ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿ.
ಕಿರುವಾರ ಎಸ್.ಸುದರ್ಶನ್ ಕೋಲಾರ
ಗ್ರಾಮಗಳ ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೋಲಾರ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯಲ್ಲಿ ಕಾಯಕ ಗ್ರಾಮ ವಿನೂತನ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಮುಂದಾಗಿದೆ.
ಜಿ.ಪಂ ಸಿಇಒ ಡಾ.ಪ್ರವಿಣ್ ಪಿ.ಬಾಗೇವಾಡಿ ಅವರು, ಜಿಲ್ಲೆಯ 6 ತಾಲೂಕು ವ್ಯಾಪ್ತಿಯಲ್ಲಿ ಹಲವು ಗ್ರಾಮ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿರುವುದು, ಸಮಸ್ಯೆಗಳಿಗೆ ಸ್ಪಂದನೆ ಹೀಗೆ ಹಲವು ವಿಚಾರಗಳ ಕುರಿತು ಪರಿಶೀಲನೆ ನಡೆಸಿದಾಗ ಆಗಬೇಕಾಗಿರುವ ಕೆಲಸ ಇನ್ನು ಎಂಬುದು ಗಮನಕ್ಕೆ ಬಂದಿದೆ.
ಜಿಲ್ಲಾ ಮಟ್ಟ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗಳನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ದತ್ತು ಯೋಜನೆ ಕಾರ್ಯಕ್ರಮ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕಾಯಕ ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಸರ್ಕಾರದ ನಿರ್ದೇಶನದಂತೆ ಅಭಿವೃದ್ಧಿಗೆ ಕ್ರಮವಹಿಸಿದೆ.
ಊರುಗಳಲ್ಲಿ ಏನೇ ಸಮಸ್ಯೆ ಎದುರಾದರು ಮೊದಲು ಜನ ಭೇಟಿ ನೀಡುವುದು ಗ್ರಾಮ ಪಂಚಾಯಿತಿಗಳಿಗೆ. ಸಿಇಒ ಅವರು ಭೇಟಿ ಸಮಸ್ಯೆಯದಲ್ಲೂ ಅನೇಕ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿವೆ. ಸಮಸ್ಯೆಗಳಿಗೆ ಗ್ರಾಮಮಟ್ಟದಲ್ಲೇ ಪರಿಹಾರ ಕಲ್ಪಿಸಲು ಚಿಂತಿಸಿರುವ ಸಿಇಒ ಅಧಿಕಾರಿಗಳಿಗೆ ಗ್ರಾಮಗಳನ್ನು ದತ್ತು ನೀಡಿದ್ದಾರೆ.
ಅಧಿಕಾರಿಗಳು ಪ್ರತಿ 15 ದಿನಕ್ಕೊಮ್ಮೆ ಗ್ರಾಮ ಪಂಚಾಯಿತಿ ಮತ್ತು ಗ್ರಾಮಕ್ಕೆ ಭೇಟಿ ನೀಡಿ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಪರಿಶೀಲನೆ, ಸಾರ್ವಜನಿಕರಿಂದ ಬರುವ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸುವ ಉದ್ದೇಶ ಈ ಕಾಯಕ ಯೋಜನೆಯದಾಗಿದೆ.
* ಕಾಯಕ ಗ್ರಾಮದ ಉದ್ದೇಶಗಳೇನು...?
- ಹಿಂದುಳಿದಿರುವ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಆಯ್ಕೆ ಮಾಡಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಕಾರ್ಯಗತಗೊಳಿಸಲಿದ್ದಾರೆ.
- ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆ, ನಿಯಮಿತವಾಗಿ ಸಭೆಗಳ ಆಯೋಜನೆ, ತೆರಿಗೆ ವಸೂಲಾತಿ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು.
- ಲೆಕ್ಕ ಪತ್ರ ನಿರ್ವಹಣೆ, ಮೂಲ ಸೌಕರ್ಯ ಅಭಿವೃದ್ಧಿ, ಅರಿವು ಕೇಂದ್ರ, ಕೂಸಿನ ಮನೆ. ಶಿಕ್ಷಣ, ಆರೋಗ್ಯ ತೆರಿಗೆ ಸಂಗ್ರಹ. ಯೋಜನಾ ತಯಾರಿಕೆ. ಸೇವಾ ವಿತರಣೆ, ನರೇಗಾ ಯೋಜನೆ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಟಕಗಳ ನಿರ್ವಹಣೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವುದು ಅಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿರುತ್ತದೆ.
ಗ್ರಾಮ ಪಂಚಾಯತಿಗಳ ಕಾರ್ಯಕ್ಷಮತೆ ಆಧಾರದ ಮೇರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಪಂಚತಂತ್ರ ತಂತ್ರಾಂಶದಲ್ಲಿ ಪ್ರತಿ ತಿಂಗಳು ಶ್ರೇಯಾಂಕ ನೀಡುತ್ತದೆ.
ಕಾರ್ಯಕ್ಷಮತೆ ಶ್ರೇಯಾಂಕದಲ್ಲಿ ಹಿಂದುಳಿದಿರುವ ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ದತ್ತು ಪಡೆದುಕೊಳ್ಳಲು ಆಯ್ಕೆ ಮಾಡಿಕೊಳ್ಳುತ್ತಾರೆ.
ಮೊದಲಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉಪ ಕಾರ್ಯದರ್ಶಿ, ಯೋಜನಾ ನಿರ್ದೇಶಕ, ಮುಖ್ಯ ಲೆಕ್ಕಾಧಿಕಾರಿ ಮತ್ತು ಮುಖ್ಯ ಯೋಜನಾಧಿಕಾರಿಗಳು ಜಿಲ್ಲೆಯಲ್ಲಿ ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದೇ ರೀತಿ ತಾಲ್ಲೂಕು ಕಾರ್ಯನಿರ್ವಾಕ ಅಧಿಕಾರಿಗಳು, ಸಹಾಯಕ ನಿರ್ದೇಶಕರಿಗೆ ಹಿಂದುಳಿದ ಗ್ರಾಮಗಳನ್ನು ಆಯ್ಕೆ ಮಾಡಿಕೊಡಲಾಗುವುದು.
* ಪ್ರಗತಿಯಲ್ಲಿ ಹಿಂದುಳಿದರೆ ಕ್ರಮ
ಮೊದಲಿಗೆ ಗ್ರಾಮ ಪಂಚಾಯಿತಿಗಳ ಸ್ಥಿತಿಗತಿಗಳನ್ನು ದಾಖಲೀಕರಿಸಿ, ಮುಂದಿನ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸುವುದು. ಸರ್ಕಾರದ ವಿವಿಧ ಯೋಜನೆಗಳಲ್ಲಿ ದೊರೆಯುವ ಅನುದಾನ ಬಳಕೆ ಮಾಡಿಕೊಂಡು ತ್ವರಿತವಾಗಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರತಿ 15 ದಿನಗಳಿಗೊಮ್ಮೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕಾರ್ಯಕ್ರಮದ ಪ್ರಗತಿ ಕುರಿತು ಮೇಲ್ವಿಚಾರಣೆ ನಡೆಸಲಿದ್ದಾರೆ. ಪ್ರಗತಿ ಕುಂಠಿತವಾಗಿದ್ದರೆ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕೆಲಸ ಆಗಲಿದೆ.
ಕಾಯಕ ಗ್ರಾಮ ಯೋಜನೆಯಿಂದ ಗ್ರಾ.ಪಂಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹಿಂದುಳಿದ ಗ್ರಾ.ಪಂಗಳನ್ನು ಯೋಜನೆಯಡಿಗೆ ಆಯ್ಕೆ ಮಾಡಿ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸಿ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.
- ಡಾ.ಪ್ರವಿಣ್ ಪಿ.ಬಾಗೇವಾಡಿ, ಸಿಇಒ, ಜಿ.ಪಂ, ಕೋಲಾರ,
ಜಿಲ್ಲೆಯಲ್ಲಿ 35 ಹಿಂದುಳಿದ ಪಂಚಾಯತಿಗಳನ್ನು ಅಧಿಕಾರಿಗಳು ದತ್ತು ಪಡೆದುಕೊಂಡಿದ್ದಾರೆ. ಕಾಯಕ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು.
- ಟಿ.ಕೆ.ರಮೇಶ್, ಉಪ ಕಾರ್ಯದರ್ಶಿ, ಜಿ.ಪಂ ಕೋಲಾರ.