ಕೋಲಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎನ್‌ಸಿಒಆರ್‌ಡಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿದರು. ಕನ್ನಿಕಾ ಸಿಕ್ರಿವಾಲ್, ಶಿವಾಂಶು ರಜಪೂತ ಇದ್ದರು.
ಕೋಲಾರ: ಮಾದಕ ವಸ್ತುಗಳ ಸಾಗಣೆ, ಮಾರಾಟ ಹಾಗೂ ಬಳಕೆಯಾಗುವುದನ್ನು ಸಂಪೂರ್ಣ ನಿಯಂತ್ರಿಸುವ ಮೂಲಕ ವ್ಯಸನಮುಕ್ತ ಕೋಲಾರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎನ್‌ಸಿಒಆರ್‌ಡಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಮಾದಕ ವಸ್ತುಗಳಿಗೆ ಯುವ ಸಮುದಾಯ ಹೆಚ್ಚು ಆಕರ್ಷಿತವಾಗುತ್ತಿದೆ. ಬಳಕೆಯಿಂದ ದೇಹದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿ, ಎಚ್ಚರಗೊಳಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮ, ಸ್ಪರ್ಧೆಗಳನ್ನು ನಡೆಸಬೇಕು. ಈಗಾಗಲೇ ಕೆಲವು ವಿದ್ಯಾಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳು ಎಷ್ಟು ಪ್ರಮಾಣದಲ್ಲಿ ಉಪಯುಕ್ತವಾಗುತ್ತಿವೆ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಬೇಕು ಎಂದರು.
ತಂಬಾಕು ಉತ್ಪನ್ನಗಳು ಸೇರಿದಂತೆ ಮಾದಕ ವಸ್ತುಗಳ ದುಶ್ಚಟಗಳಿಗೆ ಕಾರ್ಮಿಕರು ವ್ಯಸನಿಗಳಾಗುತ್ತಿದ್ದಾರೆ. ಮದಕ ವಸ್ತು ವ್ಯಸನಕ್ಕೆ ಗುರಿಯಾಗಿರುವ ಕಾರ್ಮಿಕರ ಮನಪರಿವರ್ತಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಇದಕ್ಕೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.
ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸಿಬ್ಬಂದಿ ಆಗಿಂದಾಗ್ಗೆ ಕೃಷಿ ಜಮೀನುಗಳು, ತೋಟಗಳಿಗೆ ಭೇಟಿ ನೀಡಿ, ಗಾಂಜಾ ಬೆಳೆಗಳನ್ನು ಬೆಳೆಯುತ್ತಿದ್ದಾರಾ ಎಂಬ ಬಗ್ಗೆ ಪರಿಶೀಲಿಸಬೇಕು. ಒಂದು ವೇಳೆ ಕಂಡು ಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಮಾತನಾಡಿ, ನಿಬರ್ಂಧಿತ ಔಷಧಗಳನ್ನು ಜನ ಸಾಮಾನ್ಯರೆಲ್ಲರಿಗೂ ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ಜಿಲ್ಲೆಯ ಔಷಧ ನಿಯಂತ್ರಣ ಅಧಿಕಾರಿಗಳು ಅಂಗಡಿಗಳ ಬಗ್ಗೆ ಎಚ್ಚರವಹಿಸಬೇಕು. ಜಿಲ್ಲೆಯನ್ನು ಮಾದಕ ವ್ಯಸನಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು
ಎಂದರು. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ನಿಯಂತ್ರಣ ತಂಡಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಜಾಗೃತಿ ಮೂಡಿಸಬೇಕು. ಕಾಲೇಜು ವಿದ್ಯಾರ್ಥಿ ನಿಲಯಗಳಲ್ಲಿ ರಜೆಯ ದಿನಗಳಲ್ಲಿ ಮನೆಗಳಿಗೆ ಹೋಗಿ ನಂತರ ಹಾಸ್ಟೆಲ್‌ಗಳಿಗೆ ಮರಳಿ ಬರುವ ಸಂದರ್ಭದಲ್ಲಿ ಅವರು ಯಾವುದಾದರೂ ಮಾದಕ ವಸ್ತುಗಳನ್ನು ಏನಾದರೂ ತೆಗೆದುಕೊಂಡು ಬರುತ್ತಾರಾ ಎಂಬುದನ್ನು ಪರಿಶೀಲನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ, ಆರ್‌ಟಿಒ ಅಧಿಕಾರಿ ವೇಣುಗೋಪಾಲ್, ಜಿಲ್ಲಾ ಕಾರ್ಮಿಕಾಧಿಕಾರಿ ವರಲಕ್ಷ್ಮೀ ಇದ್ದರು.