್ಷಣ ಮತ್ತು ಆರೋಗ್ಯದಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರ ವಿಶ್ವಾಸ ಗಳಿಸುವ ಮೂಲಕ ಮಹಿಳಾ ಅಭ್ಯರ್ಥಿಗಳು ತಮ್ಮದೇ ಆದ ರೀತಿಯಲ್ಲಿ ರಾಜಕೀಯ ನೆಲೆ ರೂಪಿಸಿಕೊಳ್ಳಬಹುದು. ಆದರೆ, ಮೀಸಲಾತಿ ಪ್ರಕಟವಾದ ಮಾತ್ರಕ್ಕೆ ಮಹಿಳೆಯರಿಗೆ ರಾಜಕೀಯ ಅಧಿಕಾರ ಸಂಪೂರ್ಣವಾಗಿ ವರ್ಗಾವಣೆಯಾಗುತ್ತದೆ ಎಂದು ಹೇಳಲಾಗದು. ಪಕ್ಷದ ಟಿಕೆಟ್​ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ, ಚುನಾವಣೆ ವೆಚ್ಚ, ಸಂಘಟನಾ ಬಲ ಮತ್ತು ಸ್ಥಳಿಯ ಮುಖಂಡರ ಬೆಂಬಲ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಮಹಿಳಾ ಅಭ್ಯರ್ಥಿಗಳು ಸ್ವತಂತ್ರವಾಗಿ ನಿರ್ಧಾರ ಕೈಗೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವ ಬೆಳೆಸಿಕೊಳ್ಳುವುದು ಮುಖ್ಯವಾಗಲಿದೆ.

ಪಕ್ಷಗಳಿಗೆ ಅಗ್ನಿಪರೀಕ್ಷೆ: ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್​, ಬಿಜೆಪಿ ಸೇರಿ ಪ್ರಮುಖ ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆ ದೊಡ್ಡ ಸವಾಲಾಗಲಿದೆ. ಮೀಸಲಾತಿಗೆ ಹೊಂದಿಕೆಯಾಗುವ ಅಭ್ಯರ್ಥಿಗಳನ್ನು ಗುರುತಿಸುವುದರ ಜತೆಗೆ ಗೆಲ್ಲುವ ಸಾಮರ್ಥ್ಯ, ಸ್ಥಳಿಯ ಜನಪ್ರಿಯತೆ ಮತ್ತು ಪಕ್ಷದ ಸಂಘಟನೆಯೊಂದಿಗೆ ಹೊಂದಾಣಿಕೆ ಇರುವವರಿಗೆ ಮಣೆ ಹಾಕಬೇಕಾಗುತ್ತದೆ. ಇದುವರೆಗೆ ಪುರುಷ ಮುಖಂಡರ ಪ್ರಾಬಲ್ಯವಿದ್ದ ಕ್ಷೇತ್ರಗಳಲ್ಲಿ ಹೊಸ ಮಹಿಳಾ ಅಭ್ಯರ್ಥಿಗಳು ಪ್ರವೇಶಿಸುವುದರಿಂದ ಪಕ್ಷಗಳ ಒಳಗಿನ ರಾಜಕೀಯ ಸಮೀಕರಣಗಳೂ ಬದಲಾಗಬಹುದು. ಟಿಕೆಟ್​ ಆಕಾಂಕ್ಷಿಗಳ ನಡುವಿನ ಪೈಪೋಟಿ, ಬಂಡಾಯದ ಸಾಧ್ಯತೆ ಮತ್ತು ಕುಟುಂಬ ರಾಜಕಾರಣದ ಚರ್ಚೆಗಳು ಚುನಾವಣಾ ಕಣವನ್ನು ಮತ್ತಷ್ಟು ಕುತೂಹಲಕಾರಿಯಾಗಿಸುವ ನಿರೀಕ್ಷೆಯಿದೆ.

ಮತದಾರರ ತೀಮಾರ್ನವೇ ಅಂತಿಮ: ರಾಜಕೀಯ ವಾರಸುದಾರರನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿದ್ದ ಮುಖಂಡರು, ಈಗ ತಮ್ಮ ಕಾರ್ಯತಂತ್ರ ಮರುರೂಪಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ.ಆದರೆ, ಮಹಿಳಾ ಮೀಸಲಾತಿ ರಾಜಕೀಯ ಹಿನ್ನಡೆಯಾಗಿ ನೋಡುವ ಬದಲು, ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸುವ ಪ್ರಜಾಪ್ರಭುತ್ವದ ಪ್ರಕ್ರಿಯೆಯಾಗಿ ನೋಡಬೇಕಿದೆ.

ಬಂಗಾರಪೇಟೆ ಕ್ಷೇತ್ರ ವ್ಯಾಪ್ತಿಯ ಐದು ಜಿಪಂ ಕ್ಷೇತ್ರಗಳ ಮೀಸಲಾತಿ ಬದಲಾವಣೆ ಸ್ಥಳಿಯ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಅನುಭವಿಗಳ ಪ್ರಭಾವ, ಕುಟುಂಬ ರಾಜಕಾರಣ, ಪಕ್ಷಗಳ ಸಂಘಟನಾ ಶಕ್ತಿ ಮತ್ತು ಮಹಿಳಾ ಅಭ್ಯರ್ಥಿಗಳ ಸಾಮರ್ಥ್ಯಗಳ ನಡುವೆ ಪೈಪೋಟಿ ನಡೆಯಲಿದೆ. ಅಂತಿಮವಾಗಿ ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎಂಬುದೇ ಈ ರಾಜಕೀಯ ಬದಲಾವಣೆಯ ನೈಜತೆಯನ್ನು ನಿರ್ಧರಿಸಲಿದೆ. ಬಂಗಾರಪೇಟೆಯ ರಾಜಕೀಯದಲ್ಲಿ ಈಗ ಎದ್ದೇರುವ ಪ್ರಶ್ನೆಗೆ ಪ್ರಭಾವಿ ನಾಯಕರ ಲೆಕ್ಕಾಚಾರ ಗೆಲ್ಲುತ್ತದೆಯೇ ಅಥವಾ ಹೊಸ ಮಹಿಳಾ ನಾಯಕತ್ವಕ್ಕೆ ಮತದಾರರು ಮಣೆ ಹಾಕುತ್ತಾರೆಯೇ? ಎಂಬುದನ್ನು ತಿಳಿಯಲು ಚುನಾವಣೆವರೆಗೆ ಎದುರು ನೋಡಬೇಕಾಗಿದೆ.