ಮಾಲೂರಿನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ್ ಚಾಲನೆ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶುಭಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್. ಮಂಜುಳಾ, ತಾಲೂಕು ಪಂಚಾಯಿತಿ ಲೆಕ್ಕಪರಿಶೋಧನಾಧಿಕಾರಿ ಚಂದನಾ ಇದ್ದರು.
- ಹಿರಿಯ ನಾಗರಿಕರ ಆಸ್ತಿ ಕಬಳಿಸಿದರೆ ಕಾನೂನು ಕ್ರಮ
ಮಾಲೂರು: ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಪಿಂಚಣಿ ಯೋಜನೆಗಳು ಸ್ಥಗಿತಗೊಂಡಿರುವ ಬಗ್ಗೆ ಹಿರಿಯ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಾಲೂಕು ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್.ಬಡಿಗೇರ್ ಭರವಸೆ ನೀಡಿದರು.
ಮಂಗಳವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ "ಕಾನೂನು ಅರಿವು ಮತ್ತು ನೆರವು' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮರು ಸಮೀಕ್ಷೆ ಹಿನ್ನೆಲೆಯಲ್ಲಿ ಹಲವರ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಶೀಘ್ರದಲ್ಲೇ ಮರು-ಮಂಜೂರಾತಿ ಪ್ರಕ್ರಿಯೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಫಲಾನುಭವಿಗಳ ಆದಾಯ ಮಿತಿ 32,000 ರೂ.ನಿಂದ 1.20 ಲಕ್ಷ ರೂ.ಗೆ ಹೆಚ್ಚಿಸಲಾಗಿದ್ದು, 60 ರಿಂದ 64 ವರ್ಷದವರು ವೃದ್ಧಾಪ್ಯ ವೇತನ ಹಾಗೂ 65 ವರ್ಷ ಮೇಲ್ಪಟ್ಟವರು ಸಂಧ್ಯಾ ಸುರಕ್ಷಾ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದು ಮಾಹಿತಿ ನೀಡಿದರು.
2007ರ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯನ್ವಯ, ಪಾಲಕರನ್ನು ರ್ನಿಲಕ್ಷಿಸುವ ಮಕ್ಕಳ ವಿರುದ್ಧ ಉಪವಿಭಾಗಾಧಿಕಾರಿ (ಎಸಿ) ನ್ಯಾಯಾಲಯದಲ್ಲಿ ಜೀವನಾಂಶ ಕೋರಿ ದೂರು ದಾಖಲಿಸಲು ಅವಕಾಶವಿದೆ. ನಿಮ್ಮ ಆಸ್ತಿಯನ್ನು ಯಾರಾದರೂ ಕಬಳಿಸಿದರೆ ಅಥವಾ ಮೋಸದಿಂದ ತಮ್ಮ ಹೆಸರಿಗೆ ನೋಂದಾಯಿಸಿಕೊಂಡರೆ, ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತವಾಗಿ ಕೇಸ್ ಹಾಕಿದರೆ ನಿಮಗೆ ನ್ಯಾಯ ಒದಗಿಸಿಕೊಡುತ್ತೇವೆ. ಇದಕ್ಕೆ ನೀವು ಯಾವುದೇ ವಕೀಲರಿಗೆ ಶುಲ್ಕ ನೀಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ವಯಸ್ಸಾದ ಕಾರಣ ನ್ಯಾಯಾಲಯಕ್ಕೆ ಅಲೆಯಲು ಸಾಧ್ಯವಾಗದಿದ್ದರೆ, "ಪವರ್ ಆಫ್ ಅಟಾರ್ನಿ' ಮೂಲಕ ನಿಮ್ಮ ಪರ ಕೇಸ್ ನಡೆಸಲು ಮಕ್ಕಳು ಅಥವಾ ಸಂಬಂಧಿಕರಿಗೆ ಅಧಿಕಾರ ನೀಡಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಕಡ್ಡಾಯವಾಗಿ ಪ್ರತ್ಯೇಕ ಸರದಿ ಸಾಲು ಹಾಗೂ ಪ್ರತ್ಯೇಕ ವಿಭಾಗವಿರಬೇಕು ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಉಚಿತ ವೈದ್ಯಕಿಯ ಚಿಕಿತ್ಸೆ ಮತ್ತು ಬೆಡ್ ಸೌಲಭ್ಯ ಒದಗಿಸುವುದು ಆಸ್ಪತ್ರೆಗಳ ಜವಾಬ್ದಾರಿ ಎಂದು ತಿಳಿಸಿದರು.
ನ್ಯಾಯಾಲಯಗಳಲ್ಲಿ ಹಿರಿಯ ನಾಗರಿಕರ ಪ್ರಕರಣಗಳಿಗೆ ಆದ್ಯತೆ ನೀಡಿ ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತದೆ. ಯಾವುದೇ ಸರ್ಕಾರಿ ಇಲಾಖೆಗಳಿಂದ ಸೌಲಭ್ಯ ವಂಚಿತರಾದಲ್ಲಿ, ಉಚಿತ ಕಾನೂನು ಸೇವಾ ಪ್ರಾಧಿಕಾರದಲ್ಲಿ "ವ್ಯಾಜ್ಯ ಪೂರ್ವ ಪ್ರಕರಣ' ದಾಖಲಿಸಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.