ಕೋಲಾರ ನಗರಸಭೆಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಸ್ವಚ್ಚ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚಾಲನೆ ನೀಡಿದರು. ಡಾ.ಪ್ರವಿಣ್ ಪಿ.ಬಾಗೇವಾಡಿ, ನವೀನ್ ಚಂದ್ರ, ಅಂಬಿಕಾ ಇದ್ದರು.
ಕೋಲಾರ: ಕಸ ಮುಕ್ತ ಕೋಲಾರ ನಿರ್ಮಾಣಕ್ಕೆ ನಗರಸಭೆಯಿಂದ ಕ್ರಮವಹಿಸಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು, ಎಲ್ಲೆಂದರಲ್ಲಿ ಕಸ ಹಾಕಿದ್ದು ಕಂಡು ಬಂದರೆ ದಂಡ ತೆರೆಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರ ಸಭೆಯಿಂದ ನಗರಾದ್ಯಂತ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ನಿರೀೆ ಮೀರಿ ಜನ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. ಅದರಂತೆ ಕಸ ಉತ್ಪತ್ತಿಯೂ ಜಾಸ್ತಿಯಾಗುತ್ತಿದ್ದು, ವೈಜ್ಞಾನಿಕ ವಿಲೇವಾರಿ ಮಾಡಬೇಕು ಎಂದರು.
ನಗರವನ್ನು ಪ್ರವೇಶ ಮಾಡುವ ರಸ್ತೆಗಳು ಸುಂದರವಾಗಿ ಕಾಣುತ್ತಿಲ್ಲ. ಸುಮಾರು ವರ್ಷಗಳಿಂದ ಕಟ್ಟಡ ಸೇರಿದಂತೆ ನಾನಾ ತ್ಯಾಜ್ಯವನ್ನು ರಾಶಿರಾಶಿಯಾಗಿ ಹಾಕಲಾಗಿದೆ. ಇಲ್ಲಿಗೆ ಬರುವವರಿಗೆ ನಗರದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುತ್ತಿಲ್ಲ. ನಗರದ ಸೌಂದರ್ಯಕ್ಕೆ ಧಕ್ಕೆ, ಮಾಲಿನ್ಯ ಉಂಟು ಮಾಡುತ್ತಿದೆ ಎಂದು ತಿಳಿಸಿದರು.
ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ನಗರಸಭೆಯ ಪೌರಕಾರ್ಮಿಕರು ಮನೆಮನೆಗೆ ಭೇಟಿ ನೀಡಿ ಸಂಗ್ರಹಿಸುತ್ತಿದ್ದಾರೆ. ಅದನ್ನು ಒಣ, ಹಸಿ ಕಸವನ್ನಾಗಿ ವಿಂಗಡಿಸಿ ತ್ಯಾಜ್ಯ ವಿಲೇವಾರಿ ಟಕದಲ್ಲಿ ಸಂಸ್ಕರಿಸಿ ಗೊಬ್ಬರವನ್ನಾಗಿ ತಯಾರಿಸಲಾಗುತ್ತಿದೆ. ಆ ಮೂಲಕ ಎಲ್ಲಂದರಲ್ಲಿ ನಾಗರಿಕರು ಕಸವನ್ನು ಎಸೆಯುವುದು ನಿಯಂತ್ರಣಕ್ಕೆ ಬಂದಿದ್ದು, ಹೀಗೆ ಸಹಕಾರವನ್ನು ಮುಂದುವರೆಸಬೇಕು ಎಂದು ತಿಳಿಸಿದರು.
ಕಳೆದ ಮೂರು ವಾರದಿಂದ ಯೋಜನೆ ರೂಪಿಸಿ ಕಟ್ಟಡ ತ್ಯಾಜ್ಯವನ್ನು ಹಾಕಲು ಕೆಂದಟ್ಟಿ ಸಮೀಪ ಇರುವ ಕ್ವಾರಿಯನ್ನು ಗುರುತಿಸಿದ್ದು ಅಲ್ಲಿಗೆ ತುಂಬಿಸಲಾಗುತ್ತಿದೆ.
ಮೊದಲ ಹಂತದಲ್ಲಿ ಮನೆಗಳಿಂದ ಉತ್ಪತ್ತಿಯಾಗುವ ಕಸವನ್ನು ಎಲ್ಲಂದರಲ್ಲಿ ಹಾಕುವುದನ್ನು ನಿಲ್ಲಿಸಲಾಗಿದೆ. ಸರ್ಕಾರಿ ಜಾಗ, ಖಾಲಿ ನಿವೇಶನ, ರಸ್ತೆ ಅಕ್ಕಪಕ್ಕ, ಕೆರೆ ಕಟ್ಟೆ, ಹೆದ್ದಾರಿ ಪಕ್ಕದಲ್ಲಿ ಕಟ್ಟಡ ತ್ಯಾಜ್ಯವನ್ನು ಗೊತ್ತಿದ್ದೊ, ಗೊತ್ತಿಲ್ಲದೆಯೋ ರಾಶಿಗಟ್ಟಲೇ ಹಾಕಿರುವುದನ್ನು ತೆರವುಗೊಳಿಸಿ ಸ್ವಚ್ಚ ನಗರ ನಿರ್ಮಾಣಕ್ಕೆ ಮುಂದಾಗಿದ್ದು, ಸಾರ್ವಜನಿಕರು ಸಂಕಲ್ಪ ಮಾಡಿ ಸಹಕಾರ ನೀಡಬೇಕು ಎಂದು ಕೋರಿದರು.
ನಗರಕ್ಕೆ ತನ್ನದೆ ಆದ ಐತಿಹಾಸಿ ಹಿನ್ನಲೆಯಿದೆ. ನಗರಕ್ಕೆ ಹೊರಗಿನಿಂದ ಬಂದವರು ನೋಡಿದರೆ ಸುಂದರವಾಗಿ ಕಾಣಬೇಕು. ಅದಕ್ಕಾಗಿ ಸ್ವಚ್ಚತೆಗೆ ಆಧ್ಯತೆ ನೀಡಲಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳ ನಾಲ್ಕು ತಂಡಗಳನ್ನು ರಚನೆ ಮಾಡಿದ್ದು, ಬಂಗಾರಪೇಟೆ ರಸ್ತೆ, ಅಂತರಗಂಗೆ, ಹೆದ್ದಾರಿ ಪಕ್ಕ, ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ತ್ಯಾಜ್ಯವನ್ನು ಜೆಸಿಬಿ, ಟಿಪ್ಪರ್ ಮೂಲಕ ಕೆಂದಟ್ಟಿ ಸಮೀಪ ಇರುವ ಕ್ವಾರಿಗೆ ತುಂಬಿಸಲಾಗುತ್ತಿದೆ. ಇನ್ನು ಮುಂದೆ ಖಾಲಿ ಜಾಗದಲ್ಲಿ ಕಸ ಹಾಕಿದ್ದು ಕಂಡ ಬಂದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರ ಸ್ವಚ್ಚತೆಗೆ ಆಧ್ಯತೆ ನೀಡಿದ್ದು, ಹಂತಹಂತವಾಗಿ ಕ್ರಮವಹಿಸಿ ಕಸ ವಿಲೇವಾರಿ ಮಾಡುವ ಸುಂದರ ಕೋಲಾರ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಸದಾ ಸಹಕಾರ ನೀಡಬೇಕು.
- ನವೀನ್ ಚಂದ್ರ, ಪೌರಾಯುಕ್ತ, ಕೋಲಾರ.