ಕೋಲಾರ ಎಪಿಎಂಸಿ ಮಾರುಕಟ್ಟೆಗೆ ರೈತರು ತಂದಿರುವ ತರಕಾರಿ. 
ಕೋಲಾರ

ರೈತರ ಖುಷಿ ಕಸಿದ ಯುದ್ದ

ಕಿರುವಾರ ಎಸ್. ಸುದರ್ಶನ್ ಕೋಲಾರ
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಜಿಲ್ಲೆಯ ಕೃಷಿ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಯುದ್ಧವು ಇರಾನ್ ಮತ್ತು ಇರಾಕ್‌ಗೆ ಸಿಮೀತವಾದರೂ ಜಿಲ್ಲೆಯ ಹೋಟೆಲ್ ಸೇರಿದಂತೆ ವಿವಿಧ ಕ್ಷೇತ್ರದ ಮೇಲೆ ಪರಿಣಾಮ ಬೀರತೊಡಗಿದೆ. ತರಕಾರಿಗಳ ಬೇಡಿಕೆ ಗಣನೀಯವಾಗಿ ಕುಸಿಯುವಂತೆ ಮಾಡಿದೆ.
ಬಂಡವಾಳ ಹಾಕಿ ಕೈ ಸುಟ್ಟುಕೊಂಡ ರೈತರು
ದಕ್ಷಿಣ ಭಾರತ ಭಾಗದಲ್ಲಿ ಕೋಲಾರ ಜಿಲ್ಲೆಯ ಕೃಷಿ ಪ್ರಧಾನವಾಗಿದೆ. ಇಲ್ಲಿನ ರೈತರು ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆದು ಹೊರ ರಾಜ್ಯ, ಹೊರ ದೇಶಗಳಿಗೂ ರಫ್ತು ಮಾಡುತ್ತಾರೆ. ಯುದ್ಧದಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕುಸಿದಿದೆ.
ತೋಟಗಳಲ್ಲಿರುವ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆ ತರಲಾಗುತ್ತಿದ್ದರೂ ಬೆಲೆ ಕುಸಿದಿದ್ದರಿಂದ ತರಕಾರಿ ಸಕಾಲಕ್ಕೆ ಮಾರಾಟವಾಗದೆ ಉಳಿದುಕೊಳ್ಳುತ್ತಿದೆ. ಹೊರ ರಾಜ್ಯ, ದೇಶಗಳಲ್ಲಿ ಬೇಡಿಕೆಯಿಲ್ಲದ ಕಾರಣ ಬೇಡಿಕೆ ಕುಸಿದಿದ್ದು, ಏನು ಮಾಡಬೇಕೆಂಬ ತೋಚದೆ ತರಕಾರಿಯನ್ನು ಮಾರುಕಟ್ಟೆಯಲ್ಲೇ ಬಿಟ್ಟು ಹೋಗುತ್ತಿದ್ದಾರೆ.
ತರಕಾರಿ ಉತ್ಪಾದನೆಯ ಶೇ.60 ಹೋಟೆಲ್ ಮತ್ತು ಆಹಾರ ಉದ್ಯಮಕ್ಕೆ ಸರಬರಾಜು ಆಗುತ್ತಿತ್ತು. ಆದರೆ, ಹೋಟೆಲ್‌ಗಳು ಮುಚ್ಚಿರುವುದರಿಂದ ತರಕಾರಿಗೆ ಬೇಡಿಕೆ ಇಲ್ಲದಂತಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಗಣನೀಯ ದಿನದಿಂದ ದಿನಕ್ಕೆ ಕುಸಿಯತೊಡಗಿದೆ.
ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ, ಮಾಲೂರು, ಕೋಲಾರ ಹಾಗೂ ಶ್ರೀನಿವಾಸಪುರ ಮಾರುಕಟ್ಟೆಗಳಿದ್ದು, ವಹಿವಾಟು ಪ್ರತಿದಿನ ಜೋರಾಗಿಯೆ ನಡೆಯುತ್ತದೆ. ಉತ್ಪಾದನೆಯಾಗಿರುವ ಟೊಮ್ಯಾಟೊ ಸೇರಿ ಇತರ ತರಕಾರಿಗಳು ಚೆನ್ನೈ, ಪುನಾ, ಗುಜರಾಜ್, ದೆಹಲಿ ಮೂಲಕ ಅಮೆರಿಕಾ, ಜಪಾನ್, ಬಾಂಗ್ಲಾ, ಇಸ್ರೇಲ್ ಸೇರಿ ಹಲವು ದೇಶಗಳಿಗೆ ಸರಬರಾಜು ಆಗುತ್ತದೆ. ಈಗಲೂ ಸಹ ಯುದ್ಧ ಮುಂದುವರಿದಿರುವ ಪರಿಣಾಮ ವಿಮಾನ ಹಾರಾಟ ಸ್ಥಗಿತವಾಗಿದ್ದು, ಇದು ರೈತರ ಮೇಲೆ ವ್ಯತಿರಿಕ್ತ ಪರೀಣಾಮ ಬೀರುವಂತಾಗಿದೆ.
