ಶ್ರೀನಿವಾಸಪುರ ತಾಲೂಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅಧಿಕಾರಿಗಳ ಹಾಜರಾತಿ ಪರಿಶೀಲಿಸಿದರು. ತಹಸೀಲ್ದಾರ್ ಜಿ.ಎನ್. ಸುಧೀಂದ್ರ, ಡಾ.ಸರ್ವೇಶ್ ಇದ್ದರು.
- ತಾಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡಿ
ಶ್ರೀನಿವಾಸಪುರ: ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್ ಅವರು ಬುಧವಾರ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಕಚೇರಿಗೆ ತಡವಾಗಿ ಬರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ, ಗೈರಾಗಿದ್ದ ಉಪನೋಂದಣಾಧಿಕಾರಿ ರಮ್ಯಾ ವಿರುದ್ಧ ಶಿಸ್ತು ಕ್ರಮಕ್ಕೆ ಕೇಂದ್ರ ಐಜಿಆರ್ ಅಧಿಕಾರಿಗಳಿಗೆ ಪತ್ರ ಬರೆದು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಎಚ್ಚರಿಕೆ ನೀಡಿದರು.
ತಾಲೂಕು ಕಚೇರಿ, ನೋಂದಣಾಧಿಕಾರಿಗಳ ಕಚೇರಿ, ಶಿರಸ್ತೇದಾರ್, ನಾಡ ಕಚೇರಿ ಸೇರಿ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿಗೆ ಸಮಯ ಪಾಲನೆ ಶಿಸ್ತು, ಸ್ವಚ್ಛತೆ, ಸಮವಸ ಎಲ್ಲವನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ನೋಂದಣಾಧಿಕಾರಿ ಗೈರಾಗಿದ್ದು, ಹಾಜರಾತಿ ಪುಸ್ತಕ ಪರಿಶೀಲಿಸಿ ಸ್ಥಳದಲ್ಲಿಯೇ ಸಂಬಂಧಿಸಿದ ಮೇಲಧಿಕಾರಿಗಳಿಗೆ ಪತ್ರ ಬರೆದರು.
ತಾಲೂಕು ಕಚೇರಿ ಪ್ರವೇಶ ದ್ವಾರದಲ್ಲಿ ವಿದ್ಯುತ್ ಸರಬರಾಜು ನಿಯಂತ್ರಣ ಕಿರಿದಾದ ಕೊಠಡಿ ವೀಸಿ ಬೇಡವಾದ ಸಲಕರಣಿಗಳು, ಬಾಕ್ಸ್ಗಳು ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ವಿವಿಧ ಕೊಠಡಿಗೆ ಭೇಟಿ ನೀಡಿದಾಗ ಬೀರುಗಳು ಮತ್ತು ಟೇಬಲ್ ಕಡತಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಧೂಳು ಹತ್ತುತ್ತಿರುವುದನ್ನು ಗಮನಿಸಿ ಸ್ವಚ್ಛತೆ ಕೈಗೊಳ್ಳುವಂತೆ ನಿರ್ದೇಶಿಸಿದರು.
ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಲು ವಿನೂತನವಾಗಿ "ಪ್ರಜಾಸೇವಾ ಕಾರ್ಯಕ್ರಮ' ಜಾರಿಗೆ ತಂದಿದ್ದು, ಸೆ.5ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ನಂತರ ಪ್ರತಿ ಬುಧವಾರ ಕಾರ್ಯಕ್ರಮ ನಡೆಸಲಾಗುವುದು, ರ್ನಿದಿಷ್ಟ ಸ್ಥಳ ಗುರುತಿಸಿ ಕಾರ್ಯಕ್ರಮದ ಬಗ್ಗೆ ಪ್ರಚಾರಪಡಿಸಿ ಎಲ್ಲರನ್ನು ಬರಮಾಡಿಕೊಂಡು ಜನತೆಗೆ ಶೌಚಗೃಹ ಸೌಲಭ್ಯ, ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಿ ಜನರು ತಮ್ಮ ಅಹವಾಲು ಹೇಳಿಕೊಳ್ಳಲು ಸ್ಥಳಾವಕಾಶ ಸೌಲಭ್ಯಗಳನ್ನು ಒದಗಿಸಿಕೊಂಡು ಪ್ರಜಾಸೇವಾ ಕಾರ್ಯಕ್ರಮ ಯಶಸ್ವಿ ಮಾಡಲು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು.
ಅಧಿಕಾರಿಗಳ ಸಭೆ: ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಜನರ ಕೆಲಸಗಳು ವಿಳಂಬವಾಗಬಾರದು, ತಿರಗಾಡಿಸಿಕೊಳ್ಳಬಾರದು, ಗೌರವ ಕೊಡಬೇಕು, ರೈತರು ಕಚೇರಿಗೆ ಬಂದಾಗ ಆಸನ ವ್ಯವಸ್ಥೆ, ಕುಡಿಯುವ ನೀರು ಇತರೆ ಸೌಕರ್ಯ ಕಲ್ಪಿಸಿ ಸ್ವಚ್ಛತೆ ಆದ್ಯತೆ ನೀಡಬೇಕು ಎಂದು ಡಿಸಿ ನಿರ್ದೇಶನ ನೀಡಿದರು. ಸ್ಥಳದಲ್ಲಿ ಜನರ ಅಹವಾಲು ಬಗೆಹರಿಯಬೇಕು, ಇಲ್ಲವಾದಲ್ಲಿ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿಗಳು, ದಿನ ಪೂರ್ತಿ ಲಭ್ಯವಿದ್ದು, ಇಲ್ಲಿಗೆ ಬಂದು ತಮ್ಮ ಅಹವಾಲು ಸಲ್ಲಿಸಬಹುದು ಎಂದರು
ಪಿಂಚಣಿ ಎಲ್ಲರಿಗೂ ಬರಲಿದೆ: ಸಾಮಾಜಿಕ ಭದ್ರತೆ ಅಡಿ ವೃದ್ಧಾಪ್ಯವೇತನ, ಸಂಧ್ಯಾ ಸುರಾ ಯೋಜನೆ, ವಿಧವಾವೇತನ, ಪಿಂಚಣಿದಾರರಿಗೆ ಆದಾಯ ಪ್ರಮಾಣ 32 ಸಾವಿರ ರೂ.ನಿಗದಿ ಪಡಿಸಲಾಗಿದ್ದು, ಇದರ ಬಗ್ಗೆ ಆಂತಕ ಬೇಡ. 1 ಲಕ್ಷ 20 ಸಾವಿರವರಿಗೂ ಆದಾಯಕ್ಕೆ ಅವಕಾಶ ನೀಡಿದ್ದಾರೆ. ಪ್ರತಿಯೊಬ್ಬರಿಗೂ ಹಿಂದಿನಂತೆ ತಮ್ಮ ಖಾತೆಗಳಿಗೆ ಜಮಾ ಆಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.