ಸಾಂದರ್ಭಿಕ ಚಿತ್ರ 
ಕೋಲಾರ

ಬಂಗಾರಪೇಟೆ ತೋಟಗಳಲ್ಲಿ ಪಸರಿಸಿದ ಹಲಸಿನ ಘಮಲು

ವಿ.ಶಿವಾರೆಡ್ಡಿ, ಬಂಗಾರಪೇಟೆ
ಪ್ರಸಕ್ತ ವರ್ಷ ಕರ್ನಾಟಕ ಸೇರಿ ದಕ್ಷಿಣ ಭಾರತದಾದ್ಯಂತ ಹಲಸಿನ ಹಣ್ಣಿನ ಇಳುವರಿ ಗಮನಾರ್ಹವಾಗಿ ಹೆಚ್ಚಾಗಿದೆ. ಹವಾಮಾನದ ಸಮತೋಲನ, ಸಕಾಲಿಕ ಮಳೆ ಮತ್ತು ರೈತರು ಅಳವಡಿಸಿಕೊಂಡ ನವೀನ ಕೃಷಿ ಪದ್ದತಿಗಳು ಈ ಬಾರಿ ಆರೋಗ್ಯಕರ ಇಳುವರಿಗೆ ಪ್ರಮುಖ ಕಾರಣವಾಗಿವೆ.
ಹಲಸು ಉಷ್ಣವಲಯದ ಬೆಳೆಯಾಗಿದ್ದು, ಈ ವರ್ಷ ಮಳೆಗಾಲಕ್ಕೂ ಮುನ್ನ ತಾಪಮಾನವು ಸ್ಥಿರವಾಗಿತ್ತು. ಹೂವು ಬಿಡುವ ಹಂತದಲ್ಲಿ ಗಾಳಿ ಮತ್ತು ತೇವಾಂಶದ ಸಮತೋಲನವು ಹಣ್ಣಿನ ಗುಣಮಟ್ಟ ಹೆಚ್ಚಿಸಿದೆ. ಜಿಲ್ಲೆಯಾದ್ಯಂತ ರೈತರು ಈಗ ಸಾಂಪ್ರದಾಯಿಕ ವಿಧಾನಗಳ ಜತೆಗೆ ಸುಧಾರಿತ ತಂತ್ರಜ್ಞಾನ, ಉತ್ತಮ ತಳಿ ಆಯ್ಕೆ ಹಾಗೂ ಸಾವಯವ ಗೊಬ್ಬರ ಬಳಕೆಗೆ ಮುಂದಾಗಿದ್ದಾರೆ. ಮರಗಳವೈಜ್ಞಾನಿಕ ಬೆಳವಣಿಗೆ ಹಾಗೂ ನೀರಾವರಿ ನಿರ್ವಹಣೆಯಿಂದ ಹಣ್ಣಿನ ಗಾತ್ರ ಮತ್ತು ಸಿಹಿಯಲ್ಲೂ ಹೆಚ್ಚಳ ಕಂಡುಬಂದಿದೆ. ಹಲಸು ವಿಟಮಿನ್ ಎ, ಸಿ, ಪೊಟಾಷಿಯಂ ಮತ್ತು ನಾರು ಪದಾರ್ಥಗಳಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾಲೇಜು ತೋಟ ಸಂಶೋಧನಾ ಕೇಂದ್ರ
ಕೋಲಾರದ ತೋಟಗಾರಿಕಾ ಕಾಲೇಜು ಆವರಣದಲ್ಲಿ 1970ರ ದಶಕದಲ್ಲಿ ಸ್ಥಾಪಿಸಲಾದ ಹಲಸಿನ ತೋಟವು ಇಂದು ಮಾದರಿ ಸಂಶೋಧನಾ ಕೇಂದ್ರವಾಗಿ ಹೊರಹೊಮ್ಮಿದೆ. ಇಲ್ಲಿ ನೂರಾರು ವಿವಿಧ ತಳಿಯ ಹಲಸಿನ ಮರಗಳಿದ್ದು, ತಳಿ ಸಂರಕ್ಷಣೆ ಮತ್ತು ಹೊಸ ಸಂಶೋಧನೆಗಳಿಗೆ ವೇದಿಕೆಯಾಗಿದೆ.
ಸವಾಲುಗಳ ನಡುವೆ ರೈತ
ಇಳುವರಿ ಚೆನ್ನಾಗಿದ್ದರೂ ಸಾರಿಗೆ ಕೊರತೆ ಮತ್ತು ಶೇಖರಣಾ ಸೌಲಭ್ಯಗಳ ಅಭಾವ ರೈತರನ್ನು ಕಾಡುತ್ತಿದೆ. ಹಲಸು ಬೇಗನೆ ಕೊಳೆಯುವ ಗುಣ ಹೊಂದಿರುವುದರಿಂದ, ತಕ್ಷಣದ ಮಾರಾಟ ಅಥವಾ ಸಂಸ್ಕರಣೆ ಅನಿವಾರ್ಯ. ಸರ್ಕಾರ ಮತ್ತು ಸಹಕಾರಿ ಸಂಸ್ಥೆಗಳು ಜಿಲ್ಲೆಯಲ್ಲಿ ಶೀಥಲೀಕರಣ ಘಟಕ ಹಾಗೂ ಮೌಲ್ಯವರ್ಧನೆ ಘಟಕಗಳನ್ನು ಸ್ಥಾಪಿಸಿದರೆ ರೈತರಿಗೆ ಮತ್ತಷ್ಟು ಲಾಭ ಸಿಗಲಿದೆ.
ನಗರ ಪ್ರದೇಶಗಳಲ್ಲಿ ಕ್ರೇಜ್
ಮಾರುಕಟ್ಟೆಯಲ್ಲಿ ಹಲಸಿಗೆ ಈ ಬಾರಿ ಭಾರಿ ಬೇಡಿಕೆ ಇದೆ. ಕೇವಲ ಹಣ್ಣು ಮಾತ್ರವಲ್ಲದೆ, ಹಲಸಿನ ಬೀಜ ಹಾಗೂ ಪಲ್ಯದ ಉತ್ಪನ್ನಗಳಿಗೂ ಜನ ಮುಗಿಬೀಳುತ್ತಿದ್ದಾರೆ. ವಿಶೇಷವಾಗಿ ಚಿಪ್ಸ್, ಜ್ಯೂಸ್, ಐಸ್ ಕ್ರೀಮ್ ಮತ್ತು ಶಾಕಾಹಾರಿಗಳಿಗೆ 'మిటో యా౯య వాగి ಹಲಸಿನ ಬಳಕೆ ನಗರ ಪ್ರದೇಶಗಳಲ್ಲಿ ಜನಪ್ರಿಯವಾಗುತ್ತಿದೆ.
ಮಿಶ್ರ ತೋಟಗಾರಿಕಾ ಪದ್ಧತಿ ಬೆಳೆ
ಜಿಲ್ಲೆಯಲ್ಲಿ ಹಲಸನ್ನು ಹೆಚ್ಚಾಗಿ ಮಿಶ್ರ ತೋಟಗಾರಿಕೆ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಗೆ ಹೆಚ್ಚಿನ ಆಸಕ್ತಿ ತೋರುತ್ತಿರುವ ರೈತರು, ಹಲಸಿನ ಹಿಟ್ಟು ಹಾಗೂ ಇತರ ಮೌಲ್ಯವರ್ಧಿತ ಉತ್ಪನ್ನಗಳತ್ತ ಮುಖ ಮಾಡಿದ್ದಾರೆ.