ಮುಳಬಾಗಿಲಿನ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜೆಎಂಎಫ್ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಗೌಡ ಜಗದೀಶ್ ರುದ್ರೆ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ಸದಾಶಿವಯ್ಯ, ಕಾರ್ಯದರ್ಶಿ ಎಂ.ರಮೇಶ್ ಇದ್ದರು.
- ಯೋಗಾಭ್ಯಾಸದಿಂದ ಮಾನಸಿಕ ಒತ್ತಡ ನಿವಾರಣೆ
ಮುಳಬಾಗಿಲು: ಕೋಟಿ ಕೋಟಿ ಹಣ, ಆಸ್ತಿ ಇದ್ದರೂ, ಆರೋಗ್ಯ ಇಲ್ಲದಿದ್ದಲ್ಲಿ ಅದನ್ನು ಅನುಭವಿಸಲು, ಎಲ್ಲ ವಿಧವಾದ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಆರೋಗ್ಯವೇ ಮಹಾಭಾಗ್ಯ ಎಂಬ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ನಿಮಾರ್ಣವಾಗಬೇಕಿದೆ ಎಂದು ಜೆಎಂಎಫ್ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಗೌಡ ಜಗದೀಶ್ ರುದ್ರೆ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆ ಸಹಯೋಗದಲ್ಲಿ ಗಿವರ್ಲಿ ಕೇರ್ ಫೌಂಡೇಷನ್ನಿಂದ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಪ್ರತಿನಿತ್ಯ ಯೋಗಾಭ್ಯಾಸ, ವ್ಯಾಯಾಮ, ನಡಿಗೆ ಮುಂತಾದ ಚಟುವಟಿಕೆಗಳು ಅಭ್ಯಾಸ ಮಾಡಿಕೊಂಡರೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಜೆಎಂಎಫ್ಸಿ ಕಿರಿಯ ಶ್ರೇಣಿ ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಹರೀಶ್ ಮಾತನಾಡಿ, ವಕೀಲರು ಮತ್ತು ಸಾರ್ವಜನಿಕರು ವೈಯುಕ್ತಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಅನುಕೂಲವಾಗುತ್ತದೆ. ಗಂಭೀರ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಪಡಿದರೆ ಸುಲಭವಾಗಿ ಚೇತರಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚಿನ ವಕೀಲರು ಮತ್ತು ಕಕ್ಷಿದಾರರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಸಮಸ್ಯೆಗಳು ಕಂಡುಬಂದ ರೋಗಿಗಳಿಗೆ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆ ವೈದ್ಯರು ಹೃದಯ ತಪಾಸಣೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಪರೀಕ್ಷೆ ನಡೆಸಿ ಆರೋಗ್ಯ ಸಲಹೆಗಳನ್ನು ನೀಡಿ ಉಚಿತವಾಗಿ ಮಾತ್ರೆ ಮತ್ತು ಔಷಧ ವಿತರಿಸಿದರು.
ಗಿವರ್ಲಿ ಕೇರ್ ಫೌಂಡೇಷನ್ ಮತ್ತು ಪ್ರಧಾನ ಮಂತ್ರಿ ಜನೌಷಧ ಕೇಂದ್ರದ ಮುಖ್ಯಸ್ಥೆ ಕೆ.ಗೀತಾ ಉಚಿತ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ವೆಂಕಟೇಶ್, ಮಾಜಿ ಉಪಾಧ್ಯಕ್ಷ ಸಿ.ವಿ. ಶ್ರೀನಿವಾಸಪ್ಪ, ವಕೀಲರಾದ ಎನ್. ಶೇಖರ್, ಪಿ. ನಟರಾಜ್, ಸಿ.ಎನ್.ರಾಜಕುಮಾರ್ ಇದ್ದರು.