ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರನ್ನು ಮಾಜಿ ಸಚಿವ ಸುರೇಶ್​ ಕುಮಾರ್​ ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೆ.ಎಸ್​.ಮಂಜುನಾಥ್​ ಗೌಡ, ಓಂಶಕ್ತಿ ಚಲಪತಿ ಇದ್ದರು. 
ಕೋಲಾರ

ಶಾಲೆಗೆ ದಾನವಾಗಿರುವ ಜಮೀನ್ನು ರಕ್ಷಿಸಿ

ಕೋಲಾರ: ಅಗಲಕೋಟೆಯಲ್ಲಿ ಶಾಲೆಗೆ ದಾನವಾಗಿ ನೀಡಿದ್ದ 50 ಎಕರೆ ಜಮೀನನ್ನು ಕಬಳಿಸಲು ಕೆಲವರು ಯತ್ನಿಸಿದ್ದು, ಅದನ್ನು ರಕ್ಷಿಸಿ ವಾಪಸ್​ ಪಡೆಯಬೇಕು ಎಂದು ಮಾಜಿ ಸಚಿವ ಎಸ್​.ಸುರೇಶ್​ ಕುಮಾರ್​ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಬುಧವಾರ ಜಿಲ್ಲಾಧಿಕಾರಿ ಎಂ.ಆರ್​.ರವಿ ಅವರಿಗೆ ಮನವಿ ಸಲ್ಲಿಸಿದರು.
ಜಮೀನು ಸಂಬಂದ ನೆ, ದಾಖಲೆಗಳ ಸಮೇತ ಭೇಟಿ ಮಾಡಿರುವ ಸುರೇಶ್​ ಕುಮಾರ್​, ಮಾಹಿತಿ ನೀಡಿ ರಕ್ಷಣೆಗೆ ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು, ಅಗಲಕೋಟೆ ಪ್ರಕರಣ ಈಗಾಗಲೇ ನಮ್ಮ ಗಮನದಲ್ಲಿದ್ದು, ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಂಸದ ಎಸ್​.ಮುನಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್​, ವಕೀಲ ಕೃಷ್ಣಪ್ಪ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ ಮತಿತರರಿದ್ದರು.
* ಜಮೀನು ಉಳಿಸಲು ಸತತ ಪ್ರಯತ್ನ
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್​ ಕುಮಾರ್​, ಶ್ರೀನಿವಾಸಲು ಎಂಬುವರು 1955ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ 50 ಎಕರೆ 26 ಗುಂಟೆ ಜಮೀನನ್ನು ದಾನ ಮಾಡಿದ್ದರು. ಆ ಜಾಗದ ಮೇಲೆ ರಿಯಲ್​ ಎಸ್ಟೇಟ್​ ಶಕ್ತಿಗಳ ಕಣ್ಣು ಬಿದಿದ್ದು, ಪರಭಾರೆಯಾಗುತ್ತದೆ. ಈ ಕುರಿತು ಶಿಕ್ಷಣಾಧಿಕಾರಿಗಳು ಸಹ ತಹಶೀಲ್ದಾರ್​ಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದರು.
ವಿಧಾನಸಭೆ ಅರ್ಜಿ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದು, ಮುಂದಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಜಮೀನು ಉಳಿಸಲು ಪ್ರಯತ್ನಿಸುತ್ತೇನೆ. ಮೂಲ ದಾನಿಗಳ ಉದ್ದೇಶವನ್ನು ಸಫಲಗೊಳಿಸಬೇಕು. ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಜಾಗ ಬಳಕೆಯಾಗಬೇಕು ಹೊರತು, ಬೇರೆ ಯಾವುದೇ ಉದ್ದೇಶಕ್ಕೆ ಆಗಬಾರದು. ಜಿಲ್ಲಾಧಿಕಾರಿಗೆ ಈ ವಿಚಾರ ಗಮನಕ್ಕೆ ತರಲಾಗಿದ್ದು, ರಸುವ ಭರವಸೆ ನೀಡಿದ್ದಾರೆ ಎಂದರು.