* ದಿಢೀ‌ರ್ ಬೆಲೆ ಕುಸಿತ
ಮಾರುಕಟ್ಟೆಯಲ್ಲಿ ಕಳೆದ ತಿಂಗಳು 40 ರಿಂದ 50 ರೂ.ನಂತೆ ಮಾರಾಟವಾಗುತ್ತಿದ್ದ ತರಕಾರಿ ಈಗ 10ರಿಂದ 20 ರೂ.ಗೆ ಕುಸಿದಿವೆ. ಬೀನ್ಸ್ 25, ಬೀಟ್ಯೂಟ್ 10ರೂ., ಹಾಗಲಕಾಯಿ 12 ರೂ., ಬದನೆಕಾಯಿ 8 ರೂ.. ದಪ್ಪ ಮೆಣಸಿನಕಾಯಿ 15 ರೂ., ಹೂವುಕೋಸು ಕೇವಲ 3 ರೂ.ಗೆ ಮಾರಾಟವಾಗುತ್ತಿದೆ. ಮೂಲಂಗಿ, ಹೀರೆಕಾಯಿ, ತೊಂಡೆಕಾಯಿ, ಸಿಹಿ ಜೋಳ, ಟೊಮ್ಯಾಟೊ ದರ ಸಹ ಗಣನೀಯವಾಗಿ ಕುಸಿದಿವೆ. ಇದಕ್ಕೆಲ್ಲ ವಾಣಿಜ್ಯ ಗ್ಯಾಸ್ ಸಮಸ್ಯೆಯಾಗಿ ಹೋಟೆಲ್‌ಗಳು ಮುಚ್ಚುತ್ತಿರುವುದರಿಂದ ಪ್ರಮುಖ ಕಾರಣವಾಗಿದೆ.
* ಬೆಳೆ ಬೆಳೆಯುವುದೇ ಸವಾಲು
ಬಯಲು ಸೀಮೆ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಬೆಳೆ ಮಾಡುವುದು ಅಷ್ಟು ಸುಲಭದ ಮಾತಲ್ಲ, ಆದರೂ ಸಹ ಜಿಲ್ಲೆಯ ರೈತರು ಹಿಂಜರಿಯದೆ ಕೊಳವೆಬಾವಿಗಳಲ್ಲಿ ಲಭ್ಯವಿರುವ ನೀರನ್ನೆ ಬಳಕೆ ಮಾಡಿಕೊಂಡು ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ತರುತ್ತಾರೆ. ಆದರೆ, ಇಲ್ಲಿ ಬೆಲೆ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ. ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಇದೇ ರೀತಿಯ ಪರಿಸ್ಥಿತಿಯಿದೆ.
ಅಕ್ಕಪಕ್ಕದ ರಾಜ್ಯಗಳಲ್ಲೂ ತರಕಾರಿ ಉತ್ಪಾದನೆಯಿದ್ದು, ಕಳೆದ ಒಂದುವರೆ ತಿಂಗಳಿಂದಲೂ ನಮ್ಮಲ್ಲಿ ತರಕಾರಿ ಬೆಲೆ ಕಡಿಮೆಯಿದೆ. ಈಗಿರುವ ಫಸಲು ಖಾಲಿಯಾದರೆ ಮುಂದಿನ ದಿನಗಳಲ್ಲಿ ದರ ಏರಿಕೆಯಾಗುವ ನಿರೀಕ್ಷೆಯಿದೆ.
- ಕಿರಣ್ ಕುಮಾರ್, ಕಾರ್ಯದರ್ಶಿ, ಎಪಿಎಂಸಿ, ಕೋಲಾರ
ಯುದ್ಧದಿಂದ ಗ್ಯಾಸ್‌ ಲಭ್ಯವಾಗುತ್ತಿಲ್ಲ ಎಂದು ಹೋಟೆಲ್‌ಗೆ ಬೀಗ ಹಾಕುತ್ತಿದ್ದಾರೆ. ಮಾರುಕಟ್ಟೆಯಿಂದ ಕೆಲ ತರಕಾರಿಗಳು ಶೇ.60 ನೇರವಾಗಿ ಹೋಟೆಲ್‌ಗಳಿಗೆ ಹೋಗುತ್ತಿತ್ತು. ಇದೀಗ ಸ್ಥಗಿತಗೊಂಡಿರುವುದರಿಂದ ತರಕಾರಿಗೆ ಬೇಡಿಕೆ ಕುಸಿದಿದೆ. ಪರಿಸ್ಥಿತಿಯು ಹತೋಟಿಗೆ ಬರುವ ತನಕ ಬೆಲೆ ದೊರೆಯುವುದು ಕಷ್ಟ.
- ಪುಟ್ಟರಾಜು ಮಂಡಿ ಮಾಲೀಕ, ಕೋಲಾರ