ಭಾನುವಾರಗಳಂದು ಕೆಲ ರೈಲ್ವೆ ಸೇವೆ ಬಂದ್ ಆಗಿದ್ದಕ್ಕೆ ಮಾರಿಕುಪ್ಪಂ& ಬೆಂಗಳೂರು ನಗರ ಸಂಚಾರ ರೈಲಿನಲ್ಲಿ ಕಿಕ್ಕಿರಿದು ಪ್ರಯಾಣಿಸುತ್ತಿರುವ ಜನರು.
- ರೈಲು ಪ್ರಯಾಣ ಸುಖಕರವಲ್ಲ, ನರಕಯಾತನೆ..!
ಬಂಗಾರಪೇಟೆ: ಈ ಭಾಗದ ಜನರಿಗೆ ಬೆಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ಸಾರಿಗೆ ಎಂದರೆ ರೈಲು ಪ್ರಯಾಣ. ನಿತ್ಯ ಸಾವಿರಾರು ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಮತ್ತು ಸಾಮಾನ್ಯ ಪ್ರಯಾಣಿಕರು ಮಾರಿಕುಪ್ಪಂ ಮತ್ತು ಬೆಂಗಳೂರು ನಗರ ಮಾರ್ಗದ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೆ, ಕೆಲ ಭಾನುವಾರಗಳಂದು ಮೆಮು, ಡೆಮೋ ರೈಲುಗಳ ಸಂಚಾರ ಸ್ಥಗಿತಗೊಳಿಸುರುವ ಪರಿಣಾಮ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಭಾನುವಾರ ಮೆಮು ರೈಲುಗಳು ಸಂಚರಿಸದ ಕಾರಣ ಮಧ್ಯಾಹ್ನ ಮಾರಿಕುಪ್ಪಂ ಮತ್ತು ಬೆಂಗಳೂರು ನಡುವೆ ಓಡಾಡುವ ಮಾರಿಕುಪ್ಪಂ ಪ್ಯಾಸೆಂಜರ್ ರೈಲು ಸಂಪೂರ್ಣ ಭರ್ತಿಯಾಗಿತ್ತು. ಆಸನ ಸಿಗುವುದು ದೂರದ ಮಾತಾಗಿದೆ. ಅನೇಕ ಸಂದರ್ಭಗಳಲ್ಲಿ ನಿಂತುಕೊಳ್ಳಲೂ ಜಾಗವಿಲ್ಲದ ಪರಿಸ್ಥಿತಿ ನಿಮಾರ್ಣವಾಗಿರುತ್ತದೆ. ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳು ತೊಂದರೆ ಅನುಭವಿಸುತ್ತಿರುತ್ತಾರೆ.
ರೈಲು ಪ್ರಯಾಣವನ್ನು ಸಾಮಾನ್ಯವಾಗಿ ಸುಖಕರ, ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ಸಾರಿಗೆ ವ್ಯವಸ್ಥೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಭಾನುವಾರದ ದಿನಗಳಲ್ಲಿ ಕೆಜಿಎಫ್, ಬಂಗಾರಪೇಟೆ, ಮಾರಿಕುಪ್ಪಂ ಮತ್ತು ಸುತ್ತಮುತ್ತಲ ಪ್ರದೇಶಗಳ ಜನರಿಗೆ ಆ ಸುಖಕರ ಪ್ರಯಾಣ ನರಕಯಾತನೆ ಆಗುತ್ತಿದೆ. ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ರೈಲ್ವೆ ಇಲಾಖೆ ಸೇವೆಗಳ ವಿಸ್ತರಣೆಯಲ್ಲಿ ಅಗತ್ಯ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಬಸ್ ಅವಲಂಬನೆ: ವಿಶೇಷವಾಗಿ ವಾರಾಂತ್ಯದ ದಿನಗಳಲ್ಲಿ ಬೆಂಗಳೂರಿಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಉದ್ಯೋಗ, ಶಿಕ್ಷಣ, ವೈದ್ಯಕಿಯ ಚಿಕಿತ್ಸೆ, ಕುಟುಂಬ ಕಾರ್ಯಕ್ರಮಗಳು ಮತ್ತು ಪ್ರವಾಸದ ಉದ್ದೇಶಗಳಿಂದ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಇಂತಹ ಸಮಯದಲ್ಲಿ ರೈಲುಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಅಥವಾ ಕೆಲ ಸೇವೆಗಳನ್ನು ರದ್ದುಗೊಳಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದರಿಂದ ಜನರು ಅನಿವಾರ್ಯವಾಗಿ ಖಾಸಗಿ ವಾಹನಗಳು ಅಥವಾ ದುಬಾರಿ ಬಸ್ ಸೇವೆ ಅವಲಂಬಿಸಬೇಕಾಗಿದೆ.
ಈ ಸಮಸ್ಯೆ ಕುರಿತು ಸ್ಥಳಿಯ ಜನಪ್ರತಿನಿಧಿಗಳು ಮತ್ತು ರೈಲ್ವೆ ಅಧಿಕಾರಿಗಳು ಗಂಭೀರವಾಗಿ ಚಿಂತಿಸಬೇಕಾಗಿದೆ. ಭಾನುವಾರ ಬಂದ್ ಮಾಡಿರುವ ಮೆಮು ರೈಲುಗಳ ಸಂಚಾರವನ್ನು ಮರುಪ್ರಾರಂಭಿಸುವುದು ಅಥವಾ ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸುವುದು ಅಗತ್ಯವಾಗಿದೆ. ಪ್ರಯಾಣಿಕರ ಬೇಡಿಕೆ ಹಾಗೂ ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದು ಸಮಯದ ಅಗತ್ಯವಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ರೂಪುಗೊಂಡಿರುವ ರೈಲ್ವೆ ಸೇವೆ ಜನರ ಅವಶ್ಯಕತೆಗೆ ಸ್ಪಂದಿಸಬೇಕಾಗಿದೆ. ಪ್ರಯಾಣಿಕರ ಸಂಕಷ್ಟ ರ್ನಿಲಕ್ಷಿಸುವ ಬದಲು ತಕ್ಷಣದ ಪರಿಹಾರ ಕ್ರಮ ಕೈಗೊಳ್ಳಬೇಕು. ಭಾನುವಾರದ ರೈಲುಗಳ ಕೊರತೆಯಿಂದ ಉಂಟಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ಈ ಭಾಗದ ಜನರಿಗೆ ನೆಮ್ಮದಿಯ ಪ್ರಯಾಣ ಒದಗಿಸುವ ಜವಾಬ್ದಾರಿ ರೈಲ್ವೆ ಇಲಾಖೆ ಹಾಗೂ ಜನಪ್ರತಿನಿಧಿಗಳ ಹೆಗಲ ಮೇಲಿದೆ.
ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಭಾನುವಾರ ಸ್ಥಗಿತಗೊಂಡಿರುವ ರೈಲುಗಳ ಸಂಚಾರವನ್ನು ಪುನರಾರಂಭಿಸಿ ಪ್ರಯಾಣಿಕರ ಕಷ್ಟ್ಟಗಳಿಗೆ ತೆರೆ ಎಳೆಯುವರೆಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.