ಸಿಎಲ್‌ಪಿ ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರೊಟ್ಟಿಗೆ ಕಾಣಿಸಿಕೊಂಡು ಶಾಸಕರಾದ ಎಸ್. ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಎಂಎಲ್ಸಿ ಅನಿಲ್ ಕುಮಾರ್, ಡಿಸಿಸಿ ಮಾಜಿ ಅಧ್ಯಕ್ಷ ಚಂದ್ರಾರೆಡ್ಡಿ, ಮುಖಂಡ ಆದಿನಾರಾಯಣ.
ಕಿರುವಾರ ಎಸ್.ಸುದರ್ಶನ್ ಕೋಲಾರ
ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಜಿಲ್ಲೆಯ ಶಾಸಕರ ಲಾಬಿ ಮುಂದುವರಿದಿದ್ದು, ಈ ಮಧ್ಯೆ ಸಂಭಾವ್ಯ ಪಟ್ಟಿಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಅವರ ಹೆಸರು ಹರಿದಾಡುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯಲ್ಲಿರುವ ಒಟ್ಟು 6 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ವರು ಕೈ ಶಾಸಕರು, ಇಬ್ಬರು ಜೆಡಿಎಸ್ ಶಾಸಕರಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಜಿಲ್ಲೆಗೆ ಅವಕಾಶ ಸಿಗಲೇಬೇಕು ಎಂದು ಹಠಕ್ಕೆ ಬಿದ್ದಿರುವ ಕೈ ಶಾಸಕರು, ಕೇಂದ್ರದಿಂದ ರಾಜ್ಯದ ತನಕ ಲಾಬಿಗೆ ಮುಂದಾಗಿದ್ದಾರೆ. ರೂಪಕಲಾ ಹೆಸರು ಕೇಳಿ ಬಂದಿರುವುದು, ಮುನಿಯಪ್ಪ ಅವರು ಏನಾದರೂ ಸಚಿವ ಸ್ಥಾನ ಬಿಟ್ಟು ಮಗಳಿಗೆ ಕಲ್ಪಿಸಲು ಒತ್ತಡ ಹೇ ರಿದ್ದಾರೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿಗಳಾದ ನಸೀರ್ ಅಹ್ಮದ್, ಎಂ.ಎಲ್. ಅನಿಲ್ ಕುಮಾರ್, ಡಿ.ಟಿ.ಶ್ರೀನಿವಾಸ್ ಸಚಿವ ಸ್ಥಾನಕ್ಕಾಗಿ ಒಟ್ಟಾಗಿ ನಾಯಕರನ್ನು ಭೇಟಿ ಮಾಡಿ ಬೇಡಿಕೆ ಮಂಡಿಸಿದ್ದಾರೆ. ಆದರೆ ರೂಪಕಲಾ ಮಾತ್ರ ಅಧಿಕಾರ ಸಿಗಲಿ, ಬಿಡಲಿ ಎಂದು ಕ್ಷೇತ್ರದ ಪ್ರವಾಸ ಕೈಗೊಂಡು ಕಾರ್ಯ ಮುಂದುವರಿಸಿದ್ದಾರೆ. ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೆಂಬಲಿಗರು, ಜಾತಿವಾರು ಸಮುದಾಯದ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ. ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡರಿಗೆ, ಕೊತ್ತೂರು ಮಂಜುನಾಥ್ ಮೂವರದಲ್ಲಿ ಯಾರಿಗಾದರೂ ಸಿಗಬಹುದು ఎంబ ನಿರೀಕ್ಷೆಯಿತ್ತು. ಮೊದಲಿನಿಂದಲೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರು. ಜಾತಿ, ಹಿರಿತನದ ಆಧಾರದಲ್ಲಿ ಅವಕಾಶ ಕೇಳುತ್ತಿರುವುದು ಕಂಡು ಬಂದಿದೆ. ಈ ಎಲ್ಲದರ ನಡುವೆ ಸಂಭಾವನೀಯ ಪಟ್ಟಿಯಲ್ಲಿ ರೂಪಕಲಾ
ಹೆಸರು ಕೇಳಿ ಬಂದಿರುವುದು ಅಚ್ಚರಿ ಮೂಡಿಸಿದೆ. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಇಬ್ಬರೂ ಹಾವು ಮುಂಗಿಸಿಯಂತಿದ್ದರು. ಸಚಿವ ಸ್ಥಾನಕ್ಕಾಗಿ ಇದೀಗ ಇಬ್ಬರು ಒಂದಾಗಿರುವುದು ಪಕ್ಷದಲ್ಲಿ, ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿದೆ.
ಶನಿವಾರ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಶಾಸಕಾಂಗ ಸಭೆಯಲ್ಲಿ ಸಚಿವರ ಸ್ಥಾನದ ಪಟ್ಟಿ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಶಾಸಕರಲ್ಲಿತ್ತು.
ಸಭೆಯಲ್ಲಿ ಸಿಎಲ್‌ಪಿ ನಾಯಕರ ಆಯ್ಕೆ ಕುರಿತು ಕಾಂಗ್ರೆಸ್ ರಾಜ್ಯ ಉಸ್ತುವಾರಿಗಳಾದ ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಘೋಷಿಸಿದರು. ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡುವುದು ಬಾಕಿಯಿದೆ. ಪದಗ್ರಹಣ ಮಾಡಿದ ದಿನ ಅಥವಾ ಮುನ್ನದಿನ ಸಚಿವರ ಪಟ್ಟಿ ಸಿದ್ಧಗೊಂಡು ರಾಜ್ಯಪಾಲರ ಅನುಮೋದನೆಗೆ ಹೋಗಲಿದೆ. ಆ ನಂತರ ಅಧಿಕೃತ ಸಚಿವರ ಪಟ್ಟಿ ಬಿಡುಗಡೆಯಾಗಲಿದೆ. ನಾಯಕರ ಮಟ್ಟದಲ್ಲಿ ಲಾಬಿ ನಡೆಯುತ್ತಲೇ ಇದ್ದು ಯಾರಿಗೆ ಸಚಿವ ಸ್ಥಾನ ಎಂಬುದು ಗುಟ್ಟಾಗಿಯೇ ಇದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಶಾಸಕ ಕೆ.ಎಚ್.ಮುನಿಯಪ್ಪ ಅವರು ಏನಾದರು ಸಚಿವರಾಗಿಯೇ ಮುಂದುವರಿದರೆ, ಕೆಜಿಎಫ್ ಶಾಸಕಿ ರೂಪಕಲಾ ಅವರಿಗೆ ಅವಕಾಶ ದೊರೆಯುವುದು ಅನುಮಾನ. ಒಂದು ವೇಳೆ ಮಗಳಿಗೆ ಅವಕಾಶ ಕೊಡಿ ಎಂದು ಸಚಿವ ಸ್ಥಾನ ಬಿಟ್ಟುಕೊಟ್ಟರೆ ಮಂತ್ರಿ ಮಂಡಲದಲ್ಲಿ ಸಚಿವೆಯಾಗುವುದು ಖಚಿತ ಎಂಬುದು ಮೂಲಗಳಿಂದ ತಿಳಿದು ಬಂದಿದೆ.