ಸಾಂದರ್ಭಿಕ ಚಿತ್ರ  
ಕೋಲಾರ

ನೀರು, ತರಕಾರಿಯಲ್ಲಿ ನೈಟ್ರೇಟ್ ಸೀಸ ಪತ್ತೆ!

ಕೋಲಾರ: ಬಯಲುಸೀಮೆ ಜಿಲ್ಲೆಗಳ ನೀರು, ತರಕಾರಿಯಲ್ಲಿ ನೈಟ್ರೇಟ್ ಮತ್ತು ಸೀಸದ ಅಂಶ ಇರುವುದು ಪತ್ತೆಯಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಪ್ರಾದೇಶಿಕ ನಿರ್ದೇಶಕರ ನೇತೃತ್ವದ ಸಮಿತಿಯು ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 72 ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 19ಕ್ಕೂ ಹೆಚ್ಚು ಮಾದರಿಗಳಲ್ಲಿ ವಿಷಕಾರಿ ಸೀಸ ಇರುವುದು ಸಂಶೋಧನಾ ವರದಿಯಲ್ಲಿ ಬಹಿರಂಗಗೊಂಡಿದೆ.
ತರಕಾರಿ ಬೆಳೆಯುವ ಮಣ್ಣನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಯಥೇಚ್ಛವಾಗಿ ಕೀಟನಾಶಕ ಅಂಶ ಪತ್ತೆಯಾಗಿದೆ. ಸಂಗ್ರಹವಾದ ಮಣ್ಣು ಕೂಡ ಕಲುಷಿತ ಎಂದು ತಿಳಿದು ಬಂದಿದೆ. ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸೆಲೆನಿಯಮ್ ಪತ್ತೆ ಮತ್ತು ಅಂತರ್ಜಲದ ಮಾದರಿ ಮತ್ತು ಸಂಸ್ಕರಿಸಿದ ನೀರಿನ ಸಂಗ್ರಹವೂ ಮಲಿನವಾಗಿದೆ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ. ಮಿತಿ ಮೀರಿದ ಸೀಸದ ಅಂಶ: ಸೋರೆಕಾಯಿಯಲ್ಲಿ 1.75 ಎಂಜಿ, ಬದನೆಕಾಯಿಯಲ್ಲಿ 1.953 ಎಂಜಿ ಸೀಸ ಪತ್ತೆಯಾಗಿದೆ. ತೊಂಡೆಕಾಯಿಯಲ್ಲಿ ಮಿತಿಗಿಂತ ಸುಮಾರು 18 ಪಟ್ಟು ಹೆಚ್ಚು ಕಂಡುಬಂದಿದೆ. ಚಪ್ಪರದ ಅವರೆಯಲ್ಲಿ 9 ಪಟ್ಟು, ಸೊಪ್ಪು ಮತ್ತು ಎಲೆಕೋಸಿನಲ್ಲಿ 5 ಪಟ್ಟು ಹೆಚ್ಚು ಸೀಸ ಪತ್ತೆಯಾಗಿದೆ. ಸೌತೆಕಾಯಿ, ಹೀರೆಕಾಯಿ, ದಪ್ಪ ಮೆಣಸಿನಕಾಯಿ, ಬೀಟ್‌ರೂಟ್, ಹಾಗಲಕಾಯಿ, ನವಿಲುಕೋಸು ಮತ್ತು ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ ಮಾದರಿಗಳಲ್ಲೂ ಸೀಸದ ಅಂಶ ಮಿತಿ ಮೀರಿದೆ ಎಂದು ಸಮಿತಿಯ ವರದಿಯಲ್ಲಿ ಉಲ್ಲೇಖವಾಗಿದೆ.
ಚಾಕರಸನಹಳ್ಳಿ, ತೂರಂಡಹಳ್ಳಿಯಲ್ಲಿ ಸಂಗ್ರಹ
ಕೋಲಾರ ತಾಲೂಕು ಚಾಕರಸನಹಳ್ಳಿ ಹಾಗೂ ತೂರಂಡಹಳ್ಳಿ ಸಮೀಪ ನೀರು ಮತ್ತು ಕೃಷಿ ಉತ್ಪನ್ನಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಚಾಕರಸನಹಳ್ಳಿಯ ಮಾದರಿಯಲ್ಲಿ ನೈಟ್ರೇಟ್ (ಎನ್‌ಒ3) (75.3 ಎಂಜಿ) ಹಾಗೂ ತೂರಂಡಹಳ್ಳಿ ಮಾದರಿಯಲ್ಲಿ ನೈಟ್ರೇಟ್ (97.4 ಎಂಜಿ) ಮತ್ತು ಟಿಡಿಎಸ್ (2067 ಎಂಜಿ) ಸಂಬಂಧಿತ ನಿಯತಾಂಕ ಒಟ್ಟು ಗಡಸುತನ (906 ಎಂಜಿ) ಸಾಂದ್ರತೆಯು ಕುಡಿಯುವ ನೀರಿನ ಮಿತಿ ಮೀರಿದೆ ಎಂದು ಬಹಿರಂಗ ಪಡಿಸಿದೆ.
ಜನರ ಜತೆ ಸರ್ಕಾರ ಚೆಲ್ಲಾಟ
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೀರಿ ನ ಅಸುರಕ್ಷತೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದು, ಶುದ್ಧ ಕುಡಿಯುವ
ನೀರು ಯೋಜನೆ ಜಾರಿಗೆ ತನ್ನಿ ಎಂದರೆ ಕೊಳಚೆ ನೀರು ಹರಿಸಿ, ಜನರ ಜೀವನದ ಜತೆಗೆ ಆಟವಾಡುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆ‌ರ್.ಆಂಜನೇಯ ರೆಡ್ಡಿ ದೂರಿದರು ಕೆಸಿ ವ್ಯಾಲಿ, ಎಚ್‌ಎನ್ ವ್ಯಾಲಿ ಯೋಜನೆಗಳಿಂದ ಪಂಪ್ ಮಾಡಿ 2 ಹಂತದಲ್ಲಿ ನೀರು ಸಂಸ್ಕರಿಸಿ
ಹರಿಸಲಾಗುತ್ತಿದೆ. ಇದು ಉಪಯೋಗಿಸಲು ಯೋಗ್ಯವಲ್ಲ ಎಂಬುದು ಹಿಂದೆಯೇ ಸಂಶೋಧನಾ ವರದಿಯಲ್ಲಿ ಬೆಳಕಿಗೆ ಬಂದಿತ್ತು. ಆಗ ಸರ್ಕಾರದ ಗಮನಕ್ಕೂ ತರಲಾಗಿತ್ತು. ಆದರೂಸರ್ಕಾರ
ಗಂಭೀರವಾಗಿ ಪರಿಗಣಿಸಲಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ನೀರು ಶುದ್ದೀಕರಣ ಮಾಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ. 2023ರಲ್ಲಿ ರಾಜ್ಯ ಸರ್ಕಾರದ ಎಂಪಿ ಸಂಶೋದನಾ ಸಂಸ್ಥೆಯು ಹಾಪ್‌ಕಾಮ್ಸ್. ಮಾರುಕಟ್ಟೆಗಳಲ್ಲಿ ಮಾದರಿ ಸಂಗ್ರಹಿಸಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.