ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಶಾಸಕರು, ತಾಲೂಕು ಆಡಳಿತದ ನಡೆ- ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರಿಗೆ ಮನವಿ ಸಲ್ಲಿಸುತ್ತಿರುವ ಸಾರ್ವಜನಿಕರು, 
ಕೋಲಾರ

ಜನರ ದೂರಿಗೆ ಫಟಾಫಟ್ ಪರಿಹಾರ

ಕಿರುವಾರ ಎಸ್.ಸುದರ್ಶನ್
ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯ ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿರುವ ಶಾಸಕರು, ತಾಲೂಕು ಆಡಳಿತದ ನಡೆ-ಗ್ರಾಮದ ಕಡೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜ.19ರಿಂದ ಕಾರ್ಯಕ್ರಮ ಪ್ರಾರಂಭವಾಗಿದ್ದು. ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿ, ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ತಹಸೀಲ್ದಾ‌ರ್, ತಾಪಂ ಇಒ ಸೇರಿದಂತೆ 32 ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಸಲ್ಲಿಕೆಯಾಗುವ ಅರ್ಜಿಯನ್ನು ಪರಿಶೀಲಿಸಿ ಸಂಬಂಧಪಟ್ಟ ಸಾರ್ವಜನಿಕರು ಇಲಾಖಾಧಿಕಾರಿಗೆ ಪರಿಹರಿಸಲು ಸೂಚಿಸುತ್ತಿದ್ದಾರೆ.
ಪ್ರತಿನಿತ್ಯ ಶಾಸಕ ನಂಜೇಗೌಡರನ್ನು ಭೇಟಿ ಮಾಡಬೇಕಾದರೆ ನಿವಾಸದ ಬಳಿ ತೆರಳಬೇಕಿತ್ತು. ಅಲ್ಲಿ ಸಾಧ್ಯವಾಗದಿದ್ದರೆ ಯಾವುದಾದರೂ ಕಾರ್ಯಕ್ರಮದಲ್ಲಿ ಭೇಟಿ ಮಾಡಬೇಕಿತ್ತು. ಈಗ ಪಂಚಾಯಿತಿವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗೂ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಸಲ್ಲಿಕೆಯಾಗುತ್ತಿರುವ ಕೆಲ ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥಗೊಂಡಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
* ಗ್ರಾಪಂ ಕಚೇರಿಗೆ ಕಲ್ಲು ಎಸೆತ
ಮಾಲೂರು ತಾಲೂಕಿನ ಸಂತೇಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಗ್ರಾಪಂ ಕಚೇರಿಗೆ ಸಂತೇಹಳ್ಳಿ ನಿವಾಸಿ ನವೀನ್ ಕುಮಾರ್ ಕಲ್ಲು ಎಸೆದಿದ್ದು, ಕಿಟಕಿ ಗಾಜು ಜಖಂಗೊಂಡಿದೆ. ಇದರಿಂದಾಗಿ ನವೀನ್ನನ್ನು ಪೊಲೀಸರು ಬಂಧಿಸಿದ್ದು, ಬೋ‌‌ವೆಲ್ ಗೆ ಹೆಚ್ಚಿನ ಸಮಯ ವಿದ್ಯುತ್ ಸರಬರಾಜು ಮಾಡದೆ ಇರುವುದು, ರಾಗಿ ಖರೀದಿ ಸಮಯ ವಿಸ್ತರಿಸದಿದ್ದಕ್ಕೆ ಕೋಪಗೊಂಡು ಕಲ್ಲು ಎಸೆದಿದ್ದಾನೆ ಎಂದು ತಿಳಿದುಬಂದಿದೆ.
* ಮೂಲ ಸೌಲಭ್ಯಗಳಿಗೆ ಅರ್ಜಿ
ಅಂಗವಿಲಕರ ಸಮಸ್ಯೆ, ಪಿಂಚಣಿ, ಭೂ ದಾಖಲೆ ತಿದ್ದುಪಡಿ, ಪೌತಿ ಖಾತೆ, ಪಡಿತರ ಚೀಟಿ, ಸರ್ವೇ, ಕಟ್ಟಿದ ಮನೆಗೆ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಲು ಎನ್‌ಒಸಿ, ನಿವೇಶನ, ವಸತಿ, ಕುಡಿಯುವ ನೀರು, ಬೀದಿ ದೀಪ, ಚರಂಡಿ ಸಮಸ್ಯೆ, ಶುದ್ಧ ನೀರಿನ ಘಟಕ ದುರಸ್ತಿ, ಜೆಜೆಎಂ ಕಾಮಗಾರಿಯಿಂದ ರಸ್ತೆ ಹಾನಿ, ಮನೆಗೆ ನೀರಿನ ಸಂಪರ್ಕ ಕಲ್ಪಿಸದಿರುವುದು ಸೇರಿದಂತೆ ನಾನಾ ಸಮಸ್ಯೆಗಳು ಸಲ್ಲಿಕೆ ಆದವು. ಅಂಗವಿಕಲರ ತ್ರಿಚಕ್ರವಾಹನ, ವಿಧವಾವೇತನಕ್ಕಾಗಿ ಅರ್ಜಿಗಳು ಸಲ್ಲಿಕೆಯಾದರೆ ಸ್ಥಳದಲ್ಲೇ ಮಂಜೂರು ಮಾಡಿ ಅನುಕೂಲ ಕಲ್ಪಿಸಿದ್ದು ಕಂಡು ಕಂಡುಬಂದಿತು.
* ಎಲ್ಲೆಲ್ಲಿ ಕಾರ್ಯಕ್ರಮ
ಒಟ್ಟು 28 ಗ್ರಾಪಂ ಪೈಕಿ ದಿನ್ನಹಳ್ಳಿ, ತುರುಣಿಸಿ, ಮಾಸ್ತಿ, ನೂಟವೆ, ಹಸಾಂಡಹಳ್ಳಿ, ರಾಜನಹಳ್ಳಿ, ನಡೆದಿದ್ದು, ಬಾಕಿ ಇರುವ 21 ಗ್ರಾಪಂ ವ್ಯಾಪ್ತಿಯಲ್ಲಿ ಅಧಿವೇಶನ ಮುಗಿದ ನಂತರ ಕಾರ್ಯಕ್ರಮ ನಡೆಯಲಿದೆ. 9 ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಇದುವರೆಗೂ 1040 ಅರ್ಜಿಗಳು ಸ್ವೀಕೃತವಾಗಿದ್ದು, ಆ ಪೈಕಿ 100ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿ ಸೌಲಭ್ಯ ಕಲ್ಪಿಸಲಾಗಿದೆ, ಬಾಕಿ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದು, ಪರಿಶೀಲಿಸಿ ವಿಲೇವಾರಿ ಮಾಡಲಿದ್ದಾರೆ.
ನೇರವಾಗಿ ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಲಾಗದವರ ಬಳಿ ಹೋಗಿ ಸಮಸ್ಯೆ ಅಲಿಸಿ ಬಗೆಹರಿಸಲಾಗಿದೆ. ಅಧಿಕಾರಿಗಳು ಈ ಕಾರ್ಯಕ್ರಮ ಕುರಿತು ಪ್ರಸ್ತಾಪಿಸಿದಾಗ ಒಪ್ಪಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿದ್ದು, ಜನರಿಗೆ ಅನುಕೂಲವಾಗಿದೆ. ನಮ್ಮನ್ನು ನೋಡಿ ಟೀಕೆ ಮಾಡುತ್ತಿದ್ದವರಿಗೆ ಉತ್ತರ ಸಿಕ್ಕಿದೆ.
- ಕೆ.ವೈ.ನಂಜೇಗೌಡ, ಶಾಸಕ, ಮಾಲೂರು
ಸಮಸ್ಯೆ ಕಚೇರಿಗೆ ಸಾಕಷ್ಟು ಮಂದಿ ಆಗಮಿಸುತ್ತಿದ್ದರು. ವಿನೂತನ ಕಾರ್ಯಕ್ರಮದಲ್ಲಿ ಬಹುವರ್ಷಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ.
- ರೂಪ, ತಹಸೀಲ್ದಾ‌ರ್, ಮಾಲೂರು
ಗ್ರಾಮೀಣ ಪ್ರದೇಶದಲ್ಲಿ ಹಲವು ಸಮಸ್ಯೆಗಳಿದ್ದವು. ಪಂಚಾಯಿತಿಮಟ್ಟದಲ್ಲಿ ಆಗ ಕೆಲಸಗಳಿಗಾಗಿ ಶಾಸಕರನ್ನು, ಅಧಿಕಾರಿಗಳನ್ನು ಭೇಟಿ ಮಾಡಲಾಗದವರ ಬಳಿಗೇ ಬಂದಿರುವುದರಿಂದ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಿದಂತಾಗಿದೆ.
- ಕೋಟೆ ಮುನಿರಾಜು,ಗ್ರಾಪಂ ಸದಸ್ಯ