ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಪಂ ಕಚೇರಿ. 
ಕೋಲಾರ

ಗ್ರಾಪಂ ಕೊಟ್ಟ ನಿವೇಶನ ಬೇರೊಬ್ಬರಿಗೆ ಕ್ರಯ

ಕಿರುವಾರ ಎಸ್.ಸುದರ್ಶನ್ ಕೋಲಾರ
ನಿವೇಶನವಿಲ್ಲ, ವಾಸಿಸಲು ಸೂರಿಲ್ಲ ಎಂಬ ನೆಪವೊಡ್ಡಿ ಗ್ರಾಪಂನಿಂದ ಪಡೆದುಕೊಂಡಿದ್ದ ನಿವೇಶನವನ್ನು ಬೇರೊಬ್ಬರಿಗೆ ಕ್ರಯ ಮಾಡಿಕೊಟ್ಟಿರುವುದು ಚನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಚನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬೀಚಗೊಂಡಹಳ್ಳಿ, ಬೈರಂಡಹಳ್ಳಿ, ಚನ್ನಸಂದ್ರ, ಕಡಗಟ್ಟೂರು, ರಘುಪತಿ ಅಗ್ರಹಾರ, ರಘುಪತಿ ಹೊಸಹಳ್ಳಿ, ಉರಟಿ ಅಗ್ರಹಾರ, ಬಾಲನಾಗೇನಹಳ್ಳಿ ಗ್ರಾಮಗಳು ಒಳಪಡುತ್ತವೆ. ಈ ಹಿಂದೆ ಅಧಿಕಾರದಲ್ಲಿದ್ದವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮೇಲೆ ಒತ್ತಡ ಹೇರಿ ದಾಖಲೆ ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಗ್ರಾಮಸ್ಥರು ಸರ್ಕಾರಿ ಜಮೀನುಗಳ ರಕ್ಷಣೆಗೆ ಅಧಿಕಾರಿಗಳನ್ನು ಒತ್ತಾಯಿಸಿದ್ದರೂ ಕ್ರಮಕ್ಕೆ ಯಾವುದೇ ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬೈರಂಡಹಳ್ಳಿ ಸರ್ವೇ ನಂ 210, 211ರಲ್ಲಿ 6 ಮಂದಿಗೆ, ಕಡಗಟ್ಟೂರು ಸರ್ವೇ ನಂಬರ್ 34/1 ಜಾಗವೂ ಇದೇ ಗ್ರಾಮದ ಎಕೆ ಕಾಲನಿ ಅಭಿವೃದ್ಧಿಪಡಿಸಲು ಸ್ವಾಧೀನಪಡಿಸಲಾಗಿರುತ್ತದೆ.
ಆದರೆ, ಇದಕ್ಕೆ ಇಬ್ಬರಿಗೆ ತಲಾ 2 ನಿವೇಶನ, ಬೀಚಗೊಂಡಹಳ್ಳಿ ಸರ್ವೇ ನಂಬರ್ 144/2 ಸಂಬಂಧ ಜಮೀನು ಇಬ್ಬರಿಗೆ ಹಾಗೂ ಉರಟಿ ಅಗ್ರಹಾರ ಸರ್ವೇ ನಂಬರ್ 75ರಲ್ಲಿ 6 ಮಂದಿ ಹೆಸರಿಗೆ ಇ-ಸ್ವತ್ತು ಸೃಜನೆ ಮಾಡಿಕೊಟ್ಟಿದ್ದು, ಇ-ಸ್ವತ್ತು ಸ್ಥಿತಿವಂತರಾಗಿದ್ದು, ಪಡೆದುಕೊಂಡಿರುವವರು ಇದೀಗ ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ.
ನಿವೇಶನ ರಹಿತರು, ವಸತಿ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿವೆ. ಆದರೆ, ಖಾಸಗಿ ಜಾಗಗಳನ್ನು ಹುಡುಕಾಡಿ ಬಳಸುತ್ತಿರುವ ಯತ್ನ ಜೋರಾಗಿಯೇ ನಡೆಯುತ್ತಿದೆ.
ಮಂಜೂರು ದಿನ ಕಳೆದಂತೆ ಗ್ರಾಮಗಳಲ್ಲಿ ಖಾಲಿ ಜಾಗಗಳ ಮೇಲೆ ಭೂ ಮಾಫಿಯಗಳ ಕಣ್ಣು ಬಿದ್ದಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಕೆಲ ಅಧ್ಯಕ್ಷರು, ಸದಸ್ಯರು ಪ್ರಭಾವ ಬಳಸಿ ಖಾಲಿ ಜಾಗಗಳನ್ನು ಅಕ್ರಮವಾಗಿ ಮನೆಯ ಸದಸ್ಯರಿಗೆ, ಸಂಬಂಧಿಕರಿಗೆ ನಿಯಮಬಾಹಿರವಾಗಿ ಮಾಡಿಸಿಕೊಂಡಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಗ್ರಾಮ ಠಾಣಾ ಜಾಗ, ಸರ್ಕಾರಿ ಜಾಗಗಳ ರಕ್ಷಣೆಗೆ ಅಧಿಕಾರಿಗಳು ಮುಂದಾಗುವಂತೆ ನಾಗರಿಕರಿಂದ ಒತ್ತಾಯ ಕೇಳಿಬಂದಿದೆ.
ಇ-ಸ್ವತ್ತು ಹಂಚಿಕೆ ನಿಯಮ ಬಾಹಿರ
ನಿವೇಶನ, ವಸತಿ ರಹಿತರಿಗೆ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಮಾಡಬೇಕಾದರೆ ನಿಯಮಗಳನ್ನು ಪಾಲನೆ ಮಾಡಬೇಕು. ಪಟ್ಟಿ ಸಿದ್ಧಪಡಿಸಬೇಕು, ಲಭ್ಯವಿರುವ ಜಾಗ ಹುಡುಕಾಡಬೇಕು. ಜಾಗಕ್ಕಾಗಿ ಗ್ರಾಪಂನಿಂದ, ತಾಪಂ, ಜಿಪಂಗೆ ಪ್ರಸ್ತಾವ ಕಳುಹಿಸಿಕೊಡಬೇಕು. ಆದು ಸರ್ಕಾರಿ ಕಂದಾಯ ಜಮೀನು ಆಗಿದ್ದರೆ, ಪಂಚಾಯಿತಿ ಹೆಸರಿಗೆ ಪಡೆದುಕೊಳ್ಳಬೇಕು. ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆದು ಬಡಾವಣೆಯನ್ನಾಗಿ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಬೇಕು. ಬಡವರಿಗೆ 20+30 ಅಳತೆಯ ಗ್ರಾಮದಲ್ಲಿ ಮಾತ್ರ ನಿವೇಶನ ಹಂಚಿಕೆ ಮಾಡಲು ಅವಕಾಶವಿದೆ. ಆದರೆ, ನಿಗದಿತ ಗಾತ್ರಕ್ಕಿಂತ ಹೆಚ್ಚುವರಿಯಾಗಿ ಪಡೆದುಕೊಂಡಿದ್ದು, ಬೇರೊಬ್ಬರಿಗೆ ಮಾರಾಟ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಲನೆಯಾಗದ ಮಾನದಂಡ
ಸಾರ್ವಜನಿಕರಿಂದ ಸರ್ಕಾರಕ್ಕೆ ವಂಚನೆಯಾಗುತ್ತಿರುವ ತೆರಿಗೆ ಸೋರಿಕೆ, ಸಾರ್ವಜನಿಕರ ಆಸ್ತಿಗಳಿಗೆ ದಾಖಲೆ ಮಾಡಿಕೊಡಿಕೊಟ್ಟು ಆಸ್ತಿ ಭದ್ರ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಗ್ರಾಮೀಣ ಜನರಿಗೂ ಇ-ಸ್ವತ್ತು ದಾಖಲೆ ಮಾಡಿಕೊಡಲು ಕ್ರಮವಹಿಸಿ, ಮಾನದಂಡಗಳನ್ನು ಪಾಲನೆ ಮಾಡುವ ಕುರಿತು ಸುತ್ತೋಲೆ ಹೊರಡಿಸಿದೆ. ಆದರೆ, ಇದನ್ನು ಕೆಲವರು ದುರುಪಯೋಗ ಪಡಿಸಿಕೊಂಡು ಅಕ್ರಮವೆಸಗಿರುವ ಆರೋಪ ಕೇಳಿ ಬಂದಿದೆ. ಈಗಾಗಲೇ ಗ್ರಾಮ ಪಂಚಾಯಿತಿಯಿಂದ ಇ-ಸ್ವತ್ತು ನೀಡಿರುವ ಆಸ್ತಿಗಳು ಗ್ರಾಮ ಠಾಣಾ ಮತ್ತು ಸರ್ಕಾರಿ ಕಂದಾಯ ಜಮೀನು ಆಗಿರುತ್ತದೆ.
ಚನ್ನಸಂದ್ರ ಗ್ರಾಪಂ ವ್ಯಾಪ್ತಿಯ ಗ್ರಾಮ ಠಾಣಾ, ಸರ್ಕಾರಿ ಜಮೀನು ಸಂಬಂಧ ಅಕ್ರಮವಾಗಿ ಇ-ಸ್ವತ್ತು ನೀಡಿರುವುದು ಕಂಡು ಬಂದಿದೆ. ದಾಖಲೆ ಪರಿಶೀಲಿಸಿ ಇ-ಸ್ವತ್ತು ರದ್ದುಪಡಿಸಲಾಗಿದೆ. ಒತ್ತುವರಿಯಾಗಿರುವ ಜಾಗವನ್ನು ವಶಕ್ಕೆ ಪಡೆಯಲು ಪಿಡಿಒಗೆ ಸೂಚಿಸಲಾಗಿದೆ.
- ಮಂಜುನಾಥ್ ಇಒ, ತಾಪಂ, ಕೋಲಾರ.