ಪ್ರಕಟಗೊಂಡಿರುವ ವರದಿ  
ಕೋಲಾರ

ರೈತರ ಹೆಸರಲ್ಲಿ ಸರ್ಕಾರಿ ಭೂಮಿ ಕಬ್ಜಾ?

ಕಿರುವಾರ ಎಸ್. ಸುದರ್ಶನ್ ಕೋಲಾರ
ಮಾಲೂರು ತಾಲೂಕಿನ ಕಸಬಾ ಹೋಬಳಿಯ ಚೆನ್ನಿಗರಾಯಪುರ ಹೆಸರು ಈಗ ಜಿಲ್ಲೆಯಲ್ಲೇ ಹೆಚ್ಚು ಸದ್ದು ಮಾಡುತ್ತಿದೆ.
ಹೌದು. ಸರ್ಕಾರಿ ಭೂಮಿಯನ್ನು ಕೃಷಿಕರಲ್ಲದವರಿಗೆ ಮಂಜೂರು ಮಾಡಿಕೊಟ್ಟಿದ್ದಾರೆ ಎನ್ನಲಾದ ಆದೇಶವೇ ಇದಕ್ಕೆ ಕಾರಣ.
ಮಾಲೂರು ತಾಲೂಕಿನ ಕಸಬಾ ಹೋಬಳಿಯ ಚೆನ್ನಿಗರಾಯಪುರ ಸರ್ವೇ ನಂ.6ರಲ್ಲಿನ ಸರ್ಕಾರಿ ಸರ್ಕಾರದ 81 ಎಕರೆ ಜಮೀನನ್ನು 27 ಮಂದಿಗೆ ತಲಾ 3 ಎಕರೆಯಂತೆ ರೈತರ ಹೆಸರಿಗೆ 1982-83 ರಲ್ಲಿ ಮಂಜೂರು ಮಾಡಲಾಗಿದೆ. ಆದರೆ, ಇದನ್ನು ಭೂ ಮಂಜೂರಾತಿ ಸಮಿತಿಯ ಕೆಲ ಸದಸ್ಯರು ವಿರೋಧಿಸಿ, ಕೋರ್ಟ್ ಮೋರೆ ಹೋಗಿದ್ದರು. ಈ ಸಂಬಂಧ ಸ್ಥಳ ಪರಿಶೀಲಿಸಿದ ಅಂದಿನ ಜಿಲ್ಲಾಧಿಕಾರಿ, ಈ ಭೂಮಿ ಕೃಷಿಗೆ ಯೋಗ್ಯವಲ್ಲ. ಆದ್ದರಿಂದ ಅರಣ್ಯ ಬೆಳೆಸಲು ತಾಲೂಕು ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಲು ಆದೇಶಿಸಿದ್ದರು.
ಆದರೆ, ಇದನ್ನು ಪ್ರಶ್ನಿಸಿ ರೈತ ನರಸಿಂಹಪ್ಪ ಎಂಬುವವರು ಹೈಕೋರ್ಟ್ ಮೋರೆ ಹೋಗಿದ್ದರು, ವಿಚಾರಣೆ ನಡೆದು 2010ರ ನ.30ರಂದು ಮೂರು ತಿಂಗಳೊಳಗಾಗಿ ನಮೂನೆ-53 ಅರ್ಜಿಗಳನ್ನು ಭೂ ಮಂಜೂರಾತಿ ಸಮಿತಿ ಎದುರು ಮಂಡಿಸಬೇಕು ಎಂದು ಸೂಚಿಸಲಾಗಿತ್ತು. ಅಲ್ಲಿ ತಡವಾದ ಹಿನ್ನೆಲೆಯಲ್ಲಿ ಮತ್ತೊಂದು ರಿಟ್ ಸಲ್ಲಿಸಿದ್ದಕ್ಕೆ ಅಧೀನ ಜಿಲ್ಲಾಧಿಕಾರಿ ಸ್ಪಷ್ಟಿಕರಣ ನೀಡಿ, ಜಮೀನಿನಲ್ಲಿ ಯಾರೂ ಸ್ವಾಧೀನದಲ್ಲಿ ಇರುವುದಿಲ್ಲ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದರು. ಬಳಿಕ ಪ್ರಕರಣವನ್ನು ಕೈ ಬಿಡಲಾಗಿತ್ತು.
ಆದರೂ ಇದರ ನಡುವೆ, ಪುನಃ ಈ ಮೊದಲ ರೈತರ ಹೆಸರಿಗೆ ಜಮೀನು ಮಂಜೂರು ಮಾಡಿ 2025ರ ನವೆಂಬರ್ 6ರಂದು ಉಪ ವಿಬಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್. ಅವರು ಆದೇಶ ಮಾಡಿದ್ದು, ಚರ್ಚೆಗೆ ಆಸ್ಪದವಾಗಿದೆ. ಮಂಜೂರಾಗಿರುವುದು ರೈತರಿಗಲ್ಲ ಗುತ್ತಿಗೆದಾರರು, ಉದ್ಯಮಿಗಳ ಕುಟುಂಬ ಸದಸ್ಯರಿಗೆ ಎಂಬ ಆರೋಪ ಶುರುವಾಗಿವೆ.
* ಸರ್ಕಾರದ ವಶಕ್ಕೆ ಪಡೆಯಲಿ
ಈ ಪ್ರಕರಣದಲ್ಲಿ ವಾದಿಯಾಗಿ ಕರ್ನಾಟಕ ಸರ್ಕಾರ, ಪ್ರತಿವಾದಿಗಳಾಗಿ ಚೆನ್ನಿಗರಾಯಪುರದ 51 ಮಂದಿ ಇದ್ದಾರೆ. ಸರ್ಕಾರದ ಪರ ಜಮೀನು ಉಳಿಸಬೇಕಾಗಿರುವ ಅಧಿಕಾರಿಗಳು, ರೈತರ ಹೆಸರಿನಲ್ಲಿ ಬೆಂಗಳೂರಿನ ಗುತ್ತಿಗೆದಾರರು, ಉದ್ದಿಮೆದಾರರ ಪರವಾಗಿ ಆದೇಶಿಸಿದ್ದಾರೆ. ಇದನ್ನು ಮರು ಪರಿಶೀಲನೆ ಮಾಡಿ ಆದೇಶವನ್ನು ವಜಾಗೊಳಿಸುವ ಮೂಲಕ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ವಿವಿಧ ಸಂಘಸಂಸ್ಥೆಗಳ ಮುಖಂಡರು, ಗ್ರಾಮಸ್ಥರ ಒತ್ತಾಯವಾಗಿದೆ.
ಬೆಂಗಳೂರಿಗೆ 50 ಕಿಮೀ ದೂರದಲ್ಲಿರುವ ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ನೂರಾರು ಸಣ್ಣ ಮತ್ತು ದೊಡ್ಡ ಮಟ್ಟದ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಬೆಂಗಳೂರು ಚೆನ್ನೈ ಕಾರಿಡರ್ ಸೇರಿ ಇತರೆ ಹೆದ್ದಾರಿಗಳು ಹಾದು ಹೋಗಿವೆ. ಜತೆಗೆ ವರ್ಷ ಕಳೆಯುತ್ತಿದ್ದಂತೆ ಈ ಭಾಗದಲ್ಲಿ ಭೂಮಿಗೆ ಬೇಡಿಕೆ ಹೆಚ್ಚಾಗಿ ಬಂಗಾರದ ಬೆಲೆ ಬಂದಿದೆ. ಕೆಲ ವರ್ಷಗಳ ಹಿಂದೆ ನಡೆದಿರುವ ಭೂ ಅಕ್ರಮ ಪ್ರಕರಣಗಳು ಮಾಸುವ ಮುನ್ನವೇ ಈಗ ಚೆನ್ನಿಗರಾಯಪುರದ ಪ್ರಕರಣ ಹಲ್‌ಚಲ್ ಎಬ್ಬಿಸಿದೆ.
* ಹಲವರ ಹೆಸರಿನಲ್ಲಿ ಒಬ್ಬರೇ ಸಹಿ?
ರೈತರು ಭೂ ಮಂಜೂರಾತಿ ಸಮಿತಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಗಳಲ್ಲಿ ವಿವಿಧ ಹೆಸರಿನಲ್ಲಿ ಸಹಿ ಮಾಡಿರುವ ವ್ಯಕ್ತಿ ಒಬ್ಬರೇ ಆಗಿದ್ದಾರೆ. ಸಮಿತಿಯಿಂದ ಮಂಜೂರಾತಿ ಪಡೆಯುವ ಹಿಂದೆ ಬೆಂಗಳೂರಿನ ಉದ್ಯಮಿಗಳು, ಗುತ್ತಿಗೆದಾರರು ಹಾಗೂ ಪ್ರಭಾವಿ ರಾಜಕಾರಣಿಗಳು ಇದ್ದು, ಭೂ ದಾಖಲೆಗಳನ್ನೂ ಸೃಷ್ಟಿಸಿಕೊಂಡಿದ್ದಾರೆ. ಜತೆಗೆ ಬಹುತೇಕ ರೈತರಿಂದ ಈಗಾಗಲೇ ಅಗ್ರಿಮೆಂಟ್ ಮಾಡಿಸಿಕೊಂಡಿದ್ದಾರೆ. ಅರ್ಜಿಗಳಿಗೆ ಸಹಿ ಹಾಕಿರುವ ಪತ್ರಗಳನ್ನು ಎಸ್‌ಎ್ಎಲ್‌ಗೆ ಕಳುಹಿಸಿಕೊಟ್ಟು ಸತ್ಯಾಸತ್ಯತೆ ಬೆಳಕಿಗೆ ತರಬೇಕಿದ್ದು, ಆ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು ಮಾಲೂರು ತಹಸೀಲ್ದಾರ್ ರೂಪಾ ಅವರಿಗೆ ದೂರವಾಣಿ ಕರೆ ಮಾಡಿದರೂ, ಸ್ವೀಕರಿಸಿಲ್ಲ.
ಕೋಟ್...
ಚೆನ್ನಿಗರಾಯಪುರ ಜಮೀನು ಸಂಬಂಧದ ಆದೇಶಕ್ಕೆ ವಿರೋಧವಿದೆ. ಈ ಹಿಂದಿನ ಎಸಿ, ಡಿಸಿ ವಜಾ ಮಾಡಿದ್ದನ್ನು ಗಮನಿಸಬೇಕಿತ್ತು. ಜತೆಗೆ ತಳಮಟ್ಟದಿಂದ ಪರಿಶೀಲಿಸಿ ನ್ಯಾಯಾಲಯದ ಗಮನಕ್ಕೆ ತರಬಹುದಿತ್ತು. ಹಿಂದಿನ ಅಧಿಕಾರಿಗಳು ಯಾರೂ ಮಾಡದ ಕೆಲಸ ಮಾಡಿರುವವರ ತಲೆದಂಡ ಖಚಿತ. ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ರೈತರಲ್ಲವರಿಗೆ ಮಂಜೂರು ಮಾಡಿದರೆ ಏನರ್ಥ?.
- ಕೆ.ವೈ.ನಂಜೇಗೌಡ, ಶಾಸಕ, ಮಾಲೂರು
ಕೋಟ್...
ಚೆನ್ನಿಗರಾಯಪುರ ಸರ್ವೇ ನಂಬರ್ ಪೈಕಿ ಜಮೀನನ್ನು ರೈತರ ಹೆಸರಿನಲ್ಲಿ ಭೂಗಳ್ಳರು ಕಬಳಿಸಲು ಯತ್ನಿಸಿದ್ದು, ಸಾಗುವಳಿ ಚೀಟಿಗೆ ಸಹಿ ಮಾಡಿರುವುದು ಒಬ್ಬರೇ ಆಗಿದ್ದಾರೆ. ಇದನ್ನು ಎ್ಎಸ್‌ಎಲ್ ವರದಿಗೆ ಕಳುಹಿಸಿ ಸತ್ಯಾಸತ್ಯತೆ ಅರಿತು, ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು.
- ಎಂ.ಎಸ್.ಶ್ರೀನಿವಾಸ್, ತಾಲೂಕು ಅಧ್ಯಕ್ಷ, ಕರವೇ, ಮಾಲೂರು