ಬೆಂಗಳೂರು ನಗರದ ಸ್ವಾತಂತ್ಯ ಉದ್ಯಾನವನದಲ್ಲಿ ಕರ್ನಾಟಕ ಸಂಟನೆಗಳ ಕನ್ನಡ ಒಕ್ಕೂಟದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು: ಕ್ಷುಲಕ್ಕ ಕಾರಣಕ್ಕೆ ಸಾರ್ವಜನಿಕರೊಂದಿಗೆ ಅಧಿಕಾರ ದರ್ಪ ತೋರಿರುವ ಕೋಲಾರ ಜಿಲ್ಲೆಯ ಮಾಲೂರು ನ್ಯಾಯಾಧೀಶೆ ಗಾಯಿತ್ರಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದ ಕಾರ್ಯಕರ್ತರು ನಗರದ ಸ್ವಾತಂತ್ಯ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಒಕ್ಕೂಟದ ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ ಮಾತನಾಡಿ, ನ್ಯಾಯಾಧೀಶ ಸ್ಥಾನಕ್ಕೆ ದೇಶದಲ್ಲಿ ತನ್ನದೇ ಆದ ಗೌರವ ಇದೆ. ಸಂವಿಧಾನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ಹುದ್ದೆ. ರಸ್ತೆಯಲ್ಲಿ ಹೋಗಬೇಕಾದರೆ ಸಾರ್ವಜನಿಕರೊಂದಿಗೆ ನಡೆದುಕೊಂಡಿರುವ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಿದರು.
ನ್ಯಾಯಾಧೀಶೆಯ ವರ್ತನೆಯು ನ್ಯಾಯ ಗೌರವಕ್ಕೆ ಧಕ್ಕೆ ಉಂಟು ಮಾಡಿದಂತಾಗಿದೆ. ರಸ್ತೆಯಲ್ಲಿ ಸಂಚರಿಸಬೇಕಾದರೆ ನ್ಯಾಯಾಧೀಶರ ವಾಹನಕ್ಕೆ ದ್ವಿಚಕ್ರ ವಾಹನ ಸವಾರ ಕೈ ತೋರಿಸಿದ ಎಂಬ ಮಾತ್ರಕ್ಕೆ ಪೊಲೀಸ್ ಠಾಣೆ ಮೆಟ್ಟಿರುವುದು ಸರಿಯಲ್ಲ. ವಾಹನ ಸವಾರ ತಪ್ಪಾಯಿತು ಎಂದು ಹೇಳಿದರೂ ದೂರು ದಾಖಲಿಸಿ ಕುಟುಂಬಸಮೇತ ದಿನವೀಡಿ ಠಾಣೆಯಲ್ಲಿ ಕೂರಿಸಿರುವುದು ಎಷ್ಟು ಸರಿ?, ಜನಪರ ಕಾಳಜಿಯಿದಿದ್ದರೆ ಸ್ಥಳದಲ್ಲೇ ಬುದ್ದಿ ಹೇಳಿ ಕಳುಹಿಸಬೇಕಿತ್ತು ಎಂದರು.
ನ್ಯಾಯಾಧೀಶೆ ಗಾಯಿತ್ರಿ ಅವರ ವಿರುದ್ಧ ಹಾಗೂ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ ವೃತ್ತ ನಿರೀಕ್ಷಕರ ವಿರುದ್ಧ ಕಾನೂನಿನಡಿಯಲ್ಲಿ ತನಿಖಾ ನಡೆಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಸಿ.ಪಿ.ವೆಂಕಟೇಶ್, ನವೀನ್, ನೇತ್ರ ಮತಿತರರು ಉಪಸ್ಥಿತರಿದ್ದರು.