ಕೋಲಾರ ತಾಲೂಕಿನ ಬೆಳ್ಳೂರಿನ ಶ್ರೀಮತಿ ರಮಾಮಣಿ ಸುಂದರ ರಾಜ ಅಯ್ಯಂಗಾರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕೋಲಾರ ತಾಲ್ಲೂಕಿನ ಪದವಿ ಪ್ರದಾನ ಸಮಾರಂಭವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಉದ್ಘಾಟಿಸಿದರು.
ಕೋಲಾರ: ತಂತ್ರಜ್ಞಾನವು ಶಿಕ್ಷಕರ ಬೋಧನೆಯ ಜತೆಗೆ ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ ಇರಬೇಕು. ಅದು ಬಿಟ್ಟು ಭ್ರಮೆಯಲ್ಲಿ ಮುಳುಗಿದರೆ ಅಪಾಯ ತಪ್ಪಿದಲ್ಲ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಎಚ್ಚರಿಸಿದರು.
ತಾಲೂಕಿನ ಬೆಳ್ಳೂರಿನ ಶ್ರೀಮತಿ ರಮಾಮಣಿ ಸುಂದರ ರಾಜ ಅಯ್ಯಂಗಾರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಪದವಿ ಪ್ರದಾನ ಸಮಾರಂಭ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನದಿಂದ ಎಷ್ಟು ಉಪಯೋಗವಿದಿಯೋ ಅಷ್ಟೇ ಅಪಾಯವೂ ಇದೆ. ಇದರ ಭರಾಟೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು
ತಂತ್ರಜ್ಞಾನದ ಜತೆ ಹೆಚ್ಚು ಹಾಕಿರುವ ಯುವಜನ ಬುದ್ಧ ಮತ್ತೆ ಹಾಗೂ ತಂತ್ರಜ್ಞಾನ ಭ್ರಮೆಯಲ್ಲಿ ಕಲಿಕೆ, ಸಂಸ್ಕಾರ, ನೈತಿಕ ಮೌಲ್ಯಗಳಿಂದ ದೂರವಾಗುವುದನ್ನು ತಪ್ಪಿಸಲು ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕಿದೆ. ಶಿಕ್ಷಣ ಸಂಸ್ಥೆ ಆರಂಭಿಸುವುದು ಅಷ್ಟು ಸುಲಭದ ಮಾತಲ್ಲ, ಇಂದು ಬದ್ದತೆ, ಕಲಿಸುವ ಹೊಣೆಗಾರಿಕೆ, ಗುಣಮಟ್ಟದ ಶಿಕ್ಷಣ ನೀಡುವ ಕೌಶಲ್ಯಭರಿತ ಶಿಕ್ಷಕ ವರ್ಗ, ಅಗತ್ಯ ಮೂಲಸೌಲಭ್ಯಗಳನ್ನು ಒಟ್ಟುಗೂಡಿಸಿಕೊಳ್ಳುವುದು ಕಷ್ಟದ ಕೆಲಸ ಇಂತಹ ಸಂದರ್ಭದಲ್ಲಿ ಇಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಶ್ಲಾಘಿಸಿದರು.
ಮಕ್ಕಳ ಸಾಧನೆಯನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸವು ಮುಂದಿನ ಪೀಳಿಗೆಗೆ ಹಾಗೂ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತೆ ಎಂದ ಅವರು, ಇಂತಹ ಪದವಿ ಪ್ರಮಾಣ ಕಾರ್ಯಕ್ರಮಗಳಿಂದಾಗಿ ನಾವೂ ಸಾಧಕರಂತೆ ಆಗಬೇಕು ಎಂದು ನಿರ್ಧರಿಸಿ ಪ್ರಯತ್ನಿಸುವ ಮನಸ್ಥಿತಿ ಮಕ್ಕಳಲ್ಲಿ ಬೆಳೆಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯುವ ಜನಾಂಗ ದೇಶದ ಭವಿಷ್ಯ. ಅವರನ್ನು ಸರಿದಾರಿಯಲ್ಲಿ ನಡೆಸುವ ಹೊಣೆ ಶಿಕ್ಷಣ ಸಂಸ್ಥೆಗಳ ಮೇಲಿದೆ, ಇಲ್ಲವಾದಲ್ಲಿ ದೇಶಕ್ಕೆ ಅದು ಆತಂಕವಾಗುತ್ತದೆ ಎಂದ ಅವರು, ಯುವಜನಾಂಗ ದುಶ್ಚಟಗಳಿಂದ ದೂರವಿರಿ ಎಂದು ಕಿವಿಮಾತಹ ಹೇಳಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಡೀನ್ ಡಾ.ಮುರಳಿಧರ್ ಮಾತನಾಡಿ, ಪದವಿ ಶಿಕ್ಷಣದ ವಿಧಾನವೂ ಬದಲಾಗುತ್ತಿದೆ. ಪದವಿ ಜತೆಗೆ ಕೌಶಲ್ಯವನ್ನು ರೂಪಿಸಿಕೊಂಡಾಗ ಮಾತ್ರವೇ ನಿಮ್ಮ ಜೀವನದ ಹಾದಿ ಸುಗಮವಾಗಲಿದೆ ಎಂದು ಹೇಳಿದರು.
ಬಿಕೆಎಸ್ಎಸ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಆರ್.ಶರಣ್ ಕುಮಾರ್ ಮಾತನಾಡಿ, ಟ್ರಸ್ಟ್ ಉಚಿತ ಶಿಕ್ಷಣದ ಧ್ಯೇಯ ಹೊಂದಿದೆ. ಜತೆಗೆ ಈ ಭಾಗದ ಗ್ರಾಮೀಣ ಜನತೆಗೆ ಉಚಿತ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿದೆ. ಯೋಗ ಜೀವನದ ಪಾಠ ಕಲಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಛಾಯಾದೇವಿ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.