ಲಾಂಗ್ ಜಂಪ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವ ದೊರೆಸ್ವಾಮಿ.
ಕೋಲಾರ: ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಸಾಬೀತುಪಡಿಸುತ್ತದೆ ಅಷ್ಟೇ, ಸಾಧನೆಗೆ ಅಡ್ಡಿಯಾಗುವುದಿಲ್ಲ.
ಇದಕ್ಕೆ ತಾಜಾ ಉದಾಹರಣೆ 75ರ ವಯಸ್ಸಿನಲ್ಲೂ ಕ್ರೀಡೆಯಲ್ಲಿ ತೊಡಗಿಸಿಕೊಂಡು 150ಕ್ಕೂ ಹೆಚ್ಚು ಪದಕ ಗಳಿಸಿರುವ ಅಜ್ಜನ ಸಾಧನೆ. ಕೋಲಾರ ತಾಲೂಕಿನ ಹೊನ್ನೇನಹಳ್ಳಿ ನಿವಾಸಿ ಜಿ.ದೊರೆಸ್ವಾಮಿ ಅವರಿಗೆ 75 ವರ್ಷ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಅವರು ವಿದ್ಯಾಭ್ಯಾಸ ಮುಗಿದ ನಂತರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಈ ಮಧ್ಯೆಯೂ ಕ್ರೀಡೆಯಲ್ಲಿ ಮಾಡಿರುವ ಸಾಧನೆ ಯುವಕರಿಗೆ ಮಾದರಿಯಾಗಿದೆ. ಪ್ರಸ್ತುತ ಲಾಂಗ್ ಜಂಪ್, ತ್ರಿಬಲ್ ಜಂಪ್ ಹಾಗೂ ಓಟದ ಅಥ್ಲೆಟಿಕ್ ಕ್ರೀಡಾಕೂಟಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ದೊರೆಸ್ವಾಮಿ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿರುವುದು ಕುತೂಹಲಕಾರಿ ಸಂಗತಿಯಾಗಿದೆ. ಮಲೇಷಿಯಾ, ಥೈಲ್ಯಾಂಡ್, ಶ್ರೀಲಂಕಾ ಸೇರಿ ಹಲವು ದೇಶಗಳಲ್ಲಿ, ಹೊರ ರಾಜ್ಯಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು, ವಿವಿಧ ಕ್ರೀಡೆಗಳಲ್ಲಿ ಗೆದ್ದು ಸುಮಾರು 150ಕ್ಕೂ ಹೆಚ್ಚು ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಇತ್ತೀಚೆಗೆ ಪಂಜಾಬ್‌ನಲ್ಲಿ ಏರ್ಪಡಿಸಿದ್ದ ಏಷಿಯನ್ ಅಥ್ಲೆಟಿಕ್ಸ್ ಮೀಟ್ ನಲ್ಲಿ ಚಿನ್ನದ ಪದಕ ಪಡೆದು ರಾಜ್ಯ ಹಾಗೂ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಅಲ್ಲದೆ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ಕ್ರೀಡಾ ತರಬೇತಿ ನೀಡುವ ಮೂಲಕ ಅವರನ್ನು ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುತ್ತಿದ್ದಾರೆ. ಸಾಧನೆಗೆ ವಯಸ್ಸು ಅಡ್ಡಿಯಲ್ಲ ಅನ್ನೋದಕ್ಕೆ ದೊರೆಸ್ವಾಮಿಯೇ ಸಾಕ್ಷಿಯಾಗಿದ್ದಾರೆ. ಎಲೆಮರೆಯ ಕಾಯಿಯಂತಿರುವ ಇಂತಹ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯವಿದ್ದು, ಸರ್ಕಾರಗಳು ಮುಂದಾಗಬೇಕಿದೆ.
ಕಿರಿಯ ಕ್ರೀಡಾಪಟುಗಳಿಗೆ ಮಾದರಿ:
ದೊರೆಸ್ವಾಮಿ 75ನೇ ವಯಸ್ಸಿನ ನಂತರವೂ ಕ್ರೀಡೆಯಲ್ಲಿ ಮುಂದುವರಿದಿದ್ದು, ತನ್ನೊಟ್ಟಿಗೆ ಅಪಾರ ಶಿಷ್ಯರ ಬಳಗವನ್ನೇ ಹೊಂದಿದ್ದಾರೆ. ಅವರಿಗೆಲ್ಲ ಸ್ಫೂರ್ತಿಯಾಗಿದ್ದಾರೆ. 5 ಸಾವಿರ ಮತ್ತು 10 ಸಾವಿರ ಮೀಟರ್ ಓಟ, ಸ್ಟೀಪಲ್ ಚೆಸ್, ಡಿಸ್ಕಸ್ ಥೋ, ಜಾವಲಿನ್, ಶಾರ್ಟ್‌ಪುಟ್, ತ್ರಿಬಲ್ ಜಂಪ್, ಲಾಂಗ್ ಜಂಪ್‌ಗಳಲ್ಲಿ ಭಾಗಿಯಾಗಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಕೋಲಾರದಲ್ಲಿ ಕ್ರೀಡೆಗಳಿಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ. ಕೆಲ ಅಥ್ಲೆಟಿಕ್ ಕ್ಲಬ್ ನಮಗೆ ಸಹಕಾರ ನೀಡುತ್ತೇ. ಇಲಾಖೆಯಿಂದ ಪ್ರೋತ್ಸಾಹ ಸಿಗುತ್ತಿಲ್ಲ.
- ಶ್ರೀನಿವಾಸ್ ಕ್ರೀಡಾಪಟು, ಕೋಲಾರ
ಸಾಧನೆ ಮಾಡಬೇಕೆಂಬ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಈ ವಯಸ್ಸಿನಲ್ಲೂ ಆರೋಗ್ಯವಂತನಾಗಿರಲು ಕ್ರೀಡೆ ಕಾರಣವಾಗಿದೆ. ಇದಕ್ಕೆ ನಿರಂತರ ಅಭ್ಯಾಸ ಮುಖ್ಯ.
- ಜಿ.ದೊರೆಸ್ವಾಮಿ ಕ್ರೀಡಾಪಟು, ಹೊನ್ನೇನಹಳ್ಳಿ