ಕೋಲಾರ ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಬೀದಿನಾಯಿಗಳ ಹಾವಳಿ ತಡೆಗಟ್ಟುವ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನ ಮಾಡುವ ಕುರಿತು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿದರು. ಎಸ್.ಎಂ.ಮಂಗಳಾ, ಟಿ.ಕೆ.ರಮೇಶ್ ಇದ್ದರು.
ಕೋಲಾರ: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಯಿ ಉಪಟಳ ತಪ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಕ್ರಮವಹಿಸಬೇಕು. ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿ ಆಶ್ರಯ ಕೇಂದ್ರಕ್ಕೆ ಸ್ಥಳಾಂತರ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಬೀದಿನಾಯಿಗಳ ಹಾವಳಿ ತಡೆಗಟ್ಟುವ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನ ಮಾಡುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, 100 ನಾಯಿಗಳ ಆಶ್ರಯ ಕೇಂದ್ರಕ್ಕೆ ತಿಂಗಳಿಗೆ ಅಂದಾಜು 3.33 ಲಕ್ಷ ವೆಚ್ಚವಾಗಲಿದ್ದು, ಈ ಕ್ರಮ ವಹಿಸಲು ಸರ್ಕಾರ ಈಗ ಅನುದಾನ ಬಿಡುಗಡೆ ಮಾಡಿದೆ. ಆ ಹಣ ಬಳಸಿಕೊಂಡು ಸೌಕರ್ಯ ಸೃಷ್ಟಿ ಮಾಡಬೇಕು ಎಂದು ಸಲಹೆ ನೀಡಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿನಾಯಿಗಳನ್ನು ಹಿಡಿದು ತಾತ್ಕಾಲಿಕ ಆಶ್ರಯ ಕೇಂದ್ರ ಬಿಡಲಾಗುವುದು. ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 79,281 ಬೀದಿನಾಯಿಗಳು ಇವೆ ಎಂದು ತಿಳಿಸಿದರು.
ಜಿಲ್ಲೆಯ ನಗರ ಹಾಗೂ ಪಟ್ಟಣ ವ್ಯಾಪ್ತಿಯ ಖಾಸಗಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣ ಆವರಣದಲ್ಲಿ ಸುಮಾರು 1,065 ಬೀದಿನಾಯಿಗಳಿವೆ. ಅದೇ ರೀತಿ ಗ್ರಾಮಾಂತರ ಪ್ರದೇಶದ ಶಾಲಾ, ಆಸ್ಪತ್ರೆ ಆವರಣದಲ್ಲಿ 9,429 ಬೀದಿನಾಯಿಗಳಿವೆ. ಮೊದಲಿಗೆ ಈ ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿ ಆಶ್ರಯ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುವುದು ಎಂದರು.
ನಗರ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುವ ಜಾಗದಲ್ಲಿಯೇ ತಾತ್ಕಾಲಿಕ ಶೆಡ್ ಅಳವಡಿಸಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ಬೀದಿನಾಯಿಗಳು ಮತ್ತೆ ಸಂಸ್ಥೆಗಳ ಆವರಣ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಮೇಲ್ವಿಚಾರಣೆ ಮಾಡಲು ಆಯಾ ಸಂಸ್ಥೆಗಳು ಒಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಗ್ರಾಮಾಂತರ ಪ್ರದೇಶದ ಬೀದಿನಾಯಿಗಳಿಗೂ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲು ಕ್ರಮವಹಿಸಿ ನಿರ್ದೇಶನ ನೀಡಲಾಗಿದೆ. ತಾಲ್ಲೂಕು ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಶ್ರಯ ಕೇಂದ್ರ ನಿರ್ಮಿಸಬೇಕು. ಶಾಲೆ, ಆಸ್ಪತ್ರೆ ಆವರಣಗಳಲ್ಲಿರುವ ನಾಯಿಗಳನ್ನು ಸ್ಥಳಾಂತರಿಸಬೇಕು ಎಂದರು.
ಆಶ್ರಯ ಕೇಂದ್ರದಲ್ಲಿ ಬೀದಿನಾಯಿಗಳ ಪೋಷಣೆ ಕೂಡ ಮುಖ್ಯವಾದದು. ಪ್ರಾಣಿಗಳ ಕಲ್ಯಾಣ ಮಂಡಳಿ ಮಾರ್ಗಸೂಚಿಯಂತೆ ನಿತ್ಯ ಎರಡು ಬಾರಿ ಊಟ, ಔಷಧೋಪಾಚಾರ, ಸ್ವಚ್ಛತೆ, ಲಸಿಕೆ ಹಾಕಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ನಗರ ಯೋಜನಾ ಅಧಿಕಾರಿ ಅಂಬಿಕಾ, ನಗರಸಭೆ ಆಯುಕ್ತ ನವೀನ್ ಚಂದ್ರ, ಪಶು ಇಲಾಖೆ ಉಪನಿರ್ದೇಶಕ ಟಿ.ಕೆ.ರಮೇಶ್, ಎಲ್ಲಾ ತಾಲ್ಲೂಕುಗಳ ಇಒಗಳು, ನಗರಸಭೆ, ಪುರಸಭೆ ಮುಖ್ಯಸ್ಥರು ಇದ್ದರು.