Expand the mango support price scheme. 
ಕೋಲಾರ

ಮಾವು ಬೆಂಬಲ ಬೆಲೆ ಯೋಜನೆ ವಿಸ್ತರಿಸಿ

ಕೋಲಾರ: ಮಾವು ಬೆಂಬಲ ಬೆಲೆ ಯೋಜನೆ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂದ ಸದಸ್ಯರು ನಗರ ಹೊರವಲಯದ ಜಿಲ್ಲಾಡಳಿತದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ, ಮಾವು ಬೆಳೆಗಾರರ ವಿಚಾರದಲ್ಲಿ ಸರ್ಕಾರಗಳು ತಾರತಮ್ಯ ಮಾಡುತ್ತಿವೆ. ನೆರವು ನೀಡುವುದಾಗಿ ಹೇಳಿ ಕೆಲವೇ ದಿನಗಳಿಗೆ ನೆರವು ಸೀಮಿತಗೊಳಿಸಿ ಮೊಟಕುಗೊಳಿಸಿದ್ದಾರೆ. ಇನ್ನೂ ನೋಂದಣಿಯಾಗದವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಸುಮಾರು 45 ಸಾವಿರ ಹೆಕ್ಟೇರ್​ನಲ್ಲಿ ಮಾವು ಬೆಳೆಯಿದ್ದು, ಅತಿ ಹೆಚ್ಚಾಗಿ ತೋತಾಪುರಿ ತಳಿಯಿದೆ. ಕಳೆದ ವರ್ಷದಂತೆ ಈ ವರ್ಷವು ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದು, ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರ ಘೋಷಿಸಿದ್ದ ಪಿಡಿಪಿಎಸ್​ ಯೋಜನೆಯಡಿ ನೋಂದಣಿ ಪ್ರಕ್ರಿಯೆಯನ್ನು ಕೇವಲ 3 ದಿನದಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಶೇ.90 ರೈತರು ಯೋಜನೆಯಿಂದ ವಂಚಿತರಾಗಿದ್ದಾರೆ. ಪ್ರತಿ ರೈತರಿಗೂ ಯೋಜನೆಯ ಪ್ರಯೋಜನ ಕಲ್ಪಿಸಲು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕೆಜಿಎಫ್​ ತಾಲೂಕು ಅಧ್ಯಕ್ಷ ಅಭಿಲಾಷ್​ ರೆಡ್ಡಿ ಮಾತನಾಡಿ, ತ್ವರಿತವಾಗಿ ನೋಂದಣಿ ಸ್ಥಗಿತಗೊಳಿಸಿದ್ದರಿಂದ ಬಹುತೇಕ ಮಾವು ಬೆಳೆಗಾರರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಜಿಲ್ಲೆಯಲ್ಲಿ ಸುಮಾರು 5,20,000 ಟನ್​ ತೋತಾಪುರಿ ಮಾವು ಬೆಳೆಯಲಾಗುತ್ತಿದ್ದು, ಸರ್ಕಾರ ಕೇವಲ 1,30,000 ಟನ್​ ಖರೀದಿಗೆ ಮಾತ್ರ ಯೋಜನೆ ರೂಪಿಸಿದೆ. ಇದನ್ನು ಹೆಚ್ಚಿಸಬೇಕು ಎಂದು ಪಟ್ಟು ಹಿಡಿದರು.
ಸಮಯಕ್ಕೆ ಸರಿಯಾಗಿ ಮಾವು ಖರೀದಿ ಪ್ರಕ್ರಿಯೆ ನಡೆಯದ ಕಾರಣ ಶೇ.50 ರಿಂದ 60 ಸಲು ಗಿಡಗಳಲ್ಲೇ ಕೊಳೆತು ಹೋಗುತ್ತಿವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಾರುಕಟ್ಟೆಯಲ್ಲಿ ಕೆಜಿಗೆ 3 ರೂ. ಹಾಗೂ ಯೋಜನೆಯಡಿ 4.30 ರೂ. ಸಿಗುತ್ತಿರುವುದು ಸಹ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗುವುದಿಲ್ಲ. ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ನೋಂದಣಿ, ಖರೀದಿ ಅವಧಿ ವಿಸ್ತರಿಸಬೇಕು, ಇಲ್ಲದಿದ್ದರೆ ಮುಂದಿನ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂದ ಉಪಾಧ್ಯಕ್ಷ ಬೈರೆಡ್ಡಿ, ಪ್ರಧಾನ ಕಾರ್ಯದರ್ಶಿ ನವೀನ್​ ಕುಮಾರ್​, ಸಂಚಾಲಕ ಬಿ.ಎ.ಸೈಯದ್​ ಫಾರೂಕ್​, ಜಂಟಿ ಕಾರ್ಯದರ್ಶಿ ಬಿ.ನಾರಾಯಣಸ್ವಾಮಿ, ನಾರಾಯಣಪ್ಪ, ಮಹೇಶ್​, ನಾರಾಯಣಸ್ವಾಮಿ ಇದ್ದರು.
ಅಹೋರಾತ್ರಿ ಧರಣಿ
ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಜಿಲ್ಲಾಡಳಿತ ಯಾವುದೇ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟಗಾರರು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.
ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂದ ಕಾರ್ಯಕರ್ತರು ಜಿಲ್ಲಾಡಳಿತ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.