ಅಧಿವೇಶನದಲ್ಲಿ ವಿಧಾನ ಪರಿಷತ್​ ಸದಸ್ಯ ಕೇಶವ ಪ್ರಸಾದ್​ ಅವರು ಕೇಳಿದ ಪ್ರಶ್ನೆಗೆ ಸಚಿವ ಕೃಷ್ಣಬೈರೇಗೌಡರಿಂದ ಸತ್ಯಕ್ಕೆ ದೂರದ ಉತ್ತರ ಸಿಕ್ಕಿದೆ. ಈ ವಿಚಾರವನ್ನೂ ಸಮಿತಿ ಮುಂದೆ ಪ್ರಸ್ತಾಪಿಸುತ್ತೇನೆ. ನ್ಯಾಯಾಲಯದಲ್ಲೂ ಹೋರಾಡಲು ಸಿದ್ಧ ಎಂದರು.
* ಮಂಜೂರಾಗಿರುವುದೇ ಬೋಗಸ್
ಮಾಲೂರಿನ ಮಾಜಿ ಶಾಸಕ ಕೆ.ಎಸ್​.ಮಂಜುನಾಥಗೌಡ ಮಾತನಾಡಿ, ಸುಮಾರು 200 ಕೋಟಿ ಮೌಲ್ಯದ ಅವ್ಯವಹಾರವಿದೆ. ಬರೀ 50 ಎಕರೆ ಅಲ್ಲ ಇಲ್ಲಿರುವ 250 ಎಕರೆಯೂ ಸಮಸ್ಯೆಯಾತ್ಮಕವಾಗಿದೆ. ಮಂಜೂರಾಗಿರುವುದೇ ಬೋಗಸ್​, ಇನಾಂ ಡಿ.ಸಿ ಆದೇಶವೂ ಬೋಗಸ್​ ಎಂದು ಆರೋಪಿಸಿದರು.
ಈ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದವರಾರು ಎಂಬುದು ಗೊತ್ತಾಗಬೇಕು. ಕಂದಾಯ ಸಚಿವ ಕೃಷ್ಣ್ಣಬೈರೇಗೌಡ ಇಂಥ ವಿಚಾರಕ್ಕೆ ಕೈಹಾಕುವವರಲ್ಲ. ಇಲಾಖೆಯಲ್ಲಿ ಸುಧಾರಣೆಗೆ ಪ್ರಯತ್ನಿಸುತ್ತಿದ್ದಾರೆ. ಅಂಥವರ ಕೈಯಲ್ಲಿ ಸುಳ್ಳು ಹೇಳಿಸಿದ್ದಾರೆ. ಶ್ರೀನಿವಾಸಪುರದಲ್ಲಿ ಕೆ.ಆರ್​.ರಮೇಶ್​ ಕುಮಾರ್​ ಜಮೀನು ಖರೀದಿಸಿದ್ದರೂ ಅದು ಅರಣ್ಯಕ್ಕೆ ಸೇರಿದ ಜಮೀನು ಎಂದು ವಾಪಸ್​ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇದೇ ರೀತಿ ಅದೆಷ್ಟೊ ಮಂದಿ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಿದ್ದರೂ ಅದರ ತಂಟೆಗೆ ಯಾರೂ ಹೋಗಿಲ್ಲ. ರಮೇಶ್​ ಕುಮಾರ್​ ದುಡ್ಡು ಕೊಟ್ಟಿದ್ದರೆ ಕೆಳಗಿನ ಮಟ್ಟದಲ್ಲಿಯೇ ಸರಿ ಹೋಗುತಿತ್ತು. ಆದರೆ, ಅವರು ಕೊಡಲಿಲ್ಲ. ಹೀಗಾಗಿ, ನ್ಯಾಯಾಲಯ ಹಂತದವರೆಗೆ ಹೋಯಿತು ಎಂದರು.