ಯುಜಿಡಿ ವೆಚ್ಛಗೊಳಿಸುತಿರುವ ಹೋಟೆಲ್ ಸಿಬ್ಬಂದಿ
ಕೋಲಾರ: ನಗರದ ಮಾಂಸಾಹಾರಿ ಹೋಟೆಲ್ ಸಿಬ್ಬಂದಿ ಹೋಟೆಲ್‌ನ ಪಾತ್ರೆ ಮತ್ತ ದೊಡ್ಡ ಸೌಟು ಬಳಸಿ ಯುಜಿಡಿ ಸ್ವಚ್ಛಗೊಳಿಸಿದ್ದು, ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಗರದ ಗೌರಿಪೇಟೆಯ ಸಿಟಿ ಹೋಟೆಲ್ ಪಕ್ಕದ ರಸ್ತೆಯಲ್ಲಿ ಯುಜಿಡಿ ತುಂಬಿಕೊಂಡು ರಸ್ತೆಯ ಮೇಲೆ ಕಲುಷಿತ ಹರಿಯುತ್ತಿತ್ತು. ಹೋಟೆಲ್ ನವರೇ ಯುಜಿಡಿಗೆ ತ್ಯಾಜ್ಯ ಹಾಕಿದ್ದಾರೆ ಎಂದು ಸಾರ್ವಜನಿಕರು ನಿಂದಿಸಿದ್ದರು. ಇದನ್ನು ಗಮನಿಸಿದ ಹೋಟೆಲ್ ಮಾಲೀಕ ಸಿಬ್ಬಂದಿಯಿಂದ ಅಡುಗೆ ಪಾತ್ರೆ, ದೊಡ್ಡ ಸೌಟ್ ಮೂಲಕ ತ್ಯಾಜ್ಯ ಎತ್ತಿದ್ದಾರೆ.
ಇದರ ವಿಡಿಯೋ ಮಾಡಿರುವ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಎಲ್ಲೆಡೆ ವೈರಲ್ ಆಗಿದೆ.
ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ:
ಹೋಟೆಲ್ ತ್ಯಾಜ್ಯವನ್ನು ನೇರವಾಗಿ ಯುಜಿಡಿಗೆ ಬಿಡಲಾಗುತ್ತಿದೆ. ಇದು ಮ್ಯಾನ್ ಹೋಲ್‌ನಲ್ಲಿ ಕಟ್ಟಿಕೊಂಡು ರಸ್ತೆಗೆ ಹರಿಯುತ್ತದೆ. ಹೋಟೆಲ್ ಸುತ್ತಮುತ್ತ ಇರುವ ಅಂಗಡಿಗಳವರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿತ್ತು.
ಕೆಲ ಮಾಂಸ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ಕ್ರಮ ಪಾಲಿಸುತ್ತಿಲ್ಲ. ಈ ಬಗ್ಗೆ ಆಹಾರ ಮತ್ತು ಸುರಕ್ಷತಾ ಇಲಾಖೆಯ ಅಧಿಕಾರಿಗಳು, ನಗರಸಭೆಯ ಅಧಿಕಾರಿಗಳು ಹೋಟೆಲ್‌ಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ನಿಯಮ ಪಾಲನೆಗಳ ಬಗ್ಗೆ ಪರಿಶೀಲನೆ ನಡೆಸಿಲ್ಲ. ಇದರಿಂದಲೇ ಹೋಟೆಲ್ ಗಳವರು ಸ್ವಚ್ಛತೆ ವಿಚಾರದಲ್ಲಿ ಉದಾಸೀನ ತೋರುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಬೇಕಿದೆ.