ಕೋಲಾರದಲ್ಲಿ ಆನೆ ಅಂಬಾರಿಯಲ್ಲಿ ವಿರಾಜಿಸಿದ ತಾಯಿ ಕೋಲಾರಮ್ಮ.
- ಸ್ತಬ್ಧ ಚಿತ್ರಗಳ ಮೆರವಣಿಗೆ, ಕಲಾ ತಂಡಗಳಿಂದ ನೃತ್ಯ ಪ್ರದರ್ಶನ
- ವಿವಿಧ ಕ್ಷೇತ್ರಗಳ ೧೮ ಮಂದಿಗೆ ರಾಜ್ಯೋತ್ಸವ ಪುರಸ್ಕಾರ
ಕೋಲಾರ: ರಾಜ್ಯದ ಗಡಿ ಜಿಲ್ಲೆಯಾದ ಕೋಲಾರದಲ್ಲಿ ೭೦ನೇ ರಾಜ್ಯೋತ್ಸವದ ಆಚರಣೆಯು ಸಂಭ್ರಮ ಮನೆ ಮಾಡಿತ್ತು. ಶನಿವಾರ ವಿವಿಧ ಸಂಘ-ಸಂಸ್ಥೆಗಳು, ವಿವಿಧ ಸರ್ಕಾರಿ ಇಲಾಖೆಗಳಿಂದ ಕರೆ ತಂದಿದ್ದ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು. ಸತತ ೨ನೇ ಬಾರಿ ಕೋಲಾರಮ್ಮ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತಿದ್ದ ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಆನೆಯ ಅಂಬಾರಿ ನೋಡುಗರ ಗಮನ ಸೆಳೆಯಿತು.
ಕೀಲುಕುದುರೆ, ಡೊಳ್ಳು ಕುಣಿತ, ತಮಟೆ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಎಂಜಿ ರಸ್ತೆಯಿಂದ ಶುರುವಾದ ಮೆರವಣಿಗೆಯೂ, ಬಸ್ ನಿಲ್ದಾಣ, ದೊಡ್ಡ ಪೇಟೆ ಮೂಲಕ ಸಾಗಿತು. ವಿವಿಧ ಕ್ಷೇತ್ರಗಳ ೧೮ ಮಂದಿ ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ನಗರಸಭೆ ಅಧ್ಯಕ್ಷೆ ಲಕ್ಷ್ಮೀಕ್ಷ್ಮಿದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ವೈ.ಶಿವಕುವಾರ್, ಕಸಾಪ ಅಧ್ಯಕ್ಷ ಗೋಪಾಲಗೌಡ, ಎಸಿ ಡಾ.ಮೈತ್ರಿ, ತಹಸೀಲ್ದಾರ್ ಡಾ.ಎಂ.ನಯನಾ, ಭುವನೇಶ್ವರಿ ಕನ್ನಡ ಸಂದ ಅಧ್ಯಕ್ಷ ತ್ಯಾಗರಾಜ್ ಇದ್ದರು.
ರಾಜ್ಯೋತ್ಸವ ಆಚರಣೆಗೆ ಜಿಲ್ಲಾಡಳಿತ ಸತತ ಪೂರ್ವಭಾವಿ ಸಭೆ ನಡೆಸಿ, ಸಮಿತಿ ರಚನೆ ಮಾಡಿ ಇಲಾಖಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪೆಂಡಾಲ್ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಪ್ರೇಕ್ಷಕರು ಬಿಸಿಲಿಗೆ ಸೋರಗುವಂತಾಯಿತು. ಪ್ರೇಕ್ಷಕರು ನೆರಳಿಗಾಗಿ ವಾಣಿಜ್ಯ ಮಳಿಗೆಗಳ ಮುಂದೆ ನಿಂತರು. ಇದರಿಂದ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಖುರ್ಚಿಗಳು ಖಾಲಿ ಖಾಲಿಯಾಗಿದ್ದವು. ಬಿಸಿಲಿಗೆ ಬಸವಳಿದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮ ಮುಗಿಯುವ ಮುಂಚೆಯೇ ಮನೆಯತ್ತ ಹೆಜ್ಜೆ ಹಾಕಿದರು.