ಶ್ರೀನಿವಾಸಪುರ ಸಮೀಪ ಇರುವ ಮಾವು ಸಂಸ್ಕರಣ ಘಟಕ. 
ಕೋಲಾರ

ಸಂಸ್ಕರಣ ಘಟಕಗಳಿಗೆ ಸರ್ಕಾರಗಳಅಸಹಕಾರ..?

ಕಿರುವಾರ ಎಸ್.ಸುದರ್ಶನ್
ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾವು ಸಂಸ್ಕರಣ ಘಟಕಗಳಿಗೆ ಉತ್ತೇಜನ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿದ್ದು, ಮಾಲೀಕರು ಸಹ ರೈತರಿಂದ ನಿರೀಕ್ಷಿತಮಟ್ಟದ ಮಾವು ಖರೀದಿ ಸಾಧ್ಯವಾಗುತ್ತಿಲ್ಲ.
ನನಗೆ ಕೈಗಾರಿಕೆ ಸ್ಥಾಪನೆ ಮಾಡುವುದು ಎಂದರೆ ಸುಲಭದ ಮಾತಲ್ಲ, ಜಾಗವಿದ್ದರೂ ಸಹ ಯಂತ್ರೋಪಕರಣಗಳನ್ನು ಅಳವಡಿಸಿ ಚಟುವಟಿಕೆ ನಡೆಸಲು ಕೋಟ್ಯಂತರ ರೂ. ಬಂಡವಾಳ ಬೇಕು. ಜತೆಗೆ ಜಾಗವನ್ನು ಭೂ ಪರಿವರ್ತನೆ, ಬೆಸ್ಕಾಂ, ಪರಿಸರ ನಿಯಂತ್ರಣ, ಕೈಗಾರಿಕೆ ಅನುಮತಿ ಕಡ್ಡಾಯವಾಗಿದೆ. ಜತೆಗೆ ಪ್ರತಿ ವರ್ಷ ನವೀಕರಣ ಮಾಡಬೇಕು. ಆದರೆ ಇದನ್ನೆಲ್ಲ ಮಾಡಿಸುವುದೇ ಮಾಲೀಕರಿಗೆ ದೊಡ್ಡ ಸವಾಲಾಗಿದೆ. ಇನ್ನು ಜನಪ್ರತಿನಿಧಿಗಳೇನಾದರೂ ಮಾಲೀಕರ ಪರ ನಿಂತು ಸಹಕಾರ ನೀಡುತ್ತಾರೆ ಎಂದರೆ ಅವರೂ ಉದಾಸೀನ ತೋರುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 9 ಸಂಸ್ಕರಣ ಘಟಕಗಳಿದ್ದು, ಕೇವಲ 2 ಮಾವು ತಿರುಳು ತೆಗೆಯುವ ಕಾರ್ಯ ಪ್ರಾರಂಭಿಸಿದ್ದು, ಹೊರ ರಾಜ್ಯ ಮತ್ತು ದೇಶಗಳಿಂದ ಬಂದ ಬೇಡಿಕೆಗೆ ತಕ್ಕಂತೆ ಪಲ್ಸ್ ತೆಗೆದು ಪೂರೈಕೆ ಮಾಡುತ್ತಿದ್ದಾರೆ. ರೈತ ಪರ ಕಂಪನಿಗಳನ್ನು ಸ್ಥಾಪನೆ ಮಾಡುವುದು ರೈತ ಮಕ್ಕಳೇ ಹೊರತು, ಉದ್ಯಮಿಗಳಲ್ಲ.
ಮಾವು ಸುಗ್ಗಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರಗಳಿಗೆ ಸ್ಥಳೀಯ ಸಂಸ್ಥೆಗಳು, ಇಲಾಖಾಧಿಕಾರಿಗಳು ಸಹಕಾರ ನೀಡಿದ್ದೇ ಆದರೆ ಮಾವು ಬೆಳೆಗಾರರನ್ನು ಸಹ ಸಂಕಷ್ಟದಿಂದ ಪಾರು ಮಾಡಿದಂತಾಗುತ್ತದೆ. ಸಾಲ ಸೌಲಭ್ಯ ದೊರಕಿಸಿದರೆ ಸಾಮರ್ಥದಷ್ಟು ತಿರುಳು ಸಂಸ್ಕೃತಿಸಿ ಇಟ್ಟುಕೊಳ್ಳಲು ಮಾಲೀಕರು ಮುಂದಾಗಲಿದ್ದಾರೆ. ಇನ್ನಾದರು ಅಧಿಕಾರಿಗಳು ರೈತರ ಬಗ್ಗೆ ಕಾಳಜಿ ತೋರಬೇಕು, ಸಂಸ್ಕರಣ ಘಟಕಗಳಿಗೆ ಸಹಕಾರ ನೀಡಲು ಮುಂದಾಗಬೇಕು.
ಕಳೆದ ವರ್ಷಕ್ಕಿಂತ ಈ ವರ್ಷ ಇಳುವರಿ ಕಡಿಮೆಯಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆ ಬೆಳೆಗಾರರಲ್ಲಿತ್ತು. ಆರಂಭದಲ್ಲಿ ಬಾದಾಮಿ, ರಾಜಗಿರ, ರಸಪುರಿ, ದಶೇರಿ, ಮಲ್ಲಿಕಾ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ತೋತಾಪುರಿ ಮಾರುಕಟ್ಟೆಗೆ ಬರಲು ಇನ್ನು ಕೆಲದಿಗಳು ಹೋಗಬೇಕಾಗಿದೆ. ಆನಂತರ ಪೂರ್ಣ ಪ್ರಮಾಣದಲ್ಲಿ ಸಂಸ್ಕರಣ ಘಟಕಗಳು ಕಾರ್ಯನಿರ್ವಹಿಸಿದರೆ ಮಾವಿಗೆ ಬೆಲೆ ದೊರೆಯುವ ಸಾಧ್ಯತೆಯಿದೆ.
ತಿರುಳು ತೆಗೆಯುವುದು ಸುಲಭದ ಕೆಲಸವಲ್ಲ
ಒಂದು ಕೆಜಿ ಮಾವಿನ ತಿರುಳು ತೆಗೆಯಲು ಕನಿಷ್ಠ 2 ರಿಂದ 2.5 ಕೆಜಿ ಮಾವು ಬೇಕು. ಕೆಜಿ ತಿರುಳು ತೆಗೆಯಲು ಪಲ್ಸ್ ತೆಗೆಯಲು ಬಳಸುವುದಿಲ್ಲ. ಅದನ್ನು ಮೊದಲ ಐದು ದಿನ ಉಷ್ಣಾಂಶದಲ್ಲಿ ಇರಿಸಿ ಮಾಗಿಸಬೇಕು. ಆನಂತರ ಅದರಲ್ಲಿ ಕೊಳೆತ ಹಣ್ಣುಗಳನ್ನು ಹೊರ ಹಾಕಿ, ಕನಿಷ್ಠ 17ರಿಂದ 20 ರೂ. ವೆಚ್ಚವಾಗುತ್ತದೆ. ಕೇಂದ್ರಕ್ಕೆ ಮಾವು ಬಂದ ತಕ್ಷಣ ಅದನ್ನು ಚೆನ್ನಾಗಿರುವುದನ್ನು ಮಾತ್ರ ತಿರುಳು ತೆಗೆಯಲು ಬಳಸುತ್ತಾರೆ. ಇದನ್ನೆಲ್ಲ ಮಾಡುವಷ್ಟರಲ್ಲಿ ತೂಕ ಸಹ ಕಡಿಮೆಯಾಗಿರುತ್ತದೆ. ಮಾಲೀಕ ಹಾಕಿರುವ ಬಂಡವಾಳ ದೊರೆಯುವುದು ತೀರಾ ಕಡಿಮೆ. ತೆಗೆದ ತಿರುಳನ್ನು ತೆಗೆದು ಸಂಸ್ಕರಿಸಿಡಲು ಅಗತ್ಯ ಚೀಲವನ್ನು ಇಟಲಿಯಿಂದ ತರಿಸಲಾಗಿದ್ದು, ಒಂದಕ್ಕೆ 600ರೂ ತಗಲುತ್ತದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿದ್ದ ಯುದ್ಧದಿಂದ ಚೀಲಗಳ ಸರಬರಾಜು ಸಹ ತಡವಾಗುತ್ತಿದೆ. ಹೀಗೆ ಮಾಲೀಕರ ಹಲವು ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ಉತ್ಪಾದನೆಯಾಗುವ ಮಾವನ್ನು ಸಂಸ್ಕರಿಸಿ ಯುರೋಪ್, ಇಟಲಿ, ದುಬೈ, ಗಲ್ಫ್ ರಾಷ್ಟ್ರಗಳಿಗೆ ಸರಬರಾಜು ಆಗುತ್ತದೆ.
ವೈಜ್ಞಾನಿಕ ನಿರ್ವಹಣೆಗೆ ಸಲಹೆ ಬಹುತೇಕ ರೈತರು ಬೆಳೆಯನ್ನು ವೈಜ್ಞಾನಿಕವಾಗಿ ಮಾಡುತ್ತಿಲ್ಲ, ಲಭ್ಯವಿರುವ ಇಳುವರಿಯೂ ಗುಣಮಟ್ಟವಿಲ್ಲ ಎಂಬ ಆಪಾದನೆಯಿದೆ. ರಾಮನಗರ, ದೊಡ್ಡಬಳ್ಳಾಪುರ, ಕನಕಪುರದಿಂದ ಬಂದ ಮಾವನ್ನು ತಿರುಳು ತೆಗೆಯಲು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇನ್ನು ಸ್ಥಳೀಯ ಮಾವಿನಲ್ಲಿ ನಾರಿನಾಂಶ ಹೆಚ್ಚಿರುವ ಕಾರಣ ತಿರುಳಿಗೆ ಯೋಗ್ಯವಲ್ಲ. ಇನ್ನು ಇದನ್ನು ಖರೀದಿ ಮಾಡುವವರು ಯಾರು ಎಂಬುದು ಪ್ರಶ್ನೆಯಾಗಿದೆ. ತೋತಾಪುರಿ ಕಟಾವಿಗೆ ಬಂದರೆ ತಿರುಳಿಗೆ ಹೋಗುತ್ತದೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.
ಬಳಕೆ ಪ್ರಮಾಣ ಇಳಿಸಿದ ಜ್ಯೂಸ್ ಕಂಪನಿಗಳು
ಮಾವು ಮಿಶ್ರಿತ ಜ್ಯೂಸ್ ಮಾಡುವ ಕಂಪನಿಗಳವರು ಮಾವು ಪಲ್ಸ್ ಅನ್ನು ಬಳಕೆ ಮಾಡುವದನ್ನು ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಬೇಡಿಕೆ ಕಡಿಮೆಯಾಗಿದೆ. ಉತ್ಪನ್ನ ಪ್ಯಾಕೆಟ್ ಮೇಲೆ ಮಾತ್ರ ಯಾವ ಉತ್ಪನ್ನ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡಿದ್ದೇವೆ ಎಂಬುವುದನ್ನು ತೋರಿಸಿದ್ದಾರೆ. ಅದಕ್ಕೆ ತಕ್ಕಂತೆ ರುಚಿ ಇರುವುದಿಲ್ಲ. ಇದನ್ನು ಎಫ್‌ಎಸ್‌ಎಸ್‌ಎಐ, ಆಹಾರ ಸುರಕ್ಷತಾ ಇಲಾಖೆಯವರು ಪರಿಶೀಲನೆ ಮಾಡಿದರೆ ಸತ್ಕಾಂಶವು ಹೊರ ಬರುತ್ತದೆ. ಹೀಗಾದರೆ ಜ್ಯೂಸ್ ಕಂಪನಿಗಳವರು ಸಮಾನವಾಗಿ ಬಳಕೆ ಮಾಡಲು ಮುಂದಾಗುತ್ತಾರೆ.
ಮಾವು ಉತ್ಪಾದನೆಯಲ್ಲಿ ರಾಜ್ಯ ಮುಂದು
ಜಿಲ್ಲೆಯಲ್ಲಿ ಒಟ್ಟು 44,716.24 ಹೆಕ್ಟೇರ್‌ನಲ್ಲಿ ಮಾವು ಬೆಳೆಯಿದ್ದು, ಸುಮಾರು 25 ರಿಂದ 30 ಲಕ್ಷ ಟನ್ ಇಳುವರಿ ಅಂದಾಜಿಸಲಾಗಿದೆ. ಶ್ರೀನಿವಾಸಪುರ, ಮುಳಬಾಗಿಲು ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮಾವು ಬೆಳೆಯುತ್ತಾರೆ. ಕೋಲಾರ, ಕೆಜಿಎಫ್, ಮಾಲೂರು, ಬಂಗಾರಪೇಟೆ ರೈತರು ಮಾವು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು ಭಾಗದಲ್ಲೂ ಸಹ ಮಾವು ಬೆಳೆಯುವಲ್ಲಿ ರೈತರು ಮುಂಚೂಣಿಯಲ್ಲಿದ್ದಾರೆ.
ರೈತರ ಅನುಕೂಲಕ್ಕಾಗಿ ಸಂಸ್ಕರಣ ಘಟಕವನ್ನು ಸ್ಥಾಪನೆ ಮಾಡಿ ನಡೆಸಲಾಗುತ್ತದೆ. ಅಗತ್ಯ ವಸ್ತುಗಳ ಬೆಲೆಯು ಏರಿಕೆಯಗಿದೆ. ಕೈಗಾರಿಕೆ ನಡೆಸಲು ಅಗತ್ಯವಾಗಿ ಬೇಕಾಗಿರುವ ಸಂಪನ್ಮೂಲವನ್ನು ಸರ್ಕಾರಗಳು ಕಲ್ಪಿಸಲು ಮುಂದಾಗಬೇಕು.
- ಆರ್.ಕೆ.ಮಂಜುನಾಥ್ ರೆಡ್ಡಿ ಮಾಲೀಕ, ಎಸ್ಟೇಟಿಕ್ ಕ್ವಾಲಿಟಿ ವುಡ್ಸ್ ಕಂಪನಿ, ಶ್ರೀನಿವಾಸಪುರ
ಮಾವು ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಬೇಕು ಎಂಬುದು ಬಹುವರ್ಷಗಳ ಬೇಡಿಕೆ. ಈ ವಿಚಾರದಲ್ಲಿ ಸರ್ಕಾರಗಳು ನಿರ್ಲಕ್ಷ್ಯ ವಹಿಸಿಕೊಂಡು ಬರುತ್ತಿವೆ. ಇಂತಹ ಸಮದರ್ಭದಲ್ಲಿ ರೈತರೆ ಮುಂದೆ ಬಂದು ಸಂಸ್ಮರಣ ಘಟಕ ಸ್ಥಾಪನೆ ಮಾಡಿದ್ದು, ಸರ್ಕಾರದ ಸಹಕಾರ ಅಗತ್ಯ.
- ರಮೇಶ್‌ಬಾಬು ಮಾವು ಬೆಳೆಗಾರ, ಶ್ರೀನಿವಾಸಪುರ