ಹಸುಗಳ ಕಳ್ಳರಾದ ವೆಂಕಟೇಶು, ನಸೀಬ್ ಜತೆಗೆ ಪೊಲೀಸ್ ತಂಡ.
- ಹಸು ಕಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳರಿಬ್ಬರ ಬಂಧನ
ಹಸು ಕಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳರಿಬ್ಬರ ಬಂಧನ
ಗ್ರಾಮೀಣ ಭಾಗದ ರೈತರ ನಿದ್ರೆಗೆಡಿಸಿದ್ದ ಸೀಮೆ ಹಸುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಖದೀಮರನ್ನು ಬೇತಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 14 ಸೀಮೆ ಹಸುಗಳು ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ತಾಲೂಕು ನಿವಾಸಿಗಳಾದ ವೆಂಕಟೇಶ್ ತುಳಸಿ (29) ಹಾಗೂ ನಸೀಬ್ (29) ಬಂಧಿತರು.
ಮೂರು ರಾಜ್ಯಗಳಲ್ಲಿ ಕೈಚಳಕ: ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಪಾಪೇನಹಳ್ಳಿ, ಗೆನ್ನೇರಹಳ್ಳಿ ಮತ್ತು ಪಂತನಹಳ್ಳಿಯಲ್ಲಿ ಇತ್ತೀಚೆಗೆ ಹಸುಗಳ ಸರಣಿ ಕಳವು ನಡೆದಿತ್ತು. ಈ ಬಗ್ಗೆ ಠಾಣೆಯಲ್ಲಿ 4 ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಪೊಲೀಸರು ವಿಶೇಷ ಪತ್ತೆ ತಂಡ ರಚಿಸಿ ಕಾರ್ಯಾಚರಣೆ ನಡೆಸಿದಾಗ, ಆರೋಪಿಗಳು ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಡಿವೈಎಸ್ಪಿ ಲಕ್ಷ್ಮಯ್ಯ ವಿ. ಹಾಗೂ ಬೇತಮಂಗಲ ವೃತ್ತ ನಿರೀಕ್ಷಕ ಜಗದೀಶ್ ಎಸ್.ಆರ್. ಮಾರ್ಗದರ್ಶನದಲ್ಲಿ ಪಿಎಸ್ಐ ಎಂ.ತ್ಯಾಗರಾಜ್ ಸಿಬ್ಬಂದಿ ಅನಿಲ್ಕುಮಾರ್, ರಾವೇಂದ್ರ ನಾಯಕ, ವೇಣುಗೋಪಾಲ್, ಶ್ರೀನಿವಾಸ್, ಕೃಷ್ಣಮೂರ್ತಿ, ರವಿಕುಮಾರ್ ಹಾಗೂ ಚಾಲಕ ಮನೋಹರ್ ಅವರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಶ್ಲಾಸಿದ್ದಾರೆ.
ಪಾಪೇನಹಳ್ಳಿಯ 1 ಹಸು, ಗೆನ್ನೇರಹಳ್ಳಿಯ 3 ಹಸ, ಪಂತನಹಳ್ಳಿಯ 3 ಹಸ, ಆಂಧ್ರದ ವಿ.ಕೋಟೆ ಠಾಣಾ ವ್ಯಾಪ್ತಿಯ 3 ಹಸು, ತಮಿಳುನಾಡಿನ ವ್ಯಾಪನಪಲ್ಲಿಯ1 ಹಸು, ಊತನಗೆರೆಯ 3 ಹಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.