ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಮಾತನಾಡಿದರು, ಉಪ ವಿಭಾಗಾಧಿಕಾರಿ ಮನಿಷಾ, ಸಿಪಿಐ ಕೆ.ಜಿ. ಸತೀಶ್, ಪಿಎಸ್ಐ ಅರುಣ್ಗೌಡ ಪಾಟೀಲ್, ಗೌನಿಪಲ್ಲಿ ವೃತ್ತ ನಿರೀಕ್ಷಕ ಶಿವಕುಮಾರ್ ಇದ್ದರು.
ಮುಳಬಾಗಿಲು: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚರಿಸಬೇಕು. ಡಿ.1ರಿಂದ ಕಠಿಣ ನಿಯಮಗಳು ಜಾರಿಯಾಗುತ್ತಿದ್ದು, ದಂಡದ ಜತೆ ವಾಹನವನ್ನೂ ವಶಕ್ಕೆ ಪಡೆಯಲಾಗುವುದು. ಇದರಲ್ಲಿ ಪತ್ರಕರ್ತರು, ವಕೀಲರು, ವೈದ್ಯರು, ರಾಜಕೀಯ ಪಕ್ಷಗಳ ಕಾರ್ಯಕರ್ತರಿದ್ದರು ಯಾವುದೇ ಮುಲಾಜಿರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಎಚ್ಚರಿಸಿದರು.
ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸೆಂಬರ್ ಒಂದರಿಂದಲೇ ಕಾನೂನುಗಳ ಕಠಿಣ ಅನುಷ್ಠಾನವಾಗಲಿದೆ. ಬೈಕ್ ವೀಲಿ ಹಾಗೂ ಸೈಲೆನ್ಸರ್ ರಹಿತ ವಾಹನ ಚಾಲನೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು, ಗಡಿಭಾಗಗಳಲ್ಲಿ ವಿಶೇಷ ಗಸ್ತು ಮಾಡಿ, ಯಾವುದೇ ರೀತಿಯ ಕಾನೂನುಬಾಹಿರ ಕೃತ್ಯ ಕಂಡುಬಂದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.
ವಾಟ್ಸಾಪ್ನಲ್ಲಿ ಮಾಹಿತಿ ನೀಡಿ: ಮನೆ&ಮನೆಗೂ ಪೊಲೀಸ್ ಕಾರ್ಯಕ್ರಮ ಶೇ.48 ಗುರಿ ಸಾಧಿಸಿದ್ದು, ಡಿಸೆಂಬರ್ ಒಳಗೆ ಶೇ. 100ರ ಗುರಿ ತಲುಪಲಿದೆ. ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಅಗತ್ಯ. ನನ್ನ ವಾಟ್ಸಾಪ್ ಡಿಪಿಯಲ್ಲಿ ಕ್ಯೂಆರ್ ಕೋಡ್ ಹಾಕಲಾಗಿದ್ದು, ಅದನ್ನು ಸ್ಕಾ$ನ್ ಮಾಡಿ ತಮ್ಮ ಸುತ್ತ&ಮುತ್ತ ನಡೆಯುವ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಎಸ್ಪಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳಲ್ಲಿ ಮೊಬೈಲ್ಫೋನ್ ಸಂಪರ್ಕವೇ ಪ್ರಮುಖ ಕಾರಣವಾಗಿದೆ, ಎಸ್ಎಸ್ಎಲ್ಸಿ, ಪಿಯುಸಿ ಶಿಕ್ಷಣದವರೆಗೂ ಮಕ್ಕಳಿಗೆ ಮೊಬೈಲ್ ನೀಡಬೇಡಿ. ಮಕ್ಕಳು ಬಳಸುವ ಮೊಬೈಲ್ಗಳಲ್ಲಿ ಇನ್ಸ್ಟಾಗ್ರಾಮ್, ಸ್ನಾ$ಪ್ ಚಾಟ್ಗಳಂತಹ ಜಾಲತಾಣಗಳನ್ನು ನಿರ್ಭಂದಿಸುವುದು ಸೂಕ್ತ. ಇವುಗಳ ದುರ್ಬಳಕೆಯಿಂದ ಹಾದಿತಪ್ಪಿದ ಮಕ್ಕಳು ಸಮಾಜಕ್ಕೆ ಮಾರಕವಾಗುತ್ತಿದ್ದಾರೆ ಆದ್ದರಿಂದ ಮಕ್ಕಳ ಮೊಬೈಲನ್ನು ಪಾಲಕರು ಪರಿಶೀಲನೆ ಮಾಡಿ ಎಂದರು.
ಹುಡುಗಿಯರನ್ನು ಚುಡಾಯಿಸಿದರೆ ಹುಷಾರ್!
ರಾಜ್ಯದಲ್ಲಿ ಅಕ್ಕಪಡೆ ಜಾರಿಯಾದರೆ ಅದನ್ನು ಜಿಲ್ಲಾದ್ಯಂತ ಅನುಷ್ಠಾನಕ್ಕೆ ತರಲಾಗುವುದು, ಈಗಾಗಲೇ ಕೋಲಾರ ಪಡೆ ಜಿಲ್ಲೆಯಲ್ಲಿ ಕಾರ್ಯಾಚರಣೆಯಲ್ಲಿದ್ದು, ಇದನ್ನು ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುವುದು, ವಿಶೇಷವಾಗಿ ಶಾಲಾ&ಕಾಲೇಜು ಹೆಣ್ಣು ಮಕ್ಕಳನ್ನು ಹಿಂಬಾಲಿಸುವರು, ಚುಡಾಯಿಸುವರರ ಮೇಲೆ ಹದ್ದಿನ ಕಣ್ಣು ಇಡಲಾಗುವುದು. ಇಂತಹ ಟನೆಗಳಲ್ಲಿ ತೊಂದರೆಗೊಳಗಾದವರು ಮತ್ತು ಸಾರ್ವಜನಿಕರು ಮಾಹಿತಿ ನೀಡಬೇಕೆಂದು ಕೋರಿದರು.
ಪತ್ರಕರ್ತರ ಕ್ಷೇತ್ರ ಒಂದು ಸಮಾಜ ಸುಧಾರಣಾ ಕ್ಷೇತ್ರವಾಗಿದ್ದು, ಇದಕ್ಕೆ ಧಕ್ಕೆ ತರುವ ಕೆಲಸವನ್ನು ಕೆಲ ಸಮಾಜಘಾತಕ ಶಕ್ತಿಗಳು ಮಾಡುತ್ತಿವೆ. ಇತ್ತೀಚೆಗೆ ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚಾಗಿದ್ದು, ಪತ್ರಕರ್ತರ ಹೆಸರಲ್ಲಿ ಬ್ಲಾಕ್ ಮೇಲ್ ಮಾಡುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಪ್ರಕರಣಗಳಲ್ಲಿ ತೊಂದರೆಗೊಳಗಾದವರು ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಬೇಕು. ಬ್ಲಾಕ್ ಮೇಲ್ ಮಾಡುವವರು ಯಾರೇ ಆಗಿದ್ದರು, ದೂರು ನೀಡಿದ ತಕ್ಷಣ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.