ಕೋಲಾರ ನಗರದ ನಿವಾಸಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿದರು. ಮುರಳಿಗೌಡ, ರಾಮ್ಪ್ರಸಾದ್ ಇದ್ದರು.
ಕೋಲಾರ: ಎತ್ತಿಹೊಳೆ ಯೋಜನೆಯಿಂದ ಬಯಲುಸೀಮೆ ಜಿಲ್ಲೆ ಕೋಲಾರಕ್ಕೆ ಒಂದುವರೆ ವರ್ಷದಲ್ಲಿ ನೀರು ಹರಿಯುವುದು ಖಚಿತ, ವಿಪಕ್ಷದವರು ನೀಡುವ ಹೇಳಿಕೆಗಳಿಗೆ ಯಾರು ಕಿವಿಗೋಡಬಾರದು ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ, ಜೆಡಿಎಸ್ ಅವರು ಸರ್ಕಾರದ ಮೇಲೆ ಏನೇ ಹೇಳಿಕೊಳ್ಳಲಿ. ನಮಗೆ ಅಭ್ಯಂತರವಿಲ್ಲ, ನಂಗಲಿ ಕೊನೆಗೆ ನೀರು ಹರಿಸುವುದು ಗ್ಯಾರೆಂಟಿ ಎಂದರು.
ಯೋಜನೆಯ ಮೊದಲ ಹಂತದ ಉದ್ಘಾಟನೆಯಾಗಿದೆ. ಇದು ಬಯಲುಸೀಮೆ ಜಿಲ್ಲೆಗಳಿಗಾಗಿ ಜಾರಿಗೆ ಬಂದ ಯೋಜನೆಯಾದರು ಹೆಚ್ಚು ನೀರು ಲಭ್ಯವಾಗುವುದರಿಂದ ತುಮಕೂರಿಗೂ ನೀಡಲಾಗುತ್ತಿದೆ. ದೇವನಹಳ್ಳಿಯ ಕುಂದಾಣ ಬಳಿ ನೀರು ಸಂಗ್ರಹಿಸಿ ಮೂರು ಲೈನ್ಗಳಲ್ಲಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸುವ ಕೆಲಸ ಆಗುತ್ತದೆ ಎಂದು ತಿಳಿಸಿದರು.
ಮಳೆಗಾಲದ 3-4 ತಿಂಗಳಲ್ಲಿ 24 ಟಿಎಂಸಿ ನೀರು ಸಂಗ್ರಹವಾಗಲಿದ್ದು, ರಾಮನಗರ ಜಿಲ್ಲೆಯನ್ನು ಸೇರಿಸಿಕೊಂಡರೂ 16 ಟಿಎಂಸಿ ನೀರು ಇದ್ದರೆ ಈ ಎಲ್ಲ ಜಿಲ್ಲೆಗಳಿಗೂ ಹರಿಸಲು ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಕೆರೆಗಳನ್ನು ಆಯ್ಕೆ ಮಾಡಲಾಗಿದ್ದು, ಕುಡಿಯುವ ನೀರಿಗೆ ಆದ್ಯತೆ ನೀಡಿ ಆನಂತರ ಕೆರೆಗಳಿಗೆ ಹರಿಸಲಾಗುತ್ತದೆ ಎಂದರು.
ಬೆಂಗಳೂರಿನ ಕೋಗಿಲು ಬಡಾವಣೆ ಸಂತ್ರಸ್ಥರ ವಿಚಾರಚಾಗಿ ಸರ್ಕಾರ ಸೂಕ್ತ ತೀಮಾರ್ನ ಕೈಗೊಳ್ಳಲಿದೆ. ಯಾರನ್ನೂ ನಿರಾಶ್ರಿತರನ್ನಾಗಿಸಲು ಸಾಧ್ಯವಾಗುವುದಿಲ್ಲ. ಪ್ರತಿ ತಾಲೂಕಿನಲ್ಲಿ ಕನಿಷ್ಟ 1 ಸಾವಿರ ಮನೆ, ನಿವೇಶನಗಳನ್ನು ತಾರತಮ್ಯವಿಲ್ಲದೆ ಎಲ್ಲ ವರ್ಗದ ಬಡವರಿಗೂ ನೀಡಲಾಗುತ್ತದೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ರಾಜ್ಯ ರಾಜಕೀಯದಲ್ಲಿ ಏನೂ ಬದಲಾವಣೆ ಕಾಣುತ್ತಿಲ್ಲ. ಹೊಸ ವರ್ಷದ ಪ್ರಯುಕ್ತ ಎಂದಿನಂತೆ ದೇವಾಲಯಕ್ಕೆ ಭೇಟಿ ನೀಡಿದ್ದು, ಒಳ್ಳೆಯ ಮಳೆ ಬೆಳೆಯಾಗಲಿ ಎಲ್ಲ ಸಮುದಾಯ ಸುಖ ಶಾಂತಿಯಿಂದ ಬಾಳಲಿ ಎಂದು ಕೆ.ಎಚ್.ಮುನಿಯಪ್ಪ ಆಶಿಸಿದರು.
ಇನ್ನು ಕೆ.ಸಿ.ವೇಣುಗೋಪಾಲ್ ರಾಷ್ಟ್ರ ನಾಯಕರು. ರಾಜ್ಯ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ವಿರೋಧ ಪಕ್ಷದವರು ಆರೋಪ ಮಾಡುವುದು ಸಾಮಾನ್ಯ. ನಮ್ಮ ಸರ್ಕಾರದ ಅವಧಿಯಲ್ಲಿ ಇಡೀ ರಾಜ್ಯದ ಅಭಿವೃದ್ಧಿ ಆಗುತ್ತಿದೆ ಎಂದ ಅವರು, ಕೇರಳ ಚುನಾವಣೆ ವಿಚಾರವಾಗಿ ಅಲ್ಲಿನ ನಮ್ಮ ನಾಯಕರು ಮಾತನಾಡಿದ್ದಾರೆ. ನಾನು ಪ್ರತಿಕ್ರಿಯಿಸುವ ಅವಶ್ಯತೆಕಯಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸೀತಿಹೊಸೂರು ಮುರಳಿಗೌಡ,
ಪಕ್ಷದ ಜಿಲ್ಲಾ ವಕ್ತಾರ ಎಲ್.ಎ.ಮಂಜುನಾಥ್, ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಆರ್.ಮುರಳಿಗೌಡ, ಮುಖಂಡರಾದ ಪ್ರಸಾದ್ಬಾಬು, ರಾಮಪ್ರಸಾದ್, ಜಯದೇವ್, ನಾಗರಾಜ್ ಮುಂತಾದವರಿದ್ದರು.
* ಇಂದಿರಾ ಆಹಾರ ಕಿಟ್ ವಿತರಣೆ ಶೀಘ್ರ
ಭಾರತದ ಯಾವ ಪ್ರಜೆ ಯಾವ ಮೂಲೆಯಲ್ಲಿದ್ದರೂ ಪಡಿತರ ವಿತರಣೆ ನೀಡಲು ಕೇಂದ್ರ ಸರ್ಕಾರ ತೆಗೆದುಕೊಂಡು ತೀಮಾರ್ನದಿಂದ ಅನುಕೂಲವಾಗಲಿದೆ. ರಾಜ್ಯ ಸರ್ಕಾರದಿಂದ ರಾಜ್ಯದ ಪ್ರೋಟಿನ್ಯುಕ್ತ ವಿವಿಧ ಧಾನ್ಯಗಳ ಇಂದಿರಾ ಆಹಾರ ಕಿಟ್ ವಿತರಿಸಲಾಗುತ್ತಿದ್ದು, ಸುಮಾರು 4.5 ಕೋಟಿ ಪಡಿತರದಾರರಿಗೆ ಅನುಕೂಲವಾಗಲಿದೆ ಎಂದು ಎ.ಎಚ್.ಮುನಿಯಪ್ಪ ತಿಳಿಸಿದರು.
* ರೈಲ್ವೆ ಯೋಜನೆಗಳಿಗೆ ಸಂಪೂರ್ಣ ಸಹಕಾರ
ರಾಜ್ಯದಲ್ಲಿ ರೈಲ್ವೆ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡುತ್ತಿದೆ. ಶ್ರೀನಿವಾಸಪುರ ಬಳಿಕ ರೈಲ್ವೇ ಕೋಚ್ ಕಾರ್ಖಾನೆಗೆ 1,200 ಎಕರೆ ಗುರುತಿಸಲಾಗಿತ್ತು, ಡಿ.ವಿ.ಸದಾನಂದಗೌಡರು ರೈಲ್ವೇ ಸಚಿವರಾಗಿದ್ದಾಗಲೂ ಗಮನಕ್ಕೆ ತರಲಾಗಿತ್ತು. ಈಗಲೂ ರಾಜ್ಯ ಸರಕಾರದಿಂದ ಜಾಗ ನೀಡುವುದಕ್ಕೆ ಸಿದ್ಧವಿದ್ದೇವೆ ಎಂದು ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದರು.
ಆದರೆ, ನನ್ನ ಆತ್ಮೀಯ ಸಚಿವ ವಿ.ಸೋಮಣ್ಣ ಯಾವ ಕಾರಣಕ್ಕೆ ನನ್ನ ಅವಧಿಯಲ್ಲಿ ಪ್ರಯತ್ನ ಪಟ್ಟಿಲ್ಲವೆಂದು ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ವೈಟ್ಫೀಲ್ಡ್ನಿಂದ ಕೋಲಾರಕ್ಕೆ ನೇರ ರೈಲು ಸೇರಿದಂತೆ 12 ಯೋಜನೆಗಳನ್ನು ಮಂಜೂರು ಮಾಡಿದ್ದು ನಾನು ಸಚಿವನಾಗಿದ್ದಾಗ. ಈಗ ಅವರು ಕೆಲಸ ಶುರು ಮಾಡಿದ್ದಾರೆ. ಅಗತ್ಯ ಇರುವ ಕಡೆ ಕೇಳಿದರೆ ಯೋಜನೆಗಳಿಗೆ ಈಗಲೂ ಜಾಗ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.