ಜಿಲ್ಲೆಗೆ ಕುಡಿಯುವ ನೀರಿನ ಮೂಲವಾಗಿರುವ ಯರಗೋಳ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವ ಆತಂಕ ಎದುರಾಗಿದೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಸಮೀಪ ಸುಮಾರು 315 ಕೋಟಿ ರೂ. ವೆಚ್ಚದಲ್ಲಿ 300 ಎಕರೆ ಪ್ರದೇಶದಲ್ಲಿ ಯರಗೋಳ್ ಡ್ಯಾಂ ನಿರ್ಮಿಸಲಾಗಿದ್ದು, 1 ಟಿಎಂಸಿಯಷ್ಟು ನೀರು ಶೇಖರಣಾ ಸಾಮರ್ಥ್ಯ ಹೊಂದಿದೆ. ಡ್ಯಾಂನಿಂದ ಸೂಚಿತ ನಗರ, ಗ್ರಾಮಗಳಿಗೆ ಪೈಪ್ ಲೈನ್ ನಿರ್ಮಾಣ ಮಾಡಲಾಗಿದ್ದು, ಅದರ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಬಂಗಾರಪೇಟೆ, ಕೋಲಾರ ನಗರ ಹಾಗೂ ಮಾಲೂರಿನ ಕೆಲ ಹಳ್ಳಿಗಳಿಗೆ ಡ್ಯಾಂನಿಂದ ಆಯ್ದ ಓವರ್ ಹೆಡ್ ಟ್ಯಾಂಕ್‌ಗಳಿಗೆ ಪಂಪ್ ಮಾಡಿ ತುಂಬಿಸಿ, ಮನೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಕಳೆದ ವರ್ಷ ಸುರಿದ ಮಳೆಗೆ ನೀರು ಶೇಖರಣೆಯಾಗಿತ್ತು. ಇದೀಗ ಶೇ.60 ನೀರು ಖಾಲಿಯಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
ಜಲಶಾಯದಲ್ಲಿರುವ ನೀರು ಬೇಸಿಗೆ ಮುಗಿರುವಷ್ಟರಲ್ಲಿ ಖಾಲಿಯಾಗಲಿದೆ. ಇದರಿಂದ ಜಲಶಾಯದ ಮೇಲೆ ಅವಲಂಬಿತವಾಗಿರುವ ನಗರಗಳು ಮತ್ತು ಹಳ್ಳಿಗಳ ಜನರಲ್ಲಿ ಆತಂಕ ಮೂಡಿದ್ದು, ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಂದಾಗಬೇಕು. ನೀರಿನ ಬಳಕೆಯನ್ನು ನಿಯಂತ್ರಿಸುವುದು, ಪರ್ಯಾಯ ನೀರಿನ ವ್ಯವಸ್ಥೆ ಮಾಡುವುದು ಸೇರಿದಂತೆ ತುರ್ತು ಕ್ರಮಗಳನ್ನು ಶೀಘ್ರ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯವಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಡ್ಯಾಂನಲ್ಲಿ ನೀರು ಶೇಖರಣಿ ಆಗಲಿಲ್ಲ. ಅದರ ಪರಿಣಾಮ ಈಗ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಮುಂದೆ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಬಹುದಾಗಿದೆ.
ಯರಗೋಳ್ ಡ್ಯಾಂಅನ್ನು ಮಾರ್ಕಂಡೇಯ ಡ್ಯಾಂಗೆ ಅಡ್ಡಲಾಗಿ ನಿರ್ಮಿಸಿರುವುದರಿಂದ ಮಾರ್ಕಂಡೇಯ ಡ್ಯಾಂ ತುಂಬಿ ಕೋಡಿ ಹರಿದರೆ ಮಾತ್ರ ಯರಗೋಳ್ ತುಂಬುತ್ತದೆ. ಈ ವರ್ಷ ಮಾಲೂರಿನ ಭಾಗದಲ್ಲಿ ಉತ್ತಮ ಮಳೆಯಾಗಿ ಅಲ್ಲಿನ ಕೆರೆ ಕುಂಟೆಗಳು ತುಂಬಿ ಕೋಡಿ ಹರಿಯದ ಪರಿಣಾಮ ಮಾರ್ಕಂಡೇಯ ಡ್ಯಾಂ ಸಹ ತುಂಬಲಿಲ್ಲ. ಇತ್ತ ಯರಗೋಳ್ ಡ್ಯಾಂಗೂ ನೀರು ಹರಿಯದ ಕಾರಣ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ.
ಮಾರ್ಕಂಡೇಯ ಹಾಗೂ ಯರಗೋಳ್ ಜಲಶಾಯಗಳು ಈ ಭಾಗದ ಜಲ ಮೂಲಗಳು. ಮಳೆ ಕೊರತೆಯಿಂದ ನೀರು ಖಾಲಿಯಾಗುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿದ್ದು, ಸಂಬಂಧಪಟ್ಟ ಇಲಾಖಧಿಕಾರಿಗಳು ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕು.
- ಎ.ಬಾಬು ಸಮಾಜ ಸೇವಕ, ಬೂದಿಕೋಟೆ