ಹಿಂದೂ ಸಮಾಜೋತ್ಸವದ ಪ್ರಯುಕ್ತ ಶೋಭಾಯಾತ್ರೆ ನಡೆಯಿತು. 
ಕೋಲಾರ

ಕೋಲಾರದಲ್ಲಿ ಮೊಳಗಿದ ಹಿಂದೂಪರ ಘೋಷಣೆ

ಕಿರುವಾರ ಎಸ್.ಸುದರ್ಶನ್
ಕೋಲಾರ: ಚಿನ್ನದ ನಗರಿ ಕೋಲಾರ ನಗರದಲ್ಲಿ ಹಿಂದೂ ಸಮಾಜೋತ್ಸವದ ಅಂಗವಾಗಿ ಶೋಭಾ ಯಾತ್ರೆ ಶನಿವಾರ ನಡೆಯಿತು.
ನಗರದ ಜೂನಿಯರ್ ಕಾಲೇಜು ನೈದಾನದಿಂದ ಪ್ರಾರಂಭವಾದ ಯಾತ್ರೆಯು ಎಂಜಿ ರಸ್ತೆ, ದೊಡ್ಡಪೇಟೆ, ಎಂಬಿ ರಸ್ತೆ, ಹೊಸ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮೆರವಣಿಗೆ ಉದ್ದಕ್ಕೂ ಸಾವಿರಾರು ಮುಖಂಡರು ಕೇಸರಿ ಶಾಲು ಹಾಕಿಕೊಂಡು ಹೆಜ್ಜೆ ಹಾಕಿದರು. ಸ್ವಾಮೀ ವಿಮೇಕಾನಂದ, ಸುಭಾಶ್ ಚಂದ್ರಬೋಸ್, ಭಾರತಾಂಭೆ ವೇಷದಾರಿಗಳು ಗಮನ ಸೆಳೆದರು. ತಮಟೆ, ಡೊಳ್ಳು ವಾದನ ಮೆರವಣಿಗೆಗೆ ಮೆರಗು ನೀಡಿತು.
ಬೆಳಿಗ್ಗೆಯಿಂದಲೇ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಕಾರ್ಯಕರ್ತರು ಹಾಗೂ ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಗರದ ಪ್ರಮುಖ ವೃತ್ತಗಳಲ್ಲಿ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು.
ಸಮಾಜೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಈ ಶೋಭಾಯಾತ್ರೆಯುದ್ದಕ್ಕೂ ಭಕ್ತರು ಜೈಕಾರಗಳನ್ನು ಹಾಕುತ್ತಾ ಸಾಗಿದ್ದು ನೋಡುಗರ ಗಮನ ಸೆಳೆಯಿತು. ಇನ್ನು ಯುವಕರು ಕುಣಿದು ಕುಪ್ಪಳಿಸಿದರು.
ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜಾನಪದ ಕಲಾತಂಡಗಳು ಪ್ರದರ್ಶನ ನೀಡುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ಶೋಭಾಯಾತ್ರೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ‌ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಧಾರ್ಮಿಕ ಒಗ್ಗಟ್ಟಿನ ಸಂದೇಶ
ಹಿಂದೂ ಸಮಾಜವನ್ನು ಒಗ್ಗೂಡಿಸುವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಸ್ತರದ ಮುಖಂಡರು ಭಾಗವಹಿಸಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಶೋಭಾಯಾತ್ರೆಯು ಅಂತಿಮವಾಗಿ ನಿಗದಿತ ಮೈದಾನದಲ್ಲಿ ಅಂತ್ಯಗೊಂಡಿತು. ಇನ್ನು ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.