ನಗರದ ಕಂಠೀರವ ಕ್ರೀಡಾಂಗಣದಲ್ಲಿನ ಒಲಿಂಪಿಕ್ ಭವನದಲ್ಲಿ ಬಾಸ್ಕೆಟ್ಬಾಲ್ ಕ್ರೀಡಾಪಟುಗಳನ್ನು ಡಿಸಿಎಂ ಡಾ. ಜಿ. ಪರಮೇಶ್ವರ್ ಅಭಿನಂದಿಸಿದರು.
ಬೆಂಗಳೂರು: ದೇವನಹಳ್ಳಿ ಸಮೀಪ ಸುಮಾರು 60 ಎಕರೆ ಪ್ರದೇಶದಲ್ಲಿ ಕ್ರೀಡಾನಗರಿ (ಸ್ಪೋರ್ಟ್ಸ್ ಸಿಟಿ) ನಿರ್ಮಿಸಲು ಯೋಜನೆ ರೂಪಿಸಿದ್ದು, ಅತಿಶ್ರೀದಲ್ಲೇ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಡಿಸಿಎಂ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿನ ಒಲಿಂಪಿಕ್ ಭವನದಲ್ಲಿ ರಾಜ್ಯ ಬಾಸ್ಕೆಟ್ಬಾಲ್ ತಂಡಗಳನ್ನು ಅಭಿನಂದಿಸಿ ಮಾತನಾಡಿದರು. ವಿವಿಧ ಕ್ರೀಡೆಗಳನ್ನು ಒಂದೇ ಸಮಗ್ರ ಕ್ರೀಡಾ ಮೂಲಸೌಕರ್ಯದಲ್ಲಿ ನಡೆಸಲು ಅನುಕೂಲವಾಗುವಂತೆ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಆ ಮೂಲಕ ದೇಶದ ಪ್ರಮುಖ ಕ್ರೀಡಾ ರಾಜ್ಯವಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ., ಪದಕ ವಿಜೇತರಿಗೆ 15 ಲಕ್ಷ ರೂ. ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳಲಾಗುವುದು. ಪ್ಯಾರಾ ಒಲಿಂಪಿಕ್ಸ್ನಲ್ಲಿ ಮೈಸೂರು ಮೂಲದ ಶಿಲ್ಪಾ ಭಾಗವಹಿಸಿ ಕಂಚಿನ ಪದಕ ಗೆದ್ದಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಕ್ರೀಡಾ ಸಂಸ್ಥೆಗಳು ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಒಂದು ಭಾಗ. ಅದಕ್ಕೆ ಪೂರಕವಾಗಿ ಕ್ರೀಡಾಪಟುಗಳು ಶ್ರದ್ಧೆ, ಪರಿಶ್ರಮ, ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತಮ ತರಬೇತಿಗಾಗಿ ವಿದೇಶಗಳಿಗೆ ಕಳುಹಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಕೇಂದ್ರ ಸರ್ಕಾರದ "ಖೇಲೋ ಇಂಡಿಯಾ' ಕಾರ್ಯಕ್ರಮವೂ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯನ್ನು ಒದಗಿಸಲಿದೆ ಎಂದು ವಿವರಿಸಿದರು.
ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ 72 ಸಾವಿರ ಹುದ್ದೆಗಳ ನೇಮುಕಾತಿಗೆ ಕ್ರಮವಹಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಮೀಸಲಾತಿ ಕಲ್ಪಿಸಿರುವುದರಿಂದ ಹಲವು ಕ್ರೀಡಾಪಟುಗಳು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪದಕ ವಿಜೇತ ಕ್ರೀಡಾಪಟುಗಳನ್ನು ನೇರ ನೇಮಕಾತಿ ಮಾಡಿಕೊಳ್ಳುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ನೇಮಕಾತಿಗಳಲ್ಲಿಯೂ ಕ್ರೀಡಾಪಟುಗಳಿಗೆ ಶೇ.2 ಮೀಸಲು ಸೌಲಭ್ಯ ಸಿಗಲಿದೆ. ದೇಶದ ಯಾವುದೇ ರಾಜ್ಯದಲ್ಲಿ ಇಂತಹ ಅವಕಾಶವಿಲ್ಲ ಎಂದು ಡಿಸಿಎಂ ತಿಳಿಸಿದರು.
5 ಸಾವಿರ ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ
ಕಂಠೀರವ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಿದ್ದು, 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಲಾಗಿದೆ. ಬಾಸ್ಕೆಟ್ಬಾಲ್ ಕ್ರೀಡೆಯ ಅಭಿವೃದ್ಧಿಗಾಗಿ ಸರ್ಕಾರ 5 ಎಕರೆ ಜಾಗವನ್ನು ನೀಡಲಾಗಿದೆ. ಕತಾರ್ನಲ್ಲಿರುವ ಕ್ರೀಡಾಂಗಣದ ಮಾದರಿಯಲ್ಲಿ ರಾಜ್ಯದಲ್ಲೂ ಅಂತರಾಷ್ಟ್ರೀಯ ಮಟ್ಟದ ಸ್ಟೇಡಿಯಂ ನಿರ್ಮಿಸಲಾಗುವುದು. ಗುಜರಾತ್ನ ಅಹಮದಾಬಾದ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ ನಡೆಯಲಿದ್ದು, ಈ ವೇಳೆ ಕಂಠೀರವ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಲು ಸಾಧ್ಯವಾದರೆ ಕೆಲ ಸ್ಪರ್ಧೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸುವ ಅವಕಾಶ ದೊರೆಯಲಿದೆ. ಇದರಿಂದ ರಾಜ್ಯದ ಕ್ರೀಡಾ ಸಾಮರ್ಥ್ಯವನ್ನು ದೇಶ& -ವಿದೇಶಗಳಿಗೆ ಪರಿಚಯಿಸಲು ಸಾಧ್ಯ ಎಂದು ಡಿಸಿಎಂ ತಿಳಿಸಿದರು.
ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜು, ಕ್ರೀಡಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಇದ್ದರು.