ಅರಣ್ಯ, ರೈತರ ಮಂಜೂರಾತಿ ಭೂಮಿ ಗೊಂದಲ ನಿವಾರಣೆಗೆ ಕ್ರಮ ಡಿಸಿ ಎಂ.ಆರ್. ರವಿಕುಮಾರ್ ಸೂಚನೆ
ಕೋಲಾರ: ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಯಾವುದೇ ವಿವಾದವಿಲ್ಲ, ಅರಣ್ಯ ಭೂಮಿ ಸಂರಕ್ಷಿಸುವುದರ ಜತೆಗೆ ಸರ್ಕಾರದಿಂದ ಹಕ್ಕು ಪಡೆದ ರೈತರ ಹಿತಾಸಕ್ತಿಯನ್ನೂ ರಕ್ಷಿಸುವುದು ಸರ್ಕಾರದ ಆಶಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಸ್ಪಷ್ಟಪಡಿಸಿದರು.
ಜಿಲ್ಲೆಯಾದ್ಯಂತ ತಲೆಮಾರುಗಳಿಂದ ಅರಣ್ಯ ಭೂಮಿ ಹಾಗೂ ರೈತರ ಹಿಡುವಳಿ ಜಮೀನುಗಳು ಒಟ್ಟೊಟ್ಟಿಗೆ ಸಾಗುತ್ತಾ ಬಂದಿದ್ದು, 1886, 1900 ಹಾಗೂ 1931 ಮತ್ತು 1941ರ ಅಧಿಸೂಚನೆಗಳು ಸೇರಿದಂತೆ ಮೈಸೂರು ಅರಣ್ಯ ಕಾಯ್ದೆ, ಕರ್ನಾಟಕ ಅರಣ್ಯ ಕಾಯ್ದೆ, ಭಾರತೀಯ ಅರಣ್ಯ ಕಾಯ್ದೆ ಹಾಗೂ ಚೆನ್ನೈ ಅರಣ್ಯ ಕಾಯ್ದೆಗಳಡಿಯ ಅಧಿಸೂಚಿತ ಅರಣ್ಯ ಪ್ರದೇಶ ಮತ್ತು ಸಕ್ಷಮ ಪ್ರಾಧಿಕಾರ ಹಾಗೂ ಶಾಸನಬದ್ಧ ಸಮಿತಿಗಳಿಂದ ರೈತರಿಗೆ ಮಂಜೂರಾಗಿರುವ ಜಮೀನುಗಳ ಕುರಿತು ಸ್ಪಷ್ಟತೆ ತರಲು ಗುರುವಾರ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ಏರ್ಪಡಿಸಲಾಗಿತ್ತು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್, ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಂಜೂರಾತಿ ಜಮೀನುಗಳು ಹಾಗೂ ಅರಣ್ಯ ಭೂಮಿಯ ಪಟ್ಟಿಯನ್ನು ಪ್ರತ್ಯೇಕಿಸಿ ವರ್ಗೀಕರಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಜಿಲ್ಲೆಯಲ್ಲಿ ಅಧಿಸೂಚಿತ ಅರಣ್ಯ (ನೋಟಿಫೈಡ್ ಫಾರೆಸ್ಟ್) ಪರಿಶೀಲನೆ ಕಾರ್ಯ ಶೇ. 100ಪೂರ್ಣಗೊಂಡಿದೆ. ಸಂಭಾವ್ಯ ಅರಣ್ಯ ಪ್ರದೇಶ (ಪೊಟೆನ್ಷಿಯಲ್ ಫಾರೆಸ್ಟ್ ಲೈಕ್ ಏರಿಯಾ) ಪರಿಶೀಲನೆ ಶೇ. 70 ಮುಗಿದಿದ್ದು, ಬಾಕಿ ಇರುವ ಶೇ. 30 ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರತಿ ವಾರ ಕನಿಷ್ಠ ಒಂದು ಅಥವಾ ಎರಡು ಸಭೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಡೀಮ್ಡ್ ಫಾರೆಸ್ಟ್ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶೇ. 90 ಪ್ರಕರಣಗಳು ಇತ್ಯರ್ಥವಾಗಿದ್ದು, 15 ಪ್ರಕರಣ ಬಾಕಿ ಇದ್ದು, ಅವುಗಳನ್ನು ಇನ್ನೊಂದು ವಾರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ನ.5ರಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಒಂದು ತಿಂಗಳೊಳಗೆ ಅರಣ್ಯ ಅಧಿಸೂಚನೆ ಮತ್ತು ರೈತರ ಮಂಜೂರಾತಿ ಜಮೀನುಗಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಪ್ರಪ್ರಥಮವಾಗಿ ಶ್ರೀನಿವಾಸಪುರ ತಾಲೂಕಿನ 6 ಅಧಿಸೂಚನೆಗಳ ವ್ಯಾಪ್ತಿಗೆ ಬರುವ ಗ್ರಾಮಗಳ ದಾಖಲೆಗಳು, ‘ಸಿ’ ಸ್ಟೇಟ್ಮೆಂಟ್ ಹಾಗೂ ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ಜಮೀನುಗಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಇನ್ನೊಂದು ತಿಂಗಳೊಳಗೆ ಬಾಕಿ ಇರುವ ಎಲ್ಲ ಪರಿಶೀಲನಾ ಕಾರ್ಯಗಳನ್ನು ಸಂಪೂರ್ಣ ಮುಗಿಸಿ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ಸರ್ಕಾರಕ್ಕೆ ಹಾಗೂ ಅರಣ್ಯ ಸಚಿವರಿಗೆ ಸಮಗ್ರ ವರದಿ ಸಲ್ಲಿಸಿ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.