ಮಾಜಿ ಸಚಿವರ ಕೊಡುಗೆ ಸ್ಮರಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೋಲಾರ: ‘ನನ್ನ ರಾಜಕೀಯ ಏಳಿಗೆಯಲ್ಲಿ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ಪಾತ್ರ ದೊಡ್ಡದು. ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುತ್ತಿದ್ದ ಜಾಲಪ್ಪಗೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪ್ರೇರಣೆಯಾಗಿದ್ದರು. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ದೇವರಾಜ ಅರಸು, ಆರ್.ಎಲ್. ಜಾಲಪ್ಪ ಮತ್ತು ನಾನು ಶ್ರಮಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ದೇವರಾಜ ಅರಸು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಹಾಗೂ ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ(ಆರ್.ಎಲ್.ಜಾಲಪ್ಪ 101ನೇ ಜನ್ಮದಿನ) ಕಾರ್ಯಕ್ರಮದಲ್ಲಿ ಮಾತನಾಡಿ, ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗದವರಿಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡುವ ನಿರ್ಧಾರ ಕೈಗೊಂಡಾಗ, ಜಾಲಪ್ಪ ವೈದ್ಯಕೀಯ ಕಾಲೇಜು ಆರಂಭಿಸಿದರು. 1986ರಿಂದ ಸಂಸ್ಥೆ ಇಂದಿನ ಎತ್ತರಕ್ಕೆ ಬೆಳೆಯಲು ಜಾಲಪ್ಪ ಅವರ ಕೊಡುಗೆ ಅಪಾರ. ಅವರು ಹಠವಾದಿಯಾಗಿದ್ದು, ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ನಿರಂತರ ಪ್ರಯತ್ನಿಸಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ನನ್ನನ್ನ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ದೇವೇಗೌಡರ ಬಳಿ ಜಾಲಪ್ಪ ಪಟ್ಟು ಹಿಡಿದಿದ್ದರು. ಉಪಮುಖ್ಯಮಂತ್ರಿಯಾಗಲು ಹಾಗೂ ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುವ ಮೂಲಕವೂ ಪ್ರಮುಖಪಾತ್ರ ವಹಿಸಿದ್ದರು. ನಾನು ಮುಖ್ಯಮಂತ್ರಿಯಾದಾಗ ಜಾಲಪ್ಪ ಸಂತಸಪಟ್ಟಿದ್ದರು. ಎಂದು ಗುಣಗಾನ ಮಾಡಿದರು.
ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, 1980ರ ದಶಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಉಗಮದಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಗಳಾದವು. ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಬೆಳವಣಿಗೆಯಿಂದ ವೈದ್ಯಕೀಯ ಶಿಕ್ಷಣದಲ್ಲಿ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ದೇವರಾಜ ಅರಸು ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಚ್. ನಾಗರಾಜ್ ಮಾತನಾಡಿ, ಅಹಿಂದ ಚಳವಳಿ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಿರುವುದು ಸಂಸ್ಥೆಗೆ ಹೆಮ್ಮೆ ಇದೆ. ಸಂಸ್ಥೆಯಲ್ಲಿ 3,200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ದೇಶದಲ್ಲಿ ವೈದ್ಯಕೀಯ ಸೇವೆ ಒದಗಿಸುವ ಸಂಸ್ಥೆಗಳ ಪೈಕಿ 9ನೇ ಸ್ಥಾನದಲ್ಲಿದೆ. ತೆರಿಗೆ ಪಾವತಿಸುತ್ತಿದ್ದರೂ ನಗರಸಭೆಯಿಂದ ನೀರು ಮತ್ತು ಬೀದಿ ದೀಪದಂತಹ ಮೂಲಸೌಕರ್ಯ ದೊರೆಯುತ್ತಿಲ್ಲ ಎಂದರು.
ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ವಿಧಾನಪರಿಷತ್ ಮಾಜಿ ಸದಸ್ಯ ನಸೀರ್ ಅಹ್ಮದ್, ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಮಾಜಿ ಕುಲಪತಿ ರಾಜೇಶ್ ಜಗದಾಳೆ, ಉಪಕುಲಪತಿ ಬಿ. ವೆಂಗಮ್ಮ, ರಿಜಿಸ್ಟ್ರಾರ್ ಮುನಿನಾರಾಯಣ, ಉಪಾಧೀಕ್ಷಕ ಕೆ.ದಿನೇಶ್ ಇದ್ದರು.
ಅಸಮಾನತೆ ನಿವಾರಣೆಗೆ ಒತ್ತು: ಬಸವಣ್ಣ 850 ವರ್ಷದ ಹಿಂದೆಯೇ ‘ಇವ ನಮ್ಮವ, ಇವ ನಮ್ಮವ’ ಎಂಬ ಸಮಾನತೆಯ ಸಂದೇಶ ಸಾರಿದ್ದರೂ, ಇಂದಿಗೂ ಸಮಾಜದಲ್ಲಿ ಎಲ್ಲರನ್ನೂ ನಮ್ಮವರು ಎಂದು ಒಪ್ಪಿಕೊಳ್ಳುವ ಪರಿಸ್ಥಿತಿ ಪೂರ್ಣವಾಗಿ ನಿರ್ಮಾಣವಾಗಿಲ್ಲ. ಬುದ್ಧ, ಬಸವಣ್ಣ ವಿಚಾರಧಾರೆಗಳು ಸಮಾಜದಲ್ಲಿ ಸಮಾನತೆ ಮಹತ್ವ ಸಾರುತ್ತವೆ. ಅಸಮಾನತೆ ನಿವಾರಿಸುವ ಉದ್ದೇಶದಿಂದಲೇ ನನ್ನ ನೇತೃತ್ವದ ಸರ್ಕಾರ ವಿವಿಧ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿತು ಎಂದು ಸಿದ್ದರಾಮಯ್ಯ ಹೇಳಿದರು.
ಪ್ರತಿ ಜಿಲ್ಲೆಗೂ ಕೊಡುಗೆ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಆಶಯಕ್ಕೆ ಒತ್ತು ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಟ್ರಾಮಾ ಕೇಂದ್ರ, ಕ್ಯಾನ್ಸರ್ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಯಿಂದ ವೈದ್ಯಕೀಯ ಸೇವೆಗಳು ವಿಸ್ತರಣೆಯಾಗಿವೆ. ಭಾರತೀಯ ವೈದ್ಯರಿಗೆ ದೇಶ-ವಿದೇಶಗಳಲ್ಲಿ ಗೌರವವಿದ್ದು, ಅದನ್ನು ಉಳಿಸಿಕೊಂಡು ಹೋಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಆರ್. ಪಾಟೀಲ್ ತಿಳಿಸಿದರು.