ಎಸ್​.ಎನ್​.ನಾರಾಯಣಸ್ವಾಮಿ 
ಕೋಲಾರ

ಒಕ್ಕೂಟದ ದೇಣಿಗೆ ನಮಗೆ ಬೇಡ

ಕೋಲಾರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ ಪುತ್ಥಳಿ ನಿರ್ಮಾಣಕ್ಕಾಗಿ ಕೋಮುಲ್​ನಿಂದ 15 ಲಕ್ಷ ರೂ. ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ, ಸಭೆಯಿಂದ ಹೊರ ಬಂದೆ, ಒಕ್ಕೂಟದ ದೇಣಿಗೆ ನಮಗೆ ಬೇಡ ಎಂದು ಒಕ್ಕೂಟದ ನಿರ್ದೇಶಕ ಹಾಗೂ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುತ್ಥಳಿ ನಿರ್ಮಿಸಲು ಜಿಲ್ಲಾಡಳಿತದಿಂದ ದೇಣಿಗೆ ಕೋರಿ ಜಿಲ್ಲಾಧಿಕಾರಿ ಎಂ.ಆರ್​.ರವಿ ಕೋಮುಲ್​ಗೆ ಪತ್ರ ಬರೆದಿದ್ದರು. ಇದಕ್ಕೆ ಕೆಲ ನಿರ್ದೇಶಕರು ಆಕ್ಷೇಪವ್ಯಕ್ತಪಡಿಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಅಯವ್ಯಯ ಸಭೆಯಲ್ಲಿ ವಿಚಾರ ಪ್ರಸ್ತಾಪಕ್ಕೆ ಬಂದಾಗ ಎಲ್ಲಾ ಕಡೆ ಕೇಳುತ್ತಾರೆ ಕೊಡಲು ಸಾಧ್ಯವೇ..?, ಇದಕ್ಕೆ ಹಣ ಕೊಡಲು ಬರುವುದಿಲ್ಲ ಎಂಬುದಾಗಿ ಮುಳಬಾಗಿಲು ನಿರ್ದೇಶಕ ಕಾಡೇನಹಳ್ಳಿ ನಾಗರಾಜ್​ ವಿರೋಧಿಸಿದರು. ಇದಕ್ಕೆ ಮಾಲೂರು ನಿರ್ದೇಶಕ ಶ್ರೀನಿವಾಸ್​ ಕೂಡ ಧ್ವನಿಗೂಡಿಸಿದರು. ಅಂಬೇಡ್ಕರ್​ ಪುತ್ಥಳಿಗೂ ದೇಣಿಗೆ ಕೊಡಬೇಕೇ ಎಂದು ಪ್ರಶ್ನಿಸಿ ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದರು.
ವಾರ್ಷಿಕವಾಗಿ 1,400 ಕೋಟಿ ವ್ಯವಹಾರ ಮಾಡುವ ಹಾಗೂ ವಾರ್ಷಿಕ 50 ಕೋಟಿ ಲಾಭ ಗಳಿಸುತ್ತಿರುವ ಒಕ್ಕೂಟಕ್ಕೆ ಅಂಬೇಡ್ಕರ್​ ಪುತ್ಥಳಿ ನಿಮಾರ್ಣಕ್ಕೆ 15 ಲಕ್ಷ ಕೊಡಲು ಆಗುವುದಿಲ್ಲವೇ. 10 ಲಕ್ಷ ಕೊಡಬಹುದು ಎಂಬುದಾಗಿ ಅಧ್ಯಕ್ಷ ನಂಜೇಗೌಡರು ಪ್ರಸ್ತಾಪಿಸಿದರು. ಆದರೆ ಬೇರೆಯಾವುದಕ್ಕೂ ವೆಚ್ಚ ಮಾಡಿಲ್ಲವೇಎಂದು ಪ್ರಶ್ನಿಸಿದರು.
ನಮ್ಮ ಸಮುದಾಯ ಗಟ್ಟಿಯಾಗಿದೆ, ನಾವೆಲ್ಲಾ ಬದುಕಿದ್ದೇವೆ. ನನ್ನ ವೇತನ ಸೇರಿದಂತೆ ಸ್ವಂತ ಹಣ ನೀಡಿ, ಮುಂದೆ ನಿಂತು ಅಂಬೇಡ್ಕರ್​ ಪುತ್ಥಳಿ ನಿರ್ಮಿಸುತ್ತೇನೆ. ಯಾವುದೇ ಕಾರಣಕ್ಕೂ ಕೋಮುಲ್​ ದೇಣಿಗೆ ಬೇಡ. ಈಗಾಗಲೇ ಒಕ್ಕೂಟಕ್ಕೆ ಬರೆದಿರುವ ಪತ್ರವನ್ನು ವಾಪಸ್​ ಪಡೆಯಲು ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
* ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ
ಉಪಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್​ ಗೆಲುವು ಶೇ.100 ಖಚಿತ. ನಾನು ಕೂಡ ಬುಧವಾರ ಪ್ರಚಾರಕ್ಕೆ ಹೋಗುತ್ತಿದ್ದು, ಐದು ದಿನ ಅಲ್ಲೇ ಇರುತ್ತೇನೆ. ಗ್ಯಾರಂಟಿ ಯೋಜನೆ, ಅಭಿವೃದ್ಧಿ ಕೆಲಸಗಳನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದು ಎಸ್​.ಎನ್​.ನಾರಾಯಣಸ್ವಾಮಿ ತಿಳಿಸಿದರು.
* ಖರೀದಿ ನೋಡುವ ಶಕ್ತಿಯಿದೆ
ಐಪಿಎಲ್​ ಟಿಕೆಟ್​ ಕುರಿತು ಪ್ರತಿಕ್ರಿಯಿಸಿ, ನಾನು ಕೂಡ ಕ್ರಿಕೆಟ್​ ಪ್ರೇಮಿ. ಆದರೆ, ನೋಡಲು ಹೋಗಲ್ಲ. ನನಗೆ ಸಿಗುವ ಟಿಕೆಟ್​ಗಳನ್ನು ಅಭಿಮಾನಿಗಳಿಗೆ ನೀಡುತ್ತೇನೆ. ಅವರು ನೋಡಿ ಆನಂದಿಸಲಿ. ನಾನೇನೂ ಟಿಕೆಟ್​ಗೆ ಬೇಡಿಕೆ ಇಟ್ಟಿರಲಿಲ್ಲ. ಉಚಿತವಾಗಿ ಕೊಡದಿದ್ದರೂ ಟಿಕೆಟ್​ ಖರೀದಿಸಿ ವೀಕ್ಷಿಸುವ ಶಕ್ತಿ ನಮಗಿದೆ ಎಂದು ನಾರಾಯಣಸ್ವಾಮಿ ಹೇಳಿದರು.
ಕೋಟ್​...
ಬಿಜೆಪಿ ಅಪಪ್ರಚಾರ, ಮೋದಿ ಅವರ ಡೋಂಗಿತನಕ್ಕೆ ಜನರು ಬೇಸತ್ತಿದ್ದಾರೆ. ಎಲ್​ಪಿಜಿ ಸಿಲಿಂಡರ್​ ಸಿಗದೆ ಜನರು ಪರದಾಡುತ್ತಿದ್ದಾರೆ. ಅಭಾವ ಸೃಷ್ಟಿ ಮಾಡಿದ್ದು, ಹೋಟೆಲ್​ಗಳು ಮುಚ್ಚಿವೆ. ಜನರೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ.
- ಎಸ್​.ಎನ್​.ನಾರಾಯಣಸ್ವಾಮಿ, ಶಾಸಕ, ಬಂಗಾರಪೇಟೆ.