ಕೋಲಾರ: ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್‌ನಿಂದ (ಟಿಎಎಸ್ಎಲ್) ಏರ್‌ಬಸ್ ಎಚ್ 125 ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ ಸ್ಥಾಪನೆಯಾಗುವ ಸಮಯ ಸನ್ನಿಹಿತವಾಗಿದ್ದು, ಫೆ.17ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ.
ರಾಜನಾಥ್ ಸಿಂಗ್ ಪ್ರವಾಸದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಫೆ.17ರಂದು ಮಧ್ಯಾಹ್ನ 3 ಗಂಟೆಗೆ ವೇಮಗಲ್‌ಗೆ ಭೇಟಿ ನೀಡಿ ಜೋಡಣಾ ಘಟಕ ಉದ್ಘಾಟಿಸಲಿದ್ದಾರೆ.
ರಾಜನಾಥ್‌ಸಿಂಗ್ ಫೆ.16ರಂದು ಬೆಂಗಳೂರಿಗೆ ಆಗಮಿಸಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಿಎಎಸ್‌ಎಲ್‌ನಿಂದ ಈಗಾಗಲೇ ಸೌಲಭ್ಯ ನಿರ್ಮಾಣ ಭರದಿಂದ ಸಾಗುತ್ತಿದೆ.
ಹೆಲಿಕಾಪ್ಟರ್ ಘಟಕ ಪಡೆದುಕೊಳ್ಳಲು ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಗುಜರಾತ್ ರಾಜ್ಯಗಳು ತೀವ್ರ ಪೈಪೋಟಿ ನಡೆಸಿದ್ದವು. ಈ ಎಲ್ಲ ರಾಜ್ಯಗಳ ಪ್ರಯತ್ನವನ್ನು ಹಿಂದಿಕ್ಕುವ ಮೂಲಕ ಕರ್ನಾಟಕ ಯೋಜನೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ವಿಚಾರವನ್ನು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಏರೋಸ್ಪೇಸ್ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಕರ್ನಾಟಕ ಶೇ.65 ಕೊಡುಗೆಯೊಂದಿಗೆ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ ಇಂಥ ನಾಲ್ಕು ಅಸೆಂಬ್ಲಿ ಘಟಕಗಳು ಮಾತ್ರ ಇದ್ದು, ಅದರಲ್ಲಿ ರಾಜ್ಯವೂ ಸ್ಥಾನ ಪಡೆದಿದೆ.
ಭಾರತೀಯ ವಾಯುಸೇನೆಗಾಗಿ ವೇಮಗಲ್ ನಲ್ಲಿ ಎಚ್125 ಹೆಲಿಕಾಪ್ಟರ್ ಫೈನಲ್ ಅಸೆಂಬ್ಲಿ ಲೈನನ್ನು 2 ಕಂಪನಿಗಳು ಸ್ಥಾಪಿಸಲು ಮುಂದಾಗಿವೆ. ಚಾಪರ್‌ಗಳನ್ನು ಇಲ್ಲಿಂದ ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ಫ್ರಾನ್ಸ್, ಅಮೆರಿಕ ಮತ್ತು ಬ್ರೆಜಿಲ್ ಸೇರಿ ಹಲವು ದೇಶಗಳಲ್ಲಿ ಘಟಕಗಳಿದ್ದು, ಭಾರದಲ್ಲಿ ಇದು ನಾಲ್ಕನೇಯ ಘಟಕ ಆಗಿದೆ. ಆರಂಭದಲ್ಲಿ ವಾರ್ಷಿಕ 10 ಹೆಲಿಕಾಪ್ಟರ್ ಉತ್ಪಾದಿಸುವ ಗುರಿ ಹೊಂದಿದೆ. ಮುಂದಿನ ವರ್ಷಗಳಲ್ಲಿ 500 ಲಘು ಹೆಲಿಕಾಪ್ಟರ್ ತಯಾರಿಕೆಗೆ ಬೇಡಿಕೆ ಬರಬಹುದು ಎಂದು ಏರ್‌ಬಸ್ ಅಂದಾಜಿಸಿದೆ.
ಹೆಲಿಕಾಪ್ಟರ್ ಜೋಡಣಾ ಘಟಕ ಸ್ಥಾಪನೆಗೆ ಬೇಕಾದ 50 ಎಕರೆ ಜಾಗ ಸ್ವಾಧೀನಪಡಿಸಿಕೊಂಡು ಕೆಐಡಿಬಿಯಿಂದ ಕಂಪನಿಗೆ ಹಸ್ತಾಂತರ ಮಾಡಲಾಗಿದೆ. ರಾಜ್ಯದ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಭಾಗವಾಗಿ ಭೂಮಿ, ಬಂಡವಾಳ ಹೂಡಿಕೆ, ಸ್ಟಾಂಪ್ ಡ್ಯೂಟಿ, ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ಮತ್ತು ವಾರ್ಷಿಕ ವಹಿವಾಟಿನ ಶೇ.1 ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಧನವನ್ನು ರಾಜ್ಯಕ್ಕೆ ನೀಡಲಾಗುತ್ತದೆ.
ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಆಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್‌ನಿಂದ ಹೆಲಿಕಾಪ್ಟರ್ ಅಂತಿಮ ಘಟಕ ಸ್ಥಾಪನೆ ಮಾಡುವ ಕುರಿತು ಈ ಹಿಂದೆಯೆ ವಿಜಯವಾಣಿ ದಿನಪತ್ರಿಕೆ 'ವೇಮಗಲ್‌ನಲ್ಲಿ ಖಾಸಗಿ ಹೆಲಿಕಾಪ್ಟರ್ ಘಟಕ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸುವ ಮೂಲಕ ಗಮನ ಸೆಳೆದಿತ್ತು.