ಕೆಪಿಎಸ್​ ಶಾಲೆಗಳ ಜತೆಗೆ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವುದನ್ನು ಸರ್ಕಾರ ಕೈಬಿಡಬೇಕು ಎಂದು ಜಿಲ್ಲಾ ಎಸ್​ಡಿಎಂಸಿ ಸಮಿತಿ ಸದಸ್ಯರು, ಕೋಲಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಅಲ್ಮಾಸ್​ ಪರ್ವೀತಾಜ್​ ಅವರಿಗೆ ಮನವಿ ಸಲ್ಲಿಸಿದರು. 
ಕೋಲಾರ

ಕೆಪಿಎಸ್​ ಜತೆ ಸರ್ಕಾರಿ ಶಾಲೆ ವಿಲೀನ ಬೇಡ

ಕೋಲಾರ: ರಾಜ್ಯದಲ್ಲಿ ಹೆಚ್ಚುವರಿ ಕರ್ನಾಟಕ ಪಬ್ಲಿಕ್​ ಶಾಲೆಗಳನ್ನು ಪ್ರಾರಂಭಿಸುವ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹುನ್ನಾರ ನಡೆಸುತ್ತಿರುವ ಸರ್ಕಾರವು ತೀರ್ಮಾನವನ್ನು ಕೈಬಿಡಬೇಕು ಎಂದು ಒತ್ತಾಯಿಸಿ, ಜಿಲ್ಲಾ ಎಸ್​ಡಿಎಂಸಿ ಸಮಿತಿ ಸದಸ್ಯರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಅಲ್ಮಾಸ್​ ಪರ್ವೀತಾಜ್​ ಅವರಿಗೆ ಮನವಿ ಸಲ್ಲಿಸಿದರು.
ಎಸ್​ಡಿಎಂಸಿ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸಲು ಮಾತನಾಡಿ, ರಾಜ್ಯ ಹಾಗೂ ಜಿಲ್ಲೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಹಲವು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣದ ಆಧಾರ ಸ್ಥಂಭವಾಗಿದೆ. ಯಾವುದೇ ಕಾರಣಕ್ಕೂ ಬೇರೊಂದು ಶಾಲೆಯೊಂದಿಗೆ ವಿಲೀನಗೊಳಿಸಬಾರದು ಎಂದು ಒತ್ತಾಯಿಸಿದರು.
ವಿಲೀನ ಮಾಡುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಕೆಪಿಎಸ್​ ಮ್ಯಾಗ್ನೆಟ್​ ಯೋಜನೆ ಹೆಸರಿನಲ್ಲಿ ರಾಜ್ಯದಾದ್ಯಂತ 25 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.
ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಡಹಳ್ಳಿ ಶಶಿಕುಮಾರ್​ ಮಾತನಾಡಿ, ನಮಗೆ ಕೆಪಿಎಸ್​ ಮ್ಯಾಗ್ನೆಟ್​ ಶಾಲೆ ಬೇಡ. ಅದು ಬಡವರ ವಿರೋಧಿ ಯೋಜನೆಯಾಗಿದೆ. ಸರ್ಕಾರಿ ಶಾಲೆಯನ್ನು ಮುಚ್ಚಲು ತೆಗೆದುಕೊಂಡಿರುವ ತೀರ್ಮಾನ ಬಿಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಸೈಯದ್​ ಜಹಾಂಗೀರ್​, ಮೂರ್ತಿ ವಿ.ಸಿ, ಸಿ ನಾಗೇಶ್​ ಕುಮಾರ್​, ಆರ್​.ಮುನಿಕೃಷ್ಣ ಉಪಸ್ಥಿತರಿದ್ದರು